Advertisement

ಷರೀಫ್ ವಿರುದ್ಧ ಸೇನೆಯ ಸಂಚು: ಪಾಕ್‌ ಇಂಟರ್‌ನೆಟ್‌ನಲ್ಲಿ ಅದೇ ಚರ್ಚೆ

03:51 PM Jul 17, 2017 | udayavani editorial |

ಹೊಸದಿಲ್ಲಿ : ಪಾಕಿಸ್ಥಾನದಲ್ಲಿ  1947ರ ಬಳಿಕ ಇದೀಗ ನಾಲ್ಕನೇ ಬಾರಿಗೆ ಸೇನೆಯು ಪ್ರಜಾಸತ್ತೆಯ ಕತ್ತು ಹಿಸುಕಿ ಅಧಿಕಾರಕ್ಕೆ ಬರುವ ಸಂಚು ನಡೆಸುತ್ತಿದೆಯೇ ?

Advertisement

ಪಾಕಿಸ್ಥಾನದ ಸಾಮಾಜಿಕ ಜಾಲ ತಾಣದ ತುಂಬೆಲ್ಲ ಈಗ ಇದೇ ಚರ್ಚೆಯ, ವಿವಾದದ ಸಂಗತಿಯಾಗಿದೆ.  ನವಾಜ್‌ ಷರೀಫ್ ಅವರ ಸರಕಾರವನ್ನು ಪದಚ್ಯುತಗೊಳಿಸಿ ಸೇನೆ ಅಧಿಕಾರಕ್ಕೆ  ಬರುವ ಸಾಧ್ಯತೆಯನ್ನು ತೀವ್ರವಾಗಿ ಶಂಕಿಸಲಾಗುತ್ತಿದೆ.  ಪನಾಮಾಗೇಟ್‌ ಹಗರಣದಲ್ಲಿ ಪಾಕ್‌ ಪ್ರಧಾನಿ ನವಾಜ್‌ ಷರೀಫ್ ಮತ್ತು ಅವರ ಕುಟುಂಬ ಸದಸ್ಯರು ಸುಪ್ರೀಂ ಕೋರ್ಟಿನಿಂದ ವಿಚಾರಣೆಗೆ ಗುರಿಯಾಗಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. 

ಷರೀಫ್ ಮತ್ತು ಅವರ ಕುಟುಂಬ ಸದಸ್ಯರು ವಿದೇಶದಲ್ಲಿ ಅಪಾರ ಪ್ರಮಾಣದ ಸಂಪತ್ತು ಕೂಡಿ ಹಾಕಿರುವುದು ಪನಾಮಾ ಗೇಟ್‌ ಹಗರಣದಿಂದ ಬಯಲಾಗಿದ್ದು ಈ ಕುರಿತು ಸುಪ್ರೀಂ ಕೋರ್ಟ್‌ ನೇಮಿಸಿದ್ದ ಆರು ಸದಸ್ಯರ ಜಂಟಿ ತನಿಖಾ ತಂಡ ತನ್ನ ಅಂತಿಮ ವರದಿ ಸಲ್ಲಿಸಿದೆ. ಅದನ್ನು ಆಧರಿಸಿ ಸುಪ್ರೀಂ ಕೋರ್ಟ್‌ ಇಂದಿನಿಂದ ಷರೀಫ್ ಮತ್ತವರ ಕುಟುಂಬ ಸದಸ್ಯರ ವಿಚಾರಣೆಯನ್ನು  ಮತ್ತೆ ಆರಂಭಿಸಿದೆ.

ಷರೀಫ್ ವಿರುದ್ಧದ ಈ ಮಹಾ ಭ್ರಷ್ಟಾಚಾರ ಹಗರಣದ ವಿಚಾರಣೆಯನ್ನು ಪಾಕ್‌ ಸೇನೆಯೇ ಮಾಡಿಸುತ್ತಿದೆ ಎಂಬ ಚರ್ಚೆ ಪಾಕ್‌ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಇದರ ಒಟ್ಟು ಪರಿಣಾಮವಾಗಿ ಸೇನೆಯೇ ದೇಶದಲ್ಲಿನ ಪ್ರಜಾಸತ್ತೆಯನ್ನು ಬದಿಗೊತ್ತಿ ನಾಲ್ಕನೇ ಬಾರಿ ಅಧಿಕಾರಕ್ಕೆ ಬರುವ ಷಡ್ಯಂತ್ರ ನಡೆಸುತ್ತಿದೆ ಎಂಬ ಗುಮಾನಿ ಜಾಲಿಗರಲ್ಲಿ ತೀವ್ರವಾಗಿ ನೆಲೆಗೊಂಡಿದೆ. 

