Advertisement

ಜಿಂಬಾಬ್ವೆಗೂ ಸೋತಿತು ಬಾಬರ್‌ ಪಡೆ

10:11 PM Oct 27, 2022 | Team Udayavani |

ಪರ್ತ್‌: ಭಾರತದೆದುರು ಅನುಭವಿಸಿದ ಸೋಲಿನ ಆಘಾತದಿಂದ ಇನ್ನೂ ಚೇತರಿಸಿಕೊಳ್ಳದ ಪಾಕಿಸ್ಥಾನಕ್ಕೆ ಗಾಯದ ಮೇಲೆ ಬರೆ ಬಿದ್ದಿದೆ. ಜಬರ್ದಸ್ತ್ ಪ್ರದರ್ಶನ ನೀಡಿದ ಜಿಂಬಾಬ್ವೆ ಬಾಬರ್‌ ಪಡೆಯ ಮೇಲೆ ದಂಡೆತ್ತಿ ಹೋಗಿ ಒಂದು ರನ್‌ ರೋಚಕ ಜಯ ದಾಖಲಿಸಿ ಟಿ20 ವಿಶ್ವಕಪ್‌ ಸೂಪರ್‌-12 ಲೆಕ್ಕಾಚಾರವನ್ನು ತೆಲೆಕೆಳಗಾಗಿಸುವ ಸೂಚನೆ ನೀಡಿದೆ.

Advertisement

ಪರ್ತ್‌ನಲ್ಲಿ ಗುರುವಾರ ನಡೆದ ದಿನದ 3ನೇ ಹಾಗೂ ಅಂತಿಮ ಪಂದ್ಯ ಸಣ್ಣ ಮೊತ್ತದ ಮೇಲಾಟವಾಗಿತ್ತು. ಜಿಂಬಾಬ್ವೆಯನ್ನು 130ಕ್ಕೆ ನಿಯಂತ್ರಿಸಿದ ಪಾಕಿಸ್ಥಾನಕ್ಕೆ ಈ ಸಾಮಾನ್ಯ ಮೊತ್ತವನ್ನೂ ಮೀರಿ ನಿಲ್ಲಲಾಗಲಿಲ್ಲ. 8ಕ್ಕೆ 129 ರನ್‌ ಮಾಡಿ ಮತ್ತೆ ಕೊನೆಯ ಎಸೆತದಲ್ಲಿ ಮುಗ್ಗರಿಸಿತು.

ಕೊನೆಯ 2 ಓವರ್‌ಗಳಲ್ಲಿ 22 ರನ್‌, ಅಂತಿಮ ಓವರ್‌ನಲ್ಲಿ 11 ರನ್‌ ಗಳಿಸಬೇಕಾದ ಸವಾಲು ಪಾಕಿಸ್ಥಾನಕ್ಕೆ ಎದುರಾಯಿತು. ಮೊಹಮ್ಮದ್‌ ನವಾಜ್‌, ಮೊಹಮ್ಮದ್‌ ವಾಸಿಮ್‌ ಕ್ರೀಸ್‌ನಲ್ಲಿದ್ದರು. ಎನ್‌ಗರವ ಎಸೆದ 19ನೇ ಓವರ್‌ನಲ್ಲಿ 11 ರನ್‌ ಬಂತು. ಅಂತಿಮ ಓವರ್‌ ಎಸೆಯಲು ಬಂದ ಬ್ರಾಡ್‌ ಇವಾನ್ಸ್‌ ಮೊದಲ 3 ಎಸೆತಗಳಲ್ಲಿ 8 ರನ್‌ ನೀಡಿದರು. ಲೆಕ್ಕಾಚಾರ ಸರಳಗೊಂಡಿತು. 3 ಎಸೆತ, 3 ರನ್‌.

ಆದರೆ ಕೊನೆಯ 3 ಎಸೆತಗಳಲ್ಲಿ ಪಂದ್ಯದ ಚಿತ್ರಣವೇ ಬದಲಾಯಿತು. 4ನೆಯದು ಡಾಟ್‌ ಬಾಲ್‌. 5ನೇ ಎಸೆತಕ್ಕೆ ನವಾಜ್‌ ಔಟ್‌. ಅಂತಿಮ ಎಸೆತ ಎದುರಿಸಿದ ಅಫ್ರಿದಿ 2ನೇ ರನ್‌ ಗಳಿಸುವ ವೇಳೆ ರನೌಟ್‌. ಪಾಕ್‌ ಪಲ್ಟಿ!

ಒಂದು ಗೆಲುವು, ಒಂದು ರದ್ದು ಫ‌ಲಿತಾಂಶದೊಂದಿಗೆ ಜಿಂಬಾಬ್ವೆ ಈಗ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಏರಿದೆ. ಭಾರತ, ದಕ್ಷಿಣ ಆಫ್ರಿಕಾ ಮೊದಲೆರಡು ಸ್ಥಾನದಲ್ಲಿವೆ. ಖಾತೆ ತೆರೆಯದ ಪಾಕ್‌ ಐದಕ್ಕೆ ಕುಸಿದಿದೆ.

Advertisement

ಜಿಂಬಾಬ್ವೆಗೆ ಕಡಿವಾಣ ಹಾಕಿದವರು ಮೊಹಮ್ಮದ್‌ ವಾಸಿಮ್‌ (4 ವಿಕೆಟ್‌) ಮತ್ತು ಶಾದಾಬ್‌ ಖಾನ್‌ (3 ವಿಕೆಟ್‌). ಸೀನ್‌ ವಿಲಿಯಮ್ಸ್‌ ಸರ್ವಾಧಿಕ 31 ರನ್‌ ಹೊಡೆದರು. ಚೇಸಿಂಗ್‌ ವೇಳೆ ಬಾಬರ್‌ ಆಜಂ (4), ಮೊಹಮ್ಮದ್‌ ರಿಜ್ವಾನ್‌ (14), ಇಫ್ತಿಖಾರ್‌ ಅಹ್ಮದ್‌ (5), ಹೈದರ್‌ ಅಲಿ (0) ಅಗ್ಗಕ್ಕೆ ಉರುಳಿದರು. ಶಾನ್‌ ಮಸೂದ್‌ ಹೋರಾಟ ನಡೆಸಿ 44 ರನ್‌ ಮಾಡಿದರು. ಆದರೆ ತಂಡ ಮಾತ್ರ ದಡ ತಲುಪಲಿಲ್ಲ.

ಸಂಕ್ಷಿಪ್ತ ಸ್ಕೋರ್‌ :

ಜಿಂಬಾಬ್ವೆ-8 ವಿಕೆಟಿಗೆ 130 (ವಿಲಿಯಮ್ಸ್‌ 31, ಇರ್ವಿನ್‌ 19, ಇವಾನ್ಸ್‌ 19, ವಾಸಿಮ್‌ 24ಕ್ಕೆ 4, ಶಾದಾಬ್‌ ಖಾನ್‌ 23ಕ್ಕೆ 3). ಪಾಕಿಸ್ಥಾನ-8 ವಿಕೆಟಿಗೆ 129 (ಮಸೂದ್‌ 44, ನವಾಜ್‌ 22, ಶಾದಾಬ್‌ 17, ರಝ 25ಕ್ಕೆ 3, ಇವಾನ್ಸ್‌ 25ಕ್ಕೆ 2).

ಪಂದ್ಯಶ್ರೇಷ್ಠ: ಸಿಕಂದರ್‌ ರಝ.

Advertisement

Udayavani is now on Telegram. Click here to join our channel and stay updated with the latest news.

Next