ನವದೆಹಲಿ:ಭಾರತೀಯ ವಾಯುಪಡೆ ಯುದ್ಧ ವಿಮಾನಗಳು ಪಾಕ್ ಗಡಿಯೊಳಗೆ ನುಗ್ಗಿ ಉಗ್ರರ ಅಡಗುತಾಣ ಹಾಗೂ ಜೈಶ್ ಉಗ್ರರನ್ನು ನಾಶಮಾಡಿದ ಬೆನ್ನಲ್ಲೇ ಭಾರತ, ಪಾಕ್ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಏತನ್ಮಧ್ಯೆ ಬುಧವಾರ ಭಾರತದೊಳಕ್ಕೆ ನುಗ್ಗಲು ಯತ್ನಿಸಿದ್ದ ಪಾಕಿಸ್ತಾನದ ಮೂರು ಯುದ್ಧ ವಿಮಾನಗಳನ್ನು ಹಿಮ್ಮೆಟಿಸಿದೆ. ಮತ್ತೊಂದೆಡೆ ಭಾರತದ ವಾಯುಪಡೆಯ ಎರಡು ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ!
ಭಾರತೀಯ ವಾಯುಪಡೆಯ ಯುದ್ಧ ವಿಮಾನ ಹೊಡೆದುರುಳಿಸಿದೆ ಎಂಬ ಪಾಕಿಸ್ತಾನದ ಹೇಳಿಕೆಯನ್ನು ಭಾರತ ಸಾರಸಗಟಾಗಿ ತಳ್ಳಿಹಾಕಿದೆ. ನಮ್ಮ ವಾಯುಪಡೆ ವಿಮಾನಗಳು, ಪೈಲಟ್ ಗಳು ಸುರಕ್ಷಿತವಾಗಿದ್ದಾರೆ. ಪಾಕಿಸ್ತಾನ ಮುಖಭಂಗದಿಂದ ಪಾರಾಗಲು ಇಂತಹ ಸುಳ್ಳು ಸುದ್ದಿಯ ಪ್ರಕಟಣೆ ನೀಡುತ್ತಿದೆ ಎಂದು ಭಾರತ ತಿರುಗೇಟು ನೀಡಿದೆ.
ಪಾಕ್ ಮೇಜರ್ ಜನರಲ್ ಆಸೀಫ್ ಗಫೂರ್ ಹೇಳೋದೇನು?
ಇಂದು ಬೆಳಗ್ಗೆ ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿ ಬಂದ ಭಾರತೀಯ ವಾಯುಪಡೆಯ ಎರಡು ವಿಮಾನಗಳನ್ನು ಪಾಕಿಸ್ತಾನದೊಳಗೆ ಹೊಡೆದುರುಳಿಸಲಾಗಿದೆ. ಈ ಸಂದರ್ಭದಲ್ಲಿ ಓರ್ವ ಭಾರತೀಯ ಪೈಲಟ್ ನನ್ನು ಬಂಧಿಸಿರುವುದಾಗಿ ಪಾಕ್ ಮೇಜರ್ ಜನರಲ್ ಆಸೀಫ್ ಗಫೂರ್ ಟ್ವೀಟ್ ಮಾಡಿರುವುದಾಗಿ ವರದಿ ತಿಳಿಸಿದೆ.
ನಾಗರಿಕರ ಜೀವ ಹಾನಿಯಾಗದ ರೀತಿಯಲ್ಲಿ ಪಾಕಿಸ್ತಾನ ದಾಳಿ ನಡೆಸುತ್ತಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ಪ್ರಕಟಣೆ ತಿಳಿಸಿರುವುದಾಗಿ ಡಾನ್ ನ್ಯೂಸ್ ವರದಿ ಮಾಡಿದೆ.
ಮೂರು ಪಾಕ್ ವಾಯುಪಡೆ ವಿಮಾನವನ್ನು ಹಿಮ್ಮೆಟ್ಟಿಸಿದ್ದ ಭಾರತೀಯ ವಾಯುಪಡೆ!
ಬುಧವಾರ ಬೆಳಗ್ಗೆ ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿ ದಾಳಿ ನಡೆಸಲು ಯತ್ನಿಸಿದ್ದ ಪಾಕಿಸ್ತಾನ ವಾಯುಪಡೆಯ ಮೂರು ವಾಯುಪಡೆಯ ವಿಮಾನಗಳನ್ನು ಭಾರತೀಯ ವಾಯುಪಡೆ