Advertisement
ಅಭಿನಂದನ್‌ಗಾಗಿ ಪ್ರಾರ್ಥನೆಪಾಕ್ ವಶದಲ್ಲಿರುವ ಅಭಿನಂದನ್ ವರ್ಧಮಾನ್ ಅವರ ಬಿಡುಗಡೆಗಾಗಿ ದೇಶಾದ್ಯಂತ ಪ್ರಾರ್ಥನೆ ಶುರುವಾಗಿದೆ. ಎಲ್ಲ ರಾಜಕೀಯ ಪಕ್ಷಗಳೂ ವರ್ಧಮಾನ್ ಅವರು ಸುರಕ್ಷಿತ ಬಿಡುಗಡೆಯಾಗಲಿ ಎಂದು ಪ್ರಾರ್ಥಿಸಿವೆ. ಪಾಕ್ ಕಸ್ಟಡಿಯಲ್ಲಿರುವ ಅಭಿನಂಧನ್ ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಬನ್ನಿ ಎಂದು ಅವರ ಮನೆಯವರೂ ಸರಕಾರಕ್ಕೆ ಮನವಿ ಮಾಡಿದ್ದಾರೆ. ಈ ನಡುವೆ ಅಭಿನಂದನ್ ಅವರಿಗೆ ಪಾಕಿಸ್ಥಾನ ಸೇನೆ ಹಿಂಸೆ ಕೊಟ್ಟಿರುವ ವೀಡಿಯೋ ದೃಶ್ಯಾವಳಿಗಳು ಜಗತ್ತಿನಾದ್ಯಂತ ವೈರಲ್ ಆಗಿದ್ದು, ಪಾಕ್ ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿದೆ. ಇದಾದ ಬಳಿಕ ಹೊಸ ವೀಡಿಯೋ ಬಿಡುಗಡೆ ಮಾಡಿರುವ ಪಾಕಿಸ್ಥಾನ ಸೇನೆ, ಅಭಿನಂದನ್‌ರನ್ನು ಚೆನ್ನಾಗಿಯೇ ನಡೆಸಿಕೊಂಡಿದ್ದೇವೆ. ಅಂತಾರಾಷ್ಟ್ರೀಯ ಮಿಲಿಟರಿ ನಿಯಮ ಪಾಲನೆ ಮಾಡಿದ್ದೇವೆ ಎಂದಿದೆ.
ತನ್ನ ನೆಲದ ಮೇಲಾದ ಸರ್ಜಿಕಲ್ ಸ್ಟ್ರೈಕ್‌ನಿಂದಾಗಿ ಕೊತ ಕೊತ ಕುದಿಯುತ್ತಲೇ ಇದ್ದ ಪಾಕಿಸ್ಥಾನ, ಬುಧವಾರ ಬೆಳಗ್ಗೆಯೇ ಕಿರಿಕ್ ಆರಂಭಿಸಿತು. ಬೆಳಗ್ಗೆ 10.30ರ ಹೊತ್ತಿಗೆ ಪಾಕಿಸ್ಥಾನದ ಎಫ್ 16 ಯುದ್ಧ ವಿಮಾನ ಭಾರತದ ವಾಯು ಪ್ರದೇಶಕ್ಕೆ ಪ್ರವೇಶಿಸಿ, ರಜೌರಿ ಮತ್ತಿತರ ಕಡೆಗಳಲ್ಲಿ ದಾಳಿ ನಡೆಸಲು ಮುಂದಾಯಿತು. ಈ ಸಂದರ್ಭ ಭಾರತದ ಮಿಗ್ 21 ಬಿಸೋನ್ ಯುದ್ಧ ವಿಮಾನವು ಪಾಕಿಸ್ಥಾನದ ಎಫ್ 16 ಅನ್ನು ಹೊಡೆದುರುಳಿಸಿತು. ಈ ವಿಮಾನದ ಅವಶೇಷಗಳು ಪಾಕ್ ಕಡೆಯಲ್ಲಿ ಬಿದ್ದವು ಎಂದು ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಆದರೆ ಈ ಕಾರ್ಯಾಚರಣೆಯಲ್ಲಿ ನಾವೂ ಒಂದು ಮಿಗ್ 21 ಬಿಸೋನ್ ಯುದ್ಧ ವಿಮಾನ ಕಳೆದುಕೊಂಡಿದ್ದೇವೆ.