ದೇಶಕ್ಕೆ ಸ್ವಾತಂತ್ರ್ಯ ಬಂದಂದಿನಿಂದಲೂ ಪಾಕಿಸ್ಥಾನದ ಪೌರಾಡಳಿತೆಯಲ್ಲಿ ಸೇನೆಯ ಧ್ವನಿಯೇ ದೊಡ್ಡದಿರುವುದು ಜಗಜ್ಜಾಹೀರಾಗಿರುವ ವಿಷಯ. ನವಾಜ್‌ ಷರೀಫ್ ಅವರ ಸಾಗರೋತ್ತರ ಸಂಪತ್ತಿನ ತನಿಖೆಯಲ್ಲಿ ಐಎಸ್‌ಐ ಮತ್ತು ಎಂಐ ನ ಕೈವಾಡವಿರುವುದನ್ನು ಶಂಕಿಸಲಾಗಿದೆ. ಪಾಕ್‌ ರಾಜಕಾರಣದ ತೆರೆಮರೆಯಲ್ಲಿ ಸೇನೆ ಮತ್ತು ಐಎಸ್‌ಐ ಪ್ರಬಲ ಶಕ್ತಿಯಾಗಿದೆ.

Advertisement

ಜನರಿಂದ ಆಯ್ಕೆಯಾಗಿರುವ ಷರೀಫ್ ಸರಕಾರವನ್ನು ಪದಚ್ಯುತಗೊಳಿಸಿ ಸೇನಾಡಳಿತ ಬರಬಹುದೆಂದು ಹೇಳುವವರು ಪಾಕಿಸ್ಥಾನೀಯರೇ ಅಲ್ಲ ಎಂದು ಈ ನಡುವೆ ಸೇನೆ ತನ್ನ ಕೋಪಾವೇಶವನ್ನು ವ್ಯಕ್ತಪಡಿಸಿದೆ. 

ಪಾಕ್‌ ಸರಕಾರದ ವಿರುದ್ದ ಸೇನೆ ತೆರೆಮರೆಯಲ್ಲಿ ಸಂಚು ನಡೆಸುತ್ತಿದೆ ಎಂಬ ಸಾಮಾಜಿಕ ಜಾಲ ತಾಣಗಳ ಆರೋಪದ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ಪಾಕ್‌ ಸೇನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮೇಜರ್‌ ಜನರಲ್‌ ಆಸಿಫ್ ಗಫ‌ೂರ್‌ ಅವರು, “ಇದು ಉತ್ತರ ಪಡೆಯುವ ಯೋಗ್ಯತೆ ಇರುವ ಪ್ರಶ್ನೆಯೇ ಅಲ್ಲ’ ಎಂದು ವಿಷಯವನ್ನು ಸಾರಾಸಗಟು ತಳ್ಳಿಹಾಕಿದರು. 

“ಪ್ರತಿಯೋರ್ವರಿಗೂ ಅಭಿಪ್ರಾಯದ ಸ್ವಾತಂತ್ರ್ಯವಿದೆ. ಸೇನೆಯು  ದೇಶದ ಒಳಿತಿಗೆ ಏನನ್ನೂ ಮಾಡುತ್ತಿಲ್ಲ  ಎಂದು ಹೇಳುವವರು ವಿದೇಶೀ ಪ್ರಭಾವಕ್ಕೆ ಗುರಿಯಾಗಿರುವವರಾಗಿದ್ದಾರೆ’ ಎಂದು ಮೇಜರ್‌ ಜನರಲ್‌ ಗಫ‌ೂರ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next