Advertisement

ಪಾಕಿಸ್ತಾನದಲ್ಲಿ ಈಗ ಉರಿ..ಉರಿ!

01:32 AM Jun 18, 2019 | Sriram |

ಮ್ಯಾಂಚೆಸ್ಟರ್‌: ಪ್ರತಿ ವಿಶ್ವಕಪ್‌ ಕ್ರಿಕೆಟ್ ಬಂದಾಗಲೆಲ್ಲ ಅಭಿಮಾನಿಗಳೆಲ್ಲ ಅತ್ಯಂತ ಕುತೂಹಲದಿಂದ ಕಾದು ಕುಳಿತು ನೋಡುವ ಪಂದ್ಯ ಭಾರತ -ಪಾಕಿಸ್ತಾನ ಬದ್ಧ ವೈರಿಗಳ ನಡುವಿನ ಕದನ.

Advertisement

ಭಾನುವಾರದ ಪಂದ್ಯವೂ ಹಾಗೆಯ, ಕ್ರಿಕೆಟ್ ಆಸಕ್ತಿ ಇಲ್ಲ ಎನ್ನುವವರು ಕೂಡ ಟೀವಿ ಮುಂದೆ ಕುಳಿತುಕೊಂಡಿದ್ದರು. ಎರಡು ದೇಶಗಳ ಕೋಟ್ಯಂತರ ಅಭಿಮಾನಿಗಳ ಕ್ರಿಕೆಟ್ ಹಪಹಪಿಯನ್ನು ಮ್ಯಾಂಚೆಸ್ಟರ್‌ ಪಂದ್ಯ ಹೆಚ್ಚಿಸಿತ್ತು. ಹೃದಯ ಬಡಿತ ಜೋರಾಗಿಸಿತ್ತು. ಕೊನೆಗೂ ಈ ಪಂದ್ಯದಲ್ಲಿ ಭಾರತ ಯಶಸ್ವಿಯಾಗಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿತು. ವಿಶ್ವಕಪ್‌ನಲ್ಲಿ ಪಾಕ್‌ ವಿರುದ್ಧ ಅಜೇಯ ಎನ್ನುವುದನ್ನು ವಿಶ್ವಕ್ಕೆ ಮತ್ತೂಮ್ಮೆ ಸಾರಿ ಹೇಳಿತು. ಭಾರತೀಯರೆಲ್ಲರು ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು. ಆದರೆ ಪಾಕಿಸ್ತಾನದಲ್ಲಿ ಈಗ ಪರಿಸ್ಥಿತಿ ಬೆಂಕಿಯಂತಾಗಿದೆ. ಪಾಕ್‌ ಮಾಧ್ಯಮಗಳು, ಅಭಿಮಾನಿಗಳು ಸಫ‌ರ್ರಾಜ್‌ ನೇತೃತ್ವದ ವಿಶ್ವಕಪ್‌ ತಂಡದ ವಿರುದ್ಧ ಕಿಡಿಕಾರಿದ್ದಾರೆ. ಮಾಜಿ ಕ್ರಿಕೆಟಿಗರಿಂದ ಹಿಡಿದು ಎಲ್ಲರು ಆಟಗಾರರ ಕಳಪೆ ಪ್ರದರ್ಶನದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಫೇಸ್‌ಬುಕ್‌, ಟ್ವೀಟರ್‌, ಇನ್ಸಾrಗ್ರಾಮ್‌ ಎಲ್ಲದರಲ್ಲೂ ಹೀನಾಯ ಸೋಲನ್ನು ಬಲವಾಗಿ ಖಂಡಿಸಲಾಗಿದೆ.

