ಹೊಸದಿಲ್ಲಿ : “ಪಾಕಿಸ್ಥಾನ ನನ್ನನ್ನು ಇಲ್ಲಿ ಚೆನ್ನಾಗಿ ನೋಡಿಕೊಂಡಿದೆ; ಹಾಗೆಯೇ ನನ್ನನ್ನು ಭೇಟಿಯಾಗಲು ಇಲ್ಲಿಗೆ ಬಂದ ನನ್ನ ಕುಟುಂಬವನ್ನು ಕೂಡ ಚೆನ್ನಾಗಿ ನೋಡಿಕೊಂಡಿದೆ; ಭಾರತೀಯ ಅಧಿಕಾರಿ ಮಾತ್ರ ಭೇಟಿಯ ಉದ್ದಕ್ಕೂ ನನ್ನ ತಾಯಿಯ ಮೇಲೆ ಎಗರಾಡುತ್ತಾ ಆಕೆಯನ್ನು ಅವಮಾನಿಸಿದ್ದಾನೆ’ ಎಂದು ಇಸ್ಲಾಮಾಬಾದ್‌ನಲ್ಲಿ ಈಚೆಗೆ ಬಿಗಿ ಭದ್ರತೆಯಲ್ಲಿ ತನ್ನ ತಾಯಿ ಮತ್ತು ಪತ್ನಿಯನ್ನು ಭೇಟಿಯಾಗಿದ್ದ, ಪಾಕ್ ಜೈಲಿನಲ್ಲಿ ಮರಣ ದಂಡನೆಯ ಶಿಕ್ಷೆಯನ್ನು ಎದುರು ನೋಡುತ್ತಿರುವ, ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ 45ರ ಹರೆಯದ ಕುಲಭೂಷಣ್ ಜಾಧವ್ ಹೇಳುವ ಹೊಸ ವಿಡಿಯೋ ಚಿತ್ರಿಕೆಯೊಂದನ್ನು ಪಾಕ್ ವಿದೇಶ ಸಚಿವಾಲಯ ಬಿಡುಗಡೆಗೊಳಿಸಿದೆ.
ಕುಲಭೂಷಣ್ ಜಾಧವ್ ಅವರ ತಾಯಿ ಆವಂತಿ ಮತ್ತು ಪತ್ನಿ ಚೇತನ್ ಕುಲ್ ಅವರನ್ನು ಭದ್ರತೆಯ ನೆಪದಲ್ಲಿ ವಿಧವೆಯರಂತೆ ಕಾಣಿಸುವ ಮೂಲಕ ಗಾಜಿನ ಪರದೆಯ ಆಚೆಯಿಂದ ಇಂಟರ್ ಕಾಮ್ ಮೂಲಕ ಭೇಟಿಯನ್ನು ಏರ್ಪಡಿಸಿದ್ದ ಪಾಕಿಸ್ಥಾನದ ಈ ಅವಮಾನವೀಯ ಕೃತ್ಯ ಮಾನವ ಹಕ್ಕುಗಳ ಸಾರಾಸಗಟು ಉಲ್ಲಂಘನೆಯಾಗಿದೆ ಎಂದು ಭಾರತ ಭಾರೀ ಪ್ರತಿಭಟನೆ ವ್ಯಕ್ತಪಡಿಸಿದ ಬಳಿಕ ಪಾಕಿಸ್ಥಾನ ತನ್ನನ್ನು ಸಮರ್ಥಿಸಿಕೊಳ್ಳಲು ತನಗೆ ಬೇಕಾದ ರೀತಿಯಲ್ಲಿ ಬಲವಂತದಿಂದ ಚಿತ್ರಿಸಿಕೊಂಡ ಈ ಹೊಸ ವಿಡಿಯೋವನ್ನು ಬಿಡುಗಡೆ ಮಾಡಿರುವುದು ಇನ್ನಷ್ಟು ವಿವಾದಕ್ಕೆ ಕಾರಣವಾಗಿದೆ.
ಈ ವಿಡಿಯೋದಲ್ಲಿ ಜಾಧವ್ ಹೇಳುತ್ತಾರೆ: ನಾನಿಲ್ಲಿ ಆರೋಗ್ಯದಿಂದ ಇದ್ದೇನೆ; ನನ್ನನ್ನು ಪಾಕಿಸ್ಥಾನ ಚೆನ್ನಾಗಿ ನೋಡಿಕೊಳ್ಳುತ್ತಿದೆ; ನಾನು ಆರೋಗ್ಯದಿಂದ ಇರುವುದನ್ನು ಕಂಡು ತಾಯಿ, ಪತ್ನಿ ಸಂತಸಗೊಂಡಿದ್ದಾರೆ. ಅವರ ಜತೆಗೆ ಇದ್ದ ಒಬ್ಬ ಭಾರತೀಯ ದೂತಾವಾಸದ ಅಧಿಕಾರಿ ನನ್ನ ತಾಯಿಯ ಮೇಲೆ ಎಗರಾಡುವುದನ್ನು ಕಂಡೆ; ಆತ ನನ್ನ ತಾಯಿ ಮತ್ತು ಪತ್ನಿಯನ್ನು ಅವಮಾನಿಸುತ್ತಿದ್ದ. ಇಸ್ಲಾಮಾಬಾದ್ ವರೆಗಿನ ವಿಮಾನ ಪ್ರಯಾಣದ ವೇಳೆಯಲ್ಲೂ ಆತ ಇದೇ ರೀತಿ ನಡೆದುಕೊಂಡು ಅವರಿಬ್ಬರನ್ನೂ ಅವಮಾನಿಸಿದ್ದ ಎಂದು ಗೊತ್ತಾಯಿತು’.
22 ತಿಂಗಳ ಬಳಿಕ ತನ್ನ ತಾಯಿ ಮತ್ತು ಪತ್ನಿಯೊಡನೆ ಜಾಧವ್ ನಡೆಸಿದ್ದ ಭೇಟಿಯನ್ನು ಪಾಕಿಸ್ಥಾನ ತನ್ನ ಪರ ಪ್ರಚಾರಾಸ್ತ್ರವಾಗಿ ಬಳಸಿಕೊಂಡಿತೆಂದು ಭಾರತ ಅಂದೇ ತನ್ನ ಪ್ರತಿಭಟನೆ ವ್ಯಕ್ತಪಡಿಸಿತ್ತು.
ಪಾಕ್ ಮಾಧ್ಯಮದವರಿಗೆ ಜಾಧವ್ ಪತ್ನಿ ಮತ್ತು ತಾಯಿಯ ಬಳಿ ಬಾರದಂತೆ ಅವರ ಭದ್ರತೆ ಮತ್ತು ಸುರಕ್ಷೆಯನ್ನು ನೋಡಿಕೊಳ್ಳಬೇಕು ಎಂಬ ಭಾರತದ ಮನವಿಯನ್ನು ಕೂಡ ಪಾಕ್ ಉಲ್ಲಂಘನೆ ಮಾಡಿತ್ತು. ಜಾಧವ್ ಪತ್ನಿಯ ಶೂನಲ್ಲಿ ಅದೇನೋ ಸಂದೇಹಾಸ್ಪದ ಲೋಹದ ವಸ್ತು ಇದೆ; ಅದು ರಹಸ್ಯ ಕ್ಯಾಮೆರಾ ಕೂಡ ಇರಬಹುದು ಎಂಬ ಗುಮಾನಿಯಲ್ಲಿ ಪಾಕಿಸ್ಥಾನ ಆಕೆಯ ಶೂ ವನ್ನು ಕೂಡ ಕಸಿದು ಕೊಂಡಿತ್ತು.