ಇಸ್ಲಾಮಾಬಾದ್: ಆರ್ಥಿಕ ದಿವಾಳಿಯಂಚಿನಲ್ಲಿರುವ ಪಾಕಿಸ್ತಾನ ಈಗ ಐಎಂಎಫ್ ಗೆ (ಅಂತಾರಾಷ್ಟ್ರೀಯ ಹಣಕಾಸು ನಿಧಿ) ಸಂಪೂರ್ಣ ಶರಣಾಗಲೇಬೇಕಾದ ಸ್ಥಿತಿಗೆ ಮುಟ್ಟಿದೆ.
ಚುನಾವಣೆ ಹಿನ್ನೆಲೆಯಲ್ಲಿ ಐಎಂಎಫ್ ಷರತ್ತುಗಳಿಗೆ ತಲೆಬಾಗಲು ನಿರಾಕರಿಸುತ್ತಿದ್ದ ಅಲ್ಲಿನ ಸರ್ಕಾರ 170 ಬಿಲಿಯನ್ ರೂಪಾಯಿಗಳಷ್ಟು ಹಣ ಸಂಗ್ರಹವಾಗುವ ಹಲವು ಹೊಸ ತೆರಿಗೆಗಳನ್ನು ವಿಧಿಸಲು ಸಜ್ಜಾಗಿದೆ.
ಈಗಾಗಲೇ ವಿಪರೀತ ಬೆಲೆಗಳಿಂದ ತತ್ತರಿಸಿರುವ ಪಾಕ್ ಜನತೆ, ಮತ್ತೊಂದು ಹಂತದ ಭೀಕರ ಸ್ಥಿತಿಗೆ ಸಜ್ಜಾಗುವುದು ಅನಿವಾರ್ಯವಾಗಿದೆ.
ಕಳೆದ ಶುಕ್ರವಾರವಷ್ಟೇ ಪಾಕ್-ಐಎಂಎಫ್ ನಡುವೆ ಇನ್ನೊಂದು ಸುತ್ತಿನ ಮಾತುಕತೆ ಮುಗಿದಿತ್ತು.
ಆಗ 2019ರಲ್ಲಿ ಒಪ್ಪಂದವಾಗಿದ್ದಂತೆ 6 ಬಿಲಿಯನ್ ಡಾಲರ್‌ಗಳಲ್ಲಿ 1.1 ಬಿಲಿಯನ್ ಡಾಲರ್‌ಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕಾದರೆ, ಹಲವು ಹೊಸ ತೆರಿಗೆಗಳನ್ನು ಹಾಕಬೇಕು ಎಂದು ಐಎಂಎಫ್ ಹೇಳಿತ್ತು. ಇದು ಸಾಧ್ಯವೇ ಇಲ್ಲ ಎಂದು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ನಿರಾಕರಿಸಿದ್ದರು.