Related Articles
ಸತತ ಎರಡನೇ ದಿನವೂ ಪ್ರಧಾನಿ ನರೇಂದ್ರ ಮೋದಿ ಭೂಸೇನೆ, ವಾಯುಸೇನೆ ಮತ್ತು ನೌಕಾದಳದ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಇದ್ದರು.
ಯಾವುದೇ ಕಾರಣಕ್ಕೂ, ಯಾರಿಗೂ ತಲೆಬಾಗುವ ಪ್ರಶ್ನೆಯೇ ಇಲ್ಲ. ಯಾವುದೇ ನಿರ್ಧಾರ ತೆಗೆದು ಕೊಳ್ಳಲು ನೀವು ಸ್ವತಂತ್ರರು ಎಂದು ಮೂರು ಸೇನೆಯ ಮುಖ್ಯಸ್ಥರಿಗೆ ಪ್ರಧಾನಿ ಮೋದಿ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಬುಧವಾರ ಬೆಳಗ್ಗೆ ಗೃಹ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಜತೆ ಕಾಶ್ಮೀರದ ಪರಿಸ್ಥಿತಿ ಬಗ್ಗೆ ಅವಲೋಕನ ನಡೆಸಿದ್ದ ಮೋದಿ ಅವರು, ಸಂಜೆ ವೇಳೆಗೆ ಮತ್ತೆ ಸಭೆ ನಡೆಸಿದರು.
Advertisement
ಪಾಕ್‌ನ 3 ಜೆಟ್‌ಗಳ ದಾಳಿಪಾಕಿಸ್ಥಾನದ ಮೂರು ಯುದ್ಧ ವಿಮಾನಗಳು ಕಾಶ್ಮೀರದ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಲು ವಿಫಲ ಯತ್ನ ನಡೆಸಿವೆ ಎಂದು ಮೂಲ ಗಳು ಹೇಳಿವೆ. ಬುಧವಾರ ಬೆಳಗ್ಗೆ 9.58ಕ್ಕೆ ಕಾಶ್ಮೀರದ ರಜೌರಿ, ನೌಶೆರಾದ ಸೇನಾ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಈ ಯುದ್ಧ ವಿಮಾನಗಳು ಭಾರತದ ನೆಲೆ ಪ್ರವೇಶಿಸಿವೆ. ಭಾರತದೊಳಗೆ ಬಂದಿದ್ದು ಜೆಎಫ್-17 ಮತ್ತು ಎಫ್-16 ಯುದ್ಧ ವಿಮಾನ ಗಳು. ಇವುಗಳನ್ನು ಕಂಡ ಕೂಡಲೇ ಭಾರತದ ಮಿಗ್ 21 ಯುದ್ಧ ವಿಮಾನಗಳ ನೇತೃತ್ವ ದಲ್ಲಿ ಪ್ರತಿದಾಳಿ ಶುರುವಾಯಿತು. ಈ ಸಂದರ್ಭ ದಲ್ಲಿ ಎಫ್ 16 ವಿಮಾನವನ್ನು ಭಾರತದ ಕಡೆ ಯಿಂದ ಹೊಡೆದು ಉರುಳಿಸಲಾಯಿತು. ಕಾರ್ಯಾ ಚರಣೆ ಅನಂತರ ಎರಡು ಪ್ಯಾರಚೂಟ್‌ಗಳನ್ನು ನೋಡಿದೆವು. ಒಂದು ಪಾಕ್ ಪೈಲಟ್, ಮತ್ತೂಂದು ನಮ್ಮ ಪೈಲಟ್ ಎಂದು ಭಾರತೀಯ ಸೇನೆಯ ಮೂಲಗಳು ಹೇಳಿವೆ. ಒಬ್ಬ ಪೈಲಟ್ ಹೊರತು ಪಡಿಸಿ ಎಲ್ಲರೂ ಕಾರ್ಯಾಚರಣೆ ಮುಗಿಸಿ ವಾಪಸ್ ಬಂದಿದ್ದಾರೆ ಎಂದು ಸೇನೆ ತಿಳಿಸಿದೆ. ಮತ್ತೆ ಪಾಕಿಸ್ಥಾನ ಏಕಾಂಗಿ
ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಪಾಕಿಸ್ಥಾನ ಮತ್ತೆ ಒಬ್ಬಂಟಿಯಾಗಿದೆ. ಬಾಲಕೋಟ್‌ನ ಉಗ್ರ ನೆಲೆಗಳ ಮೇಲೆ ದಾಳಿ ಮಾಡುತ್ತಿದ್ದಂತೆ, ಭಾರತದ ವಿರುದ್ಧ ಗೂಬೆ ಕೂರಿಸಲು ಹೋಗಿದ್ದ ಪಾಕಿಸ್ಥಾನ, ತಾನೇ ಸಿಕ್ಕಿಬಿದ್ದಿದೆ. ಅಮೆರಿಕ ವಿದೇಶಾಂಗ ಸಚಿ‡ವ ಮೈಕ್ ಪೆಂಪೋ ಅವರು, ಭಯೋತ್ಪಾದನೆ ವಿರುದ್ಧದ ಹೋರಾಟ ವಿಚಾರದಲ್ಲಿ ಭಾರತದ ಜತೆಗೆ ನಿಲ್ಲುವುದಾಗಿ ಹೇಳಿದ್ದಾರೆ. ಅಲ್ಲದೆ, ಪಾಕಿಸ್ಥಾನ ದಲ್ಲಿರುವ ಉಗ್ರ ನೆಲೆಗಳ ಮೇಲೆ ಕ್ರಮ ತೆಗೆದು ಕೊಳ್ಳಿ ಎಂದೂ ಸೂಚಿಸಿದ್ದಾರೆ. ವಿಶೇಷವೆಂದರೆ ಪಾಕಿ ಸ್ಥಾನದ ಪರಾಮಾಪ್ತ ದೇಶ ಚೀನವೂ ಉಗ್ರರ ವಿರುದ್ಧ ಕ್ರಮ ತೆಗೆದು ಕೊಳ್ಳುವಂತೆ ಪಾಕಿಸ್ಥಾನಕ್ಕೆ ಸೂಚಿಸಿದೆ. ಅಲ್ಲದೆ ಯಾವುದೇ ಕಾರಣಕ್ಕೂ ಯುದ್ಧದ ಮಾತು ಸಲ್ಲದು, ಬಗೆಹರಿಸಿಕೊಳ್ಳಿ ಎಂದೂ ಸಲಹೆ ನೀಡಿದೆ. ರಷ್ಯಾ, ಐರೋಪ್ಯ ಒಕ್ಕೂಟ, ಇಂಗ್ಲಂಡ್, ಫ್ರಾನ್ಸ್ ಸಹಿತ ಯಾವೊಂದು ದೇಶವೂ ಪಾಕಿಸ್ಥಾನದ ಬೆನ್ನಿಗೆ ನಿಲ್ಲದೆ, ಉಗ್ರರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿವೆ. ಅಂತಾರಾಷ್ಟ್ರೀಯ ಸಮುದಾಯ ಪಾಕಿಸ್ಥಾನದ ಜತೆಗೆ ನಿಲ್ಲದೇ ಇರುವುದರಿಂದಲೇ ಅಲ್ಲಿನ ಪ್ರತಿಯೊಬ್ಬರ ಬಾಯಲ್ಲೂ ಶಾಂತಿ ಮಂತ್ರ ಬರುತ್ತಿದೆ ಎಂದೇ ಹೇಳಲಾಗುತ್ತಿದೆ. ಯುದ್ಧಕ್ಕೆ ತಯಾರಿ? 10 ಕಾರಣಗಳು
ಪಾಕಿಸ್ಥಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿರುವ ಭಾರತವು ಪಾಕಿಸ್ಥಾನವೇನಾದರೂ ಯುದ್ಧಕ್ಕೆ ಬಂದರೆ ಯಶಸ್ವಿಯಾಗಿ ತಿರುಗೇಟು ನೀಡಲು ಸದ್ದಿಲ್ಲದೆ ತಯಾರಿ ನಡೆಸಿಕೊಳ್ಳುತ್ತಿದೆ. ಇದಕ್ಕೆ ಬೇಕಾದ ಪೂರಕ ವಾತಾವರಣವೂ ಸೃಷ್ಟಿಯಾಗಿದೆ.
