ನವದೆಹಲಿ: ಗೂಢಚಾರ ಮತ್ತು ಭಯೋತ್ಪಾದನೆ ಆರೋಪದಡಿ ಪಾಕಿಸ್ತಾನದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತದ ಮಾಜಿ ನೌಕಾಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನದ ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಐಸಿಜೆ(ಅಂತಾರಾಷ್ಟ್ರೀಯ ನ್ಯಾಯಾಲಯ) ಅಧ್ಯಕ್ಷ ಅಬ್ದುಲ್ಲ್ಯಾ ಕ್ವಾವಿ ಯೂಸೂಫ್ ವಿಶ್ವಸಂಸ್ಥೆಗೆ ತಿಳಿಸಿದ್ದಾರೆ.
ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಗೆ ನೀಡಿರುವ ವರದಿಯಲ್ಲಿ, ವಿಯೆನ್ನಾ ಒಪ್ಪಂದದ ಪ್ರಕಾರ ಆರ್ಟಿಕಲ್ 36 ಅನ್ನು ಪಾಕಿಸ್ತಾನ ಉಲ್ಲಂಘಿಸಿರುವುದು ಕೋರ್ಟ್ ಪತ್ತೆ ಹಚ್ಚಿದ್ದು, ಈ ಪ್ರಕರಣದಲ್ಲಿ ಸೂಕ್ತವಾದ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ವಿವರಿಸಿದೆ.
ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ವಿಯೆನ್ನಾ ಒಪ್ಪಂದದ ಆಧಾರದಲ್ಲಿ ಕೋರ್ಟ್ 2019ರ ಜುಲೈ 17ರಂದು ತೀರ್ಪನ್ನು ನೀಡಿತ್ತು. ಪಾಕಿಸ್ತಾನದಲ್ಲಿ ಗೂಢಚಾರಿ ಕೆಲಸ ಮಾಡಿರುವುದಾಗಿ ಆರೋಪಿಸಿ ಭಾರತೀಯ ಪ್ರಜೆ ಕುಲಭೂಷಣ್ ಸುಧೀರ್ ಜಾಧವ್ ಪ್ರಕರಣದ ಬಗ್ಗೆ ಭಾರತ ಐಸಿಜೆ ಮೆಟ್ಟಿಲೇರಿತ್ತು.
2017ರ ಏಪ್ರಿಲ್ ನಲ್ಲಿ ಪಾಕಿಸ್ತಾನದ ಮಿಲಿಟರಿ ಕೋರ್ಟ್ ಜಾಧವ್ ಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಏತನ್ಮಧ್ಯೆ ತಮ್ಮ ದೇಶದ ಪ್ರಜೆ ಜಾಧವ್ ಅವರಿಗೆ ಪಾಕಿಸ್ತಾನ ರಾಜತಾಂತ್ರಿಕ ನೆರವು ನೀಡಲು ನಿರಾಕರಿಸಿದ್ದು, ಇದು 1963ರ ವಿಯೆನ್ನಾ ಒಪ್ಪಂದ ಉಲ್ಲಂಘನೆ ಎಂದು ಭಾರತ ಆರೋಪಿಸಿತ್ತು.
ಈ ನಿಟ್ಟಿನಲ್ಲಿ ಜಾಧವ್ ಗೆ ವಿಧಿಸಿರುವ ಶಿಕ್ಷೆ ಮತ್ತು ಆರೋಪದ ಬಗ್ಗೆ ಕರಾರುವಕ್ಕಾಗಿ ಪುನರ್ ವಿಮರ್ಶೆ ನಡೆಸಬೇಕೆಂದು ಮನವಿ ಮಾಡಿಕೊಳ್ಳುವುದಾಗಿ ಯೂಸೂಫ್ ತಿಳಿಸಿದ್ದು, ಈ ಪ್ರಕರಣದ ಬಗ್ಗೆ ಹಲವಾರು ಇನ್ನಿತರ ವಿಚಾರಗಳ ಬಗ್ಗೆಯೂ ಗಮನ ಸೆಳೆದಿದ್ದಾರೆ ಎಂದು ವರದಿ ವಿವರಿಸಿದೆ.