ಜಮ್ಮು : ಜಮ್ಮುವಿನ ಆರ್ನಿಯಾ ವಲಯದಲ್ಲಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್ ಸೈನಿಕರು ಅಪ್ರಚೋದಿತವಾಗಿ ನಡೆಸಿದ ಗುಂಡಿನ ದಾಳಿಗೆ ಬಿಎಸ್‌ಎಫ್ ಯೋಧ ಹುತಾತ್ಮನಾಗಿರುವ ಘಟನೆ ಇಂದು ಶುಕ್ರವಾರ ನಸುಕಿನ ವೇಳೆ ನಡೆದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡುವ ಒಂದು ದಿನ ಮೊದಲು ಈ ಘಟನೆ ನಡೆದಿರುವುದು ಗಮನಾರ್ಹವಾಗಿದೆ.
ಹಿರಿಯ ಬಿಎಸ್‌ಎಫ್ ಅಧಿಕಾರಿಯೋರ್ವರು ಹೇಳಿರುವ ಪ್ರಕಾರ ಮೇ 16 ಮತ್ತು 17ರ ನಡುವಿನ ರಾತ್ರಿ ಅಂತಾರಾಷ್ಟ್ರೀಯ ಗಡಿಯಲ್ಲಿನ ಹೀರಾನಗರ ಪ್ರದೇಶದಲ್ಲಿ ಪಾಕ್ ಸೈನಿಕರು ಗುಂಡಿನ ದಾಳಿ ನಡೆಸಿದ್ದಾರೆ. ಪಾಕ್ ಸೈನಿಕರು ನಡೆಸಿರುವ ಈ ಗುಂಡಿನ ದಾಳಿಯಲ್ಲಿ ಬಿಎಸ್‌ಎಫ್ ಜವಾನ, ಕಾನ್‌ಸ್ಟೆಬಲ್ ಸೀತಾರಾಮ ಉಪಾಧ್ಯಾಯ ಮೃತಪಟ್ಟರು. ಇವರು 1991ರಲ್ಲಿ ಜಾರ್ಖಂಡ್‌ನ ಗಿರೀಧ್‌ನಲ್ಲಿ ಜನಿಸಿದ್ದರು. 2011ರಲ್ಲಿ ಸೇನಾ ಸಮವಸ್ತ್ರಧಾರಿಯಾದ ಅವರು ಮೂರು ವರ್ಷದ ಪುತ್ರಿ ಮತ್ತು 1 ವರ್ಷದ ಪುತ್ರನನ್ನು ಅಗಲಿದ್ದಾರೆ.
ಮುಂದುವರಿದ ಪಾಕ್ ಗುಂಡಿನ ದಾಳಿಗೆ ಬೆಳಗ್ಗೆ ಸುಮಾರು 6.45 ರ ಹೊತ್ತಿಗೆ ಆರ್ನಿಯಾ ವಲಯದ ಪಿತ್ತಲ್ ಎಂಬಲ್ಲಿನ ಸೇನಾ ಹೊರಠಾಣೆಯ ಬಿಎಸ್‌ಎಫ್ ಜವಾನನೊಬ್ಬ ಗಾಯಗೊಂಡ. ಆತನನ್ನು ಕೂಡಲೇ ಸೇನಾ ಆಸ್ಪತ್ರೆಗೆ, ಒಯ್ಯಲಾಗಿ ಆತ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿರುವುದಾಗಿ ಮೂಲಗಳು ತಿಳಿಸಿವೆ.
ಆರ್ನಿಯಾ ವಲಯದ ತ್ರೇವಾ ಗ್ರಾಮದಲ್ಲಿ ಇಬ್ಬರು ಮತ್ತು ಆರ್ ಎಸ್ ಪುರ ವಲಯದ ಸಾಮ್‌ಕಾ ಹಾಗೂ ಜೋರ್ಧಾ ದಲ್ಲಿ ತಲಾ ಒಬ್ಬರು ಸೇರಿದಂತೆ ಒಟ್ಟು ನಾಲ್ಕು ಪೌರರು ಪಾಕ್ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಮುನ್ನೆಚ್ಚರಿಕೆಯ ಕ್ರಮವಾಗಿ ಅಂತಾರಾಷ್ಟ್ರೀಯ ಗಡಿಯಿಂದ ಮೂರು ಕಿ.ಮೀ. ಫಾಸಲೆಯಲ್ಲಿರುವ ಎಲ್ಲ ಸರಕಾರಿ ಮತ್ತು ಖಾಸಗಿ ಶಾಲೆಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಮುಂದಿನ ಆದೇಶದ ತನಕ ಸುಮಾರು 200 ಶಾಲೆಗಳನ್ನು ಮುಚ್ಚುವಂತೆಯೂ ಆದೇಶಿಸಲಾಗಿದೆ.