1 ಮುಂಬಯಿಯಲ್ಲಿ ಹಿಂದೆಂದೂ ಕಾಣದಂತಹ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಅರೆಸೇನಾ ಪಡೆಯ ಯೋಧರು ಪ್ರಮುಖ ಕಟ್ಟಡಗಳ ಕಾವಲು ಕಾಯುತ್ತಿದ್ದಾರೆ.
2 ಮಂಗಳವಾರ ರಾತ್ರಿಯೇ ಪುಣೆಯಿಂದ ಭಾರೀ ಪ್ರಮಾಣದ ಭದ್ರತಾ ಪಡೆಗಳನ್ನು ಮುಂಬಯಿಗೆ ಕರೆಸಿಕೊಳ್ಳಲಾಗಿದೆ.
3 ಪಾಕಿಸ್ಥಾನದ ಗಡಿ ಭಾಗದಲ್ಲಿರುವ ಗುಜರಾತ್‌ನ ಜಿಲ್ಲೆಗಳಲ್ಲಿ ಭಾರೀ ಭದ್ರತೆ ಆಯೋಜಿಸಲಾಗಿದೆ.
4 ಪಂಜಾಬ್ ಕೂಡ ಪಾಕಿಸ್ಥಾನದ ಜತೆ ಗಡಿ ಹಂಚಿಕೊಂಡಿದ್ದು, ಸ್ವತಃ ಸಿಎಂ ಅಮರೀಂದರ್ ಸಿಂಗ್ ಅವರೇ ಭದ್ರತಾ ವ್ಯವಸ್ಥೆಯ ಉಸ್ತುವಾರಿ ಹೊತ್ತಿದ್ದಾರೆ.
5 ಜಮ್ಮು ಕಾಶ್ಮೀರದತ್ತ 500 ಟ್ರಕ್‌ಗಳಲ್ಲಿ ಜೆಟ್ ಇಂಧನವನ್ನು ತೆಗೆದುಕೊಂಡು ಹೋಗಲಾಗುತ್ತಿದೆ.
6 ಯುದ್ಧದಂಥ ಪರಿಸ್ಥಿತಿ ಉದ್ಭವವಾದರೆ ಇಂಧನದ ಕೊರತೆ ಬೀಳಬಾರದು ಎಂಬ ಉದ್ದೇಶದಿಂದ ಈ ಸಾಗಾಟ.
7 ದೇಶಾದ್ಯಂತ ಹಲವಾರು ವಿಮಾನ ನಿಲ್ದಾಣಗಳಲ್ಲಿ ದಿಢೀರನೇ ವಿಮಾನಯಾನ ಸ್ಥಗಿತಗೊಳಿಸಿ ಮತ್ತೆ ಪುನಾರಂಭಗೊಳಿಸಲಾಗಿದೆ.
8 ಕೆಲವೊಂದು ವಾಣಿಜ್ಯ ವಿಮಾನಗಳ ಹಾರಾಟವನ್ನು ರದ್ದು ಮಾಡಲಾಗಿದೆ, ಸಿಂಗಾಪುರದಿಂದ ಬರಬೇಕಿದ್ದ 6 ವಿಮಾನಗಳ ಹಾರಾಟ ರದ್ದಾಗಿದೆ.
9 ಸೇನೆಯ ಮೂರು ವಿಭಾಗಗಳ ಮುಖ್ಯಸ್ಥರು ಪ್ರಧಾನಿ ಜತೆಗೆ ಸತತವಾಗಿ ಸಂಪರ್ಕದಲ್ಲಿದ್ದಾರೆ.
10 ರಕ್ಷಣಾ ಪಡೆಯ ಎಲ್ಲ ಸಿಬಂದಿ ರಜೆ ರದ್ದು ಮಾಡಲಾಗಿದ್ದು, ವಾಪಸ್ ಕರೆಸಿಕೊಳ್ಳಲಾಗಿದೆ. ಟೈಮ್ ಲೈನ್
ಬುಧವಾರ ಏನೇನಾಯ್ತು?
11.13 ಭಾರತೀಯ ವಾಯು ಪ್ರದೇಶಕ್ಕೆ ಪಾಕ್ ವಿಮಾನಗಳ ಪ್ರವೇಶ
11.34 ಪಾಕ್ ಯುದ್ಧ ವಿಮಾನಗಳ ವಾಪಸ್ ಅಟ್ಟಿದ ಭಾರತ
11.38 ಲೇಹ್, ಜಮ್ಮು, ಶ್ರೀನಗರ, ಪಠಾಣ್‌ಕೋಟ್‌ನ ವಿಮಾನ ನಿಲ್ದಾಣಗಳು ಸ್ಥಗಿತ
11.57 ಭಾರತದ 2 ಯುದ್ಧ ವಿಮಾನ ಪತನ, ಓರ್ವ ಪೈಲಟ್ ತಮ್ಮ ವಶದಲ್ಲಿ: ಪಾಕ್
12.13 ಪಾಕ್ ಜೆಟ್ ಹೊಡೆದುರುಳಿಸಿದ ಭಾರತದ ಮಿಗ್ 21 ಯುದ್ಧ ವಿಮಾನ
12.33 ಉತ್ತರ ಭಾರತದ 8 ಕಡೆಗಳ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಸ್ಥಗಿತ
12.42 ದೋವಲ್, ರಾ ಮುಖ್ಯಸ್ಥರು, ಗೃಹ ಕಾರ್ಯದರ್ಶಿ ಜತೆ ಸಚಿವ ರಾಜನಾಥ್ ಚರ್ಚೆ
12.43 ಪಾಕ್‌ನಲ್ಲೂ ಲಾಹೋರ್, ಇಸ್ಲಾಮಾ ಬಾದ್ ವಿಮಾನ ನಿಲ್ದಾಣಗಳು ಬಂದ್
12.47 ಎಲ್ಲಾ ಏರ್ ಬೇಸ್‌ಗಳಿಗೆ ಸನ್ನದ್ಧವಾಗಿರುವಂತೆ ಆದೇಶ
13.00 ಪ್ರಧಾನಿ ನಿವಾಸಕ್ಕೆ ರಾಜನಾಥ್, ನಿರ್ಮಲಾ ಸೀತಾರಾಮನ್ ದೌಡು
13.01 ಪಾಕಿಸ್ತಾನದ ಎಲ್ಲಾ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಸ್ಥಗಿತ
13.47 ಪೈಲಟ್ ಬಂಧನದ ಬಗ್ಗೆ ವಿಡಿಯೋ ರಿಲೀಸ್ ಮಾಡಿದ ಪಾಕಿಸ್ಥಾನ
14.54 ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಸ್ಥಗಿತ ಆದೇಶ ವಾಪಸ್
15.24 ಪೈಲಟ್ ನಾಪತ್ತೆ ಬಗ್ಗೆ ಒಪ್ಪಿಕೊಂಡ ಭಾರತ
15.56 ಇಮ್ರಾನ್ ಖಾನ್‌ರಿಂದ ಶಾಂತಿ ಮಾತುಕತೆ ಪ್ರಸ್ತಾವ
21.31 ನಾವು ಯಾರಿಗೂ ತಲೆಬಾಗುವ ಪ್ರಶ್ನೆಯೇ ಇಲ್ಲ ಎಂದ ಮೋದಿ