ಮಾಧ್ಯಮಗಳ ಎದುರು ಸಫ‌ರ್ರಾಜ್‌ ಕಕ್ಕಾಬಿಕ್ಕಿ: ಸಫ‌ರ್ರಾಜ್‌ ಸೋಲಿನ ಬಳಿಕ ಪತ್ರಿಕಾಗೋಷ್ಠಿಗೆ ಆಗಮಿಸಿದರು. ಮುಖದಲ್ಲಿ ನಗುವಿರಲಿಲ್ಲ. ಒಂದು ರೀತಿಯ ಆತಂಕ ಕಾಡುತ್ತಲೇ ಇತ್ತು. ಅವರು ಏನು ಅಂದುಕೊಂಡಿದ್ದರೋ ಅದು ನಿಜವಾಯಿತು. ಪಾಕ್‌ ಪತ್ರಕರ್ತರ ಆಕ್ರೋಶದ ಪ್ರಶ್ನೆಗಳು, ಒಂದರ ಹಿಂದೆ ಒಂದರಂತೆ ಬಾಣದಂತೆ ತೂರಿ ಬಂದವು. ಒಂದು ಕ್ಷಣ ಸಫ‌ರ್ರಾಜ್‌ ಯಾವ ರೀತಿಯಲ್ಲಿ ಇದಕ್ಕೆ ಉತ್ತರಿಸುವುದು ಎಂದು ತಿಳಿಯದೇ ಗಲಿಬಿಲಿಗೊಳಗಾದರು. ಸ್ವಲ್ಪ ಧೈರ್ಯ ತೆಗೆದುಕೊಂಡು ಎಲ್ಲವನ್ನು ಸಮಾಧಾನದಿಂದ ಆಲಿಸಿದ ಬಳಿಕ ಮಾತನಾಡಿದರು.

‘ನಾವು ಒಟ್ಟಾರೆ ಬ್ಯಾಟಿಂಗ್‌, ಬೌಲಿಂಗ್‌, ಫೀಲ್ಡಿಂಗ್‌ನಲ್ಲಿ ಕೈ ಸುಟ್ಟುಕೊಂಡೆವು. 1990ರಲ್ಲಿ ಅವಧಿಯಲ್ಲಿ ನಮ್ಮ ತಂಡ ಭಾರತಕ್ಕಿಂತ ಬಲಿಷ್ಠವಾಗಿತ್ತು. ಈಗ ಕಾಲ ಬದಲಾಗಿದೆ. ಅಂದು ಭಾರತವಿದ್ದ ಪರಿಸ್ಥಿತಿಯಲ್ಲಿ ಇಂದು ನಾವಿದ್ದೇವೆ ಎಂದು ಸಣ್ಣ ಧ್ವನಿಯಲ್ಲಿ ಉತ್ತರಿಸಿದರು. ಮುಂದುವರಿದು ಮಾತನಾಡಿದ ಅವರು ‘ಗೆಲ್ಲಲೇಬೇಕು ಎನ್ನುವ ಒತ್ತಡ ಒಂದು ಕಡೆ ಇತ್ತು. ತೀವ್ರ ಒತ್ತಡದಿಂದಲೋ ಏನೋ ನಾವು ಚೆನ್ನಾಗಿ ನಿಭಾಯಿಸಲಿಲ್ಲ. ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ನಡೆಸಿದ ನಿರ್ಧಾರ ಸರಿಯಾಗಿತ್ತು. ಆದರೆ ಪಿಚ್‌ನ ಕಂಡೀಷನ್‌ ಅರಿತು ಬೌಲಿಂಗ್‌ ಮಾಡುವಲ್ಲಿ ನಮ್ಮ ಬೌಲರ್‌ಗಳು ವಿಫ‌ಲರಾದರು. ಜತೆಗೆ ರೋಹಿತ್‌ ಶರ್ಮ ಎರಡು ಸುಲಭ ರನೌಟ್ ಮಾಡುವುದನ್ನು ಕೈಚೆಲ್ಲಿದೆವು. ಈ ಕಳಪೆ ಫೀಲ್ಡಿಂಗ್‌ ಕೂಡ ನಮಗೆ ದುಭಾರಿಯಾಗಿ ಪರಿಣಮಿಸಿತು ಎಂದರು.

ಪಾಕ್‌ ಡ್ರೆಸ್ಸಿಂಗ್‌ ಕೊಠಡಿ ಒಡೆದ ಮನೆ?: ಪಾಕ್‌ ಸೋಲುತ್ತಿದ್ದಂತೆ ಅನುಮಾನದ ಹುತ್ತವೂ ಕಣ್ಣಿಗೆ ಕಾಣುತ್ತಿದೆ. ಸಫ‌ರ್ರಾಜ್‌ ಅಹ್ಮದ್‌ ನಾಯಕತ್ವದ ಬಗ್ಗೆ ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಕೆಲವು ಹಿರಿಯ ಆಟಗಾರರಿಗೆ ಅಸಮಾಧಾನ ಇದೆ ಎನ್ನಲಾಗಿದೆ. ಇದನ್ನು ಪಾಕ್‌ ನಾಯಕ ತಳ್ಳಿ ಹಾಕಿದ್ದಾರೆ. ನಾವೆಲ್ಲರು ಹೊಂದಾಣಿಕೆಯಿಂದ ಇದ್ದೇವೆ. ನಮ್ಮಲ್ಲಿ ಒಳಜಗಳವಿಲ್ಲ. ತಪ್ಪುಗಳನ್ನು ತಿದ್ದಿಕೊಳ್ಳುತ್ತೇವೆ, ಮುಂದಿನ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಮತ್ತೆ ಸಿಡಿಯುವ ನಿರೀಕ್ಷೆ ಇದೆ ಎಂದು ಸಫ‌ರ್ರಾಜ್‌ ತಿಳಿಸಿದರು.

