ಉಧಮಪುರ: ಕಣಿವೆ ರಾಜ್ಯದ ಯುವಕರನ್ನು ತಮ್ಮತ್ತ ಆಕರ್ಷಿಸಿ ಆ ಮೂಲಕ ಅವರನ್ನು ಉಗ್ರಗಾಮಿ ಸಂಘಟನೆಗಳ ಪರ ಒಲವು ಮೂಡುವಂತೆ ಮಾಡಲು ಪಾಕಿಸ್ಥಾನ ಸೇನೆಯು ಇದೀಗ ಹೊಸ ತಂತ್ರವೊಂದನ್ನು ಅನುಸರಿಸುತ್ತಿರುವ ಆಘಾತಕಾರಿ ಅಂಶ ಭಾರತೀಯ ಸೇನಾ ಮೂಲಗಳಿಂದ ಹೊರಬಿದ್ದಿದೆ. ಪಾಕಿಸ್ಥಾನ ಸೇನೆಯು ಸಾಮಾಜಿಕ ಜಾಲತಾಣಗಳ ಮೂಲಕ ಜಮ್ಮು-ಕಾಶ್ಮೀರ ರಾಜ್ಯದ ಯುವಕರನ್ನು ಉಗ್ರ ಚಟುವಟಿಕೆಗಳಿಗೆ ಸೆಳೆಯಲು ಪ್ಲ್ಯಾನ್ ಮಾಡಿದೆಯಂತೆ.
ಈ ಎಚ್ಚರಿಕೆಯನ್ನು ನಾರ್ಥನ್ ಕಮಾಂಡ್ ನ ಜನರಲ್ ಆಫಿಸರ್ ಕಮಾಂಡಿಂಗ್ ಚೀಫ್ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಅವರು ನೀಡಿದ್ದಾರೆ. ಈ ಮೂಲಕ ಉಗ್ರಗಾಮಿ ಚಟುವಟಿಕೆಗಳಿಗೆ ಇನ್ನಷ್ಟು ಹೈಟೆಕ್ ಸ್ಪರ್ಶ ನೀಡುವ ಮತ್ತು ಆ ಮೂಲಕ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಳು ಅಬಾಧಿತವಾಗಿರುವಂತೆ ನೋಡಿಕೊಳ್ಳುವುದು ಪಾಕ್ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಕಣಿವೆ ರಾಜ್ಯದಲ್ಲಿ ತನ್ನ ಪರ ಅಭಿಪ್ರಾಯ ರೂಪಿಸಿಕೊಳ್ಳುವುದು ಮತ್ತು ಆ ಮೂಲಕ ಶಾಂತಿ ಸುವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಕದಡುವ ಸಂಚನ್ನು ಪಾಕಿಸ್ಥಾನ ಇತ್ತೀಚಿನ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ರೂಪಿಸುತ್ತಿದೆ ಎಂದು ಸಿಂಗ್ ಅವರು ತಿಳಿಸಿದರು. ಇಷ್ಟು ಮಾತ್ರವಲ್ಲದೇ ಉಗ್ರ ಚಟುವಟಿಕೆಗಳ ಪರ ಒಲವಿರುವ ಯುವಕರನ್ನು ತನ್ನತ್ತ ಸೆಳೆಯಲು ಪಾಕಿಸ್ಥಾನಕ್ಕೆ ಇದೇ ಸಾಮಾಜಿಕ ಜಾಲತಾಣಗಳು ಪ್ರಬಲ ಮಾಧ್ಯಮವಾಗಿದೆ ಎಂಬ ಅಂಶವನ್ನು ಭಾರತೀಯ ಸೇನೆ ಗಂಭೀರವಾಗಿ ಪರಿಗಣಿಸಿದೆ ಎಂದವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಪಾಕಿಸ್ಥಾನ ನಡೆಸುತ್ತಿರುವ ಈ ಡಿಜಿಟಲ್ ಭಯೋತ್ಪಾದನಾ ತಂತ್ರಕ್ಕೆ ಪ್ರತಿಯಾಗಿ ಭಾರತೀಯ ಸೇನೆಯೂ ಪ್ರತಿ ತಂತ್ರವನ್ನು ಇತ್ತೀಚಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಹೆಣೆಯುತ್ತಿದೆ ಮತ್ತು ಈ ಮೂಲಕ ಜಮ್ಮು-ಕಾಶ್ಮೀರದ ಯುವಕರು ಉಗ್ರಗಾಮಿ ಚಟುವಟಿಕೆಗಳತ್ತ ಆಕರ್ಷಿತರಾಗದಂತೆ ಮಾಡುವ ಪ್ರಯತ್ನಗಳನ್ನು ಸೇನೆ ಮಾಡುತ್ತಿದೆ ಎಂದು ಅವರು ಹೇಳಿದರು. ಉಗ್ರ ನೆಲೆಗಳ ಮೇಲೆ ಇನ್ನೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಲಾಗುವ ಸಾಧ್ಯತೆಗಳಿವೆ ಎಂದು ಲೆಫ್ಟಿನಂಟ್ ಜನರಲ್ ರಣಬಿರ್ ಸಿಂಗ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು.