ಶಿಲ್ಹೆಟ್ (ಬಾಂಗ್ಲಾದೇಶ): ಮೊದಲ ಸೆಮಿಫೈನಲ್ ಏಕಪಕ್ಷೀಯವಾಗಿ ಸಾಗಿದರೆ, ಪಾಕಿಸ್ಥಾನ-ಶ್ರೀಲಂಕಾ ನಡುವಿನ ದ್ವಿತೀಯ ಸೆಮಿ ಸೆಣಸಾಟ ಟಿ20 ಕ್ರಿಕೆಟಿನ ರೋಮಾಂಚನವನ್ನು ತೆರೆದಿರಿಸಿತು. ಪಾಕ್ ಕೈಲಿದ್ದ ಪಂದ್ಯವನ್ನು ಕಳೆದುಕೊಂಡಿತು. ಇನ್ನೇನು ಸೋತೇ ಬಿಟ್ಟಿತು ಎಂಬ ಸ್ಥಿತಿಯಲ್ಲಿದ್ದ ಲಂಕಾ ಅಂತಿಮ ಎಸೆತದಲ್ಲಿ ಒಂದು ರನ್ ರೋಚಕ ಜಯ ಸಾಧಿಸಿತು.
ಶ್ರೀಲಂಕಾ ಗಳಿಸಿದ್ದು 6ಕ್ಕೆ 122 ರನ್ ಮಾತ್ರ. ಪಾಕಿಸ್ಥಾನ 6 ವಿಕೆಟಿಗೆ 121 ರನ್ ಮಾಡಿ ನಂಬಲಾಗದ ಸೋಲನ್ನು ಹೊತ್ತುಕೊಂಡಿತು.
16ನೇ ಓವರ್ ತನಕ ಪಂದ್ಯ ಪಾಕಿಸ್ಥಾನದ ಕೈಯಲ್ಲೇ ಇತ್ತು. ಆಗ 3 ವಿಕೆಟಿಗೆ ಭರ್ತಿ 100 ರನ್ ಆಗಿತ್ತು. ಅನುಭವಿಗಳಾದ ಬಿಸ್ಮಾ ಮರೂಫ್ ಮತ್ತು ನಿದಾ ದಾರ್ ಕ್ರೀಸ್ ಆಕ್ರಮಿಸಿಕೊಂಡಿದ್ದರಿಂದ ಪಾಕ್‌ಗೆ ಗೆಲುವು ಖಂಡಿತ ಅಸಾಧ್ಯವಾಗಿರಲಿಲ್ಲ.
ಅಂತಿಮ 3 ಓವರ್‌ಗಳಲ್ಲಿ 18 ರನ್ ತೆಗೆಯುವ ಸವಾಲು ಎದುರಾಯಿತು. ಈ ಹಂತದಲ್ಲಿ ಸುಗಂಧಿಕಾ ಕುಮಾರಿ ಪಾಕ್ ನಾಯಕಿ ಬಿಸ್ಮಾ (42) ವಿಕೆಟ್ ಕೀಳುವ ಜತೆಗೆ ಕೇವಲ 5 ರನ್ ನೀಡಿ ಪಂದ್ಯಕ್ಕೆ ತಿರುವು ನೀಡಿದರು.
19ನೇ ಓವರ್‌ನ ಮೊದಲ ಎಸೆತದಲ್ಲೇ ಇನೋಕಾ ರಣವೀರ ವಿಕೆಟ್ ಬೇಟೆಯಾಡಿದರು. ಆಯೇಶಾ ನಸೀಮ್ ಪೆವಿಲಿಯನ್ ಸೇರಿಕೊಂಡರು. ಆ ಓವರ್‌ನಲ್ಲಿ ರಣವೀರ ನೀಡಿದ್ದು ನಾಲ್ಕೇ ರನ್. ಹೀಗಾಗಿ ಅಂತಿಮ ಓವರ್‌ನಲ್ಲಿ 9 ರನ್ ತೆಗೆಯುವ ಸವಾಲು ಎದುರಾಯಿತು. ಇಲ್ಲಿ ಅಶಿನಿ ಕುಲಸೂರ್ಯ ಉತ್ತಮ ನಿಯಂತ್ರಣ ಸಾಧಿಸಿದರು. ನಿದಾ ದಾರ್ ಬಿಗ್ ಶಾಟ್ ಬಾರಿಸಲು ವಿಫಲರಾದರು.
ಅಂತಿಮ ಎಸೆತದಲ್ಲಿ 3 ರನ್ ಅಗತ್ಯ ಬಿತ್ತು. ಇಲ್ಲಿ ನಿದಾ ಕ್ಯಾಚ್ ಡ್ರಾಪ್ ಆಯಿತಾದರೂ ಎರಡನೇ ರನ್ ತೆಗೆಯುವ ವೇಳೆ ರನೌಟ್ ಆದರು!
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-6 ವಿಕೆಟಿಗೆ 122 (ಮಾಧವಿ 35, ಅನುಷ್ಕಾ 26, ನಶ್ರಾ ಸಂಧು 17ಕ್ಕೆ 3). ಪಾಕಿಸ್ಥಾನ-6 ವಿಕೆಟಿಗೆ 121 (ಬಿಸ್ಮಾ 42, ನಿದಾ 26, ರಣವೀರ 17ಕ್ಕೆ 2).
ಪಂದ್ಯಶ್ರೇಷ್ಠ: ಇನೋಕಾ ರಣವೀರ.