ಇಸ್ಲಾಮಾಬಾದ್: ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನದಲ್ಲಿ ಈದ್ ಅಲ್ ಅಧಾ ಹಬ್ಬದ ಆಚರಣೆ ನಡುವೆ ಪ್ರತಿ ಕಿಲೋ ಟೊಮೆಟೋ ಬೆಲೆ 200 ರೂಪಾಯಿಗೆ ಏರಿಕೆಯಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಇದನ್ನೂ ಓದಿ:ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ
ಪಾಕ್ ನ ಪ್ರಾಂತೀಯ ಸರ್ಕಾರ ಒಂದು ಕೆಜಿ ಟೊಮೆಟೋ ಬೆಲೆಯನ್ನು 100 ರೂಪಾಯಿ ಎಂದು ನಿಗದಿಪಡಿಸಿತ್ತು. ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಪ್ರಕಾರ, ಪೇಶಾವರದಲ್ಲಿ ಜಿಲ್ಲೆಯಿಂದ ಟೊಮೆಟೋ ಸಾಗಾಟ ಮಾಡದಂತೆ ನಿಷೇಧ ಹೇರಿ 144 ಸೆಕ್ಷನ್ ಜಾರಿಗೊಳಿಸಿರುವುದಾಗಿ ತಿಳಿಸಿದೆ.
ಪೇಶಾವರದಿಂದ ಟೊಮೆಟೋ, ಹಣ್ಣು, ಹಂಪಲು ಸರಬರಾಜು ಆಗದ ಪರಿಣಾಮ ಲಾಹೋರ್ ನಲ್ಲಿ ತರಕಾರಿ, ಹಣ್ಣು ಮಾರಾಟಗಾರರು ದುಪ್ಪಟ್ಟು ಬೆಲೆ ಏರಿಕೆ ಮಾಡಿರುವುದಾಗಿ ವರದಿ ಹೇಳಿದೆ.
ಮಾರುಕಟ್ಟೆಯಲ್ಲಿ ಟೊಮೆಟೋ, ಹಣ್ಣು, ತರಕಾರಿ ಬೆಲೆ ಏರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಪಾಕ್ ಸರ್ಕಾರ ಕಸರತ್ತು ನಡೆಸಿದ್ದರೂ ಕೂಡಾ ಬೆಲೆ ಗಗನಕ್ಕೇರುತ್ತಿದೆ. ಲಿಂಬೆ ಹಣ್ಣಿನ ಬೆಲೆ ಪ್ರತಿ ಕೆಜಿಗೆ 480 ರೂಪಾಯಿಯಾಗಿದೆ.
ಒಂದು ಕೆಜಿ ಕೋಳಿ ಮಾಂಸದ ಬೆಲೆ 494 ರೂಪಾಯಿ ಎಂದು ಸರ್ಕಾರ ಬೆಲೆ ನಿಗದಿಪಡಿಸಿದೆ. ಆದರೆ ಮಾರ್ಕೆಟ್ ನಲ್ಲಿ ಒಂದು ಕೆಜಿ ಕೋಳಿ ಮಾಂಸದ ಬೆಲೆ 700 ರೂಪಾಯಿ, ಬಟಾಟೆ ಬೆಲೆ ಕೆಜಿಗೆ 100ರೂಪಾಯಿ ದಾಟಿರುವುದಾಗಿ ವರದಿ ತಿಳಿಸಿದೆ.
ಒಂದು ಕೆಜಿ ಈರುಳ್ಳಿ ಬೆಲೆ 100 ರೂಪಾಯಿ ಎಂದು ಪಾಕ್ ಸರ್ಕಾರ ನಿಗದಿಪಡಿಸಿದೆ. ಆದರೆ ಮಾರ್ಕೆಟ್ ನಲ್ಲಿ ಒಂದು ಕೆಜಿ ಈರುಳ್ಳಿ ಬೆಲೆ 150 ರೂಪಾಯಿಗೆ ಏರಿಕೆಯಾಗಿದೆ. ಸಾರ್ವಜನಿಕರು ಹಣದುಬ್ಬರದಿಂದ ತತ್ತರಿಸಿ ಹೋಗಿದ್ದು, ಪಾಕ್ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿರುವುದಾಗಿ ಜನರು ಶಪಿಸುತ್ತಿರುವುದಾಗಿ ವರದಿ ತಿಳಿಸಿದೆ.