ಸಫ‌ರ್ರಾಜ್‌ ಮಿದುಳಿಲ್ಲದ ನಾಯಕ: ಅಖ್ತರ್‌
ಮ್ಯಾಂಚೆಸ್ಟರ್‌ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯದಲ್ಲಿ ಪಾಕ್‌ 89 ರನ್‌ಗಳ ಸೋಲನುಭವಿಸಿದ ಬಳಿಕ ಪ್ರತಿಕ್ರಿಯಿಸಿದ ಪಾಕ್‌ನ ಮಾಜಿ ಬೌಲರ್‌ ಶೋಯಿಬ್‌ ಅಖ್ತರ್‌ ನಾಯಕ ಸಫ‌ರ್ರಾಜ್‌ ಖಾನ್‌ ನಾಯಕತ್ವಕ್ಕೆ ಯೋಗ್ಯನೇ ಅಲ್ಲ ಎಂದು ಕಿಡಿಕಾರಿದ್ದಾರೆ. ಈ ತಪ್ಪಿನೊಂದಿಗೆ ಪಾಕ್‌ 2017ರ ಚಾಂಪಿಯನ್‌ ಟ್ರೋಫಿಯ ಫೈನಲ್ನಲ್ಲಿ ಮಾಡಿದ ಎಡವಟ್ಟು ಇಲ್ಲಿ ಮತ್ತೆ ಪುನಾರಾವರ್ತನೆಯಾದಂತಾಯಿತು ಎಂದರು. ಇನ್ನೂ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಳ್ಳುತ್ತಿದ್ದರೆ ಪಂದ್ಯವನ್ನು ಗೆಲ್ಲುವ ಸಾಧ್ಯತೆ ಇತ್ತು. ಮಳೆಯಿಂದ ನಮಗೆ ಲಾಭವಾಗುತ್ತಿತ್ತು. ಆದರೆ ಸಫ‌ರ್ರಾಜ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡು ಎಡವಟ್ಟು ಮಾಡಿಕೊಂಡಿದ್ದಾರೆ. ಒಂದು ಚೂರು ತಲೆ ಉಪಯೋಗಿಸುವಂತಹ ಸಾಮರ್ಥ್ಯ ಆತನಲ್ಲಿಲ್ಲ. ಆಟದ ವೇಳೆಯೂ ಸರಿಯಾದ ನಿರ್ಧಾರವನ್ನು ಕೈಗೊಳ್ಳುವಲ್ಲಿ ವಿಫ‌ಲರಾಗಿದ್ದಾರೆ. ಒಟ್ಟಾರೆಯಾಗಿ ಆತ ನಾಯಕನ ಸ್ಥಾನಕ್ಕೆ ಯೋಗ್ಯನಲ್ಲ, ಆತನಿಂದ ಯಾವುದೇ ಒತ್ತಡವನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಅಖ್ತರ್‌ ಕಿಡಿ ಕಾರಿದ್ದಾರೆ.
ಪಾಕ್‌ ಸೋಲಿಗೆ ‘ಬರ್ಗರ್‌’ ಕಾರಣ?
ಪಾಕಿಸ್ತಾನ ತಂಡದ ಸೋಲಿಗೆ ‘ಬರ್ಗರ್‌’ ಕಾರಣವಾಯಿತೆ?, ಪಾಕ್‌ ಅಭಿಮಾನಿಗಳನ್ನ ಕೇಳಿದರೆ ಹೌದು ಎನ್ನುವ ಉತ್ತರ ಸಿಗುತ್ತದೆ. ಭಾರತ-ಪಾಕ್‌ ನಡುವಿನ ಮಹತ್ವದ ಪಂದ್ಯಕ್ಕೂ ಒಂದು ದಿನ ಮೊದಲು ಪಾಕ್‌ ಕ್ರಿಕೆಟಿಗರು ಇಂಗ್ಲೆಂಡ್‌ನ‌ ಕೆಫೆಯೊಂದರಲ್ಲಿ ಭರ್ಜರಿ ಪಾರ್ಟಿ ಮಾಡಿದ್ದಾರೆ. ಈ ವೇಳೆ ತಮಗೆ ಬೇಕಾದಷ್ಟು ‘ಬರ್ಗರ್‌’ ತಿಂದಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ. ಬೆನ್ನ ಹಿಂದೆಯೇ ಪಾಕ್‌ ಸೋತಿದ್ದರಿಂದ ವಿಡಿಯೊಗೆ ಹೆಚ್ಚು ಮಹತ್ವ ಬಂದಿದೆ. ಪಾಕ್‌ ಸೋಲಿಗೆ ‘ಬರ್ಗರ್‌’ ಕಾರಣ ಎಂದು ಅಭಿಮಾನಿಗಳು ಅಣಕವಾಡಿದ್ದಾರೆ.
ಮೌಕಾ…ಜಾಹೀರಾತಿಗೆ ಪಾಕ್‌ ಆಕ್ಷೇಪ
ಭಾರತ ವಿಶ್ವಕಪ್‌ನ ಎಲ್ಲ ಮುಖಾಮುಖೀಯಲ್ಲಿ ಪಾಕಿಸ್ತಾನದ ಮೇಲೆ ಸವಾರಿ ಮಾಡಿದೆ. ಇದರ ಸ್ಫೂರ್ತಿಯಿಂದಲೇ ಜಾಹೀರಾತು ರಚಿಸಿದ ಕೂಟದ ನೇರ ಪ್ರಸಾರಕ ಚಾನೆಲ್ ಇದೀಗ ಇಕ್ಕಟ್ಟಿಗೆ ಸಿಲುಕಿದೆ. ಮೌಕಾ…ಮೌಕಾ ಜಾಹೀರಾತಿನಿಂದ ಪಾಕ್‌ಗೆ ಅವಮಾನ ಮಾಡಲಾಗಿದೆ ಎನ್ನುವ ದೂರನ್ನು ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ)ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸಲ್ಲಿಸಿದೆ.
ಪಾಕ್‌ ಆಟಗಾರರ ಪಾರ್ಟಿಯಲ್ಲಿ ಟೆನಿಸ್‌ ತಾರೆ ಸಾನಿಯಾ
ಪಾಕಿಸ್ತಾನ ಆಟಗಾರರು ಶಿಶಾ ಕೆಫೆಯಲ್ಲಿ ಶನಿವಾರ ರಾತ್ರಿ ನಡೆಸಿದ ಪಾರ್ಟಿಯಲ್ಲಿ ಭಾರತ ಖ್ಯಾತ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಕಾಣಿಸಿಕೊಂಡಿದ್ದಾರೆ. ಇವರ ಪತಿ ಪಾಕ್‌ ತಂಡದ ಅನುಭವಿ ಆಟಗಾರ ಶೋಯಿಬ್‌ ಮಲಿಕ್‌ ಕೂಡ ಜತೆಗಿದ್ದರು. ಕೆಫೆನ ಟೇಬಲ್ವೊಂದರ ಎದುರು ಪಾಕ್‌ ಕ್ರಿಕೆಟಿಗರು ಹರಟುತ್ತಾ ಇರುವ ವಿಡಿಯೋ, ಫೋಟೊ ವೈರಲ್ ಆಗಿದೆ. ಇದರಲ್ಲಿ ಸಾನಿಯಾ ಅವರನ್ನೂ ಕಾಣಬಹುದಾಗಿದೆ. ಪಾಕ್‌ ಪಾರ್ಟಿಯಲ್ಲಿ ಸಾನಿಯಾ ಭಾಗಿಯಾಗಿರುವುದನ್ನು ಭಾರತ ಅಭಿಮಾನಿಗಳು ಖಂಡಿಸಿದ್ದಾರೆ.
Advertisement
Advertisement

Udayavani is now on Telegram. Click here to join our channel and stay updated with the latest news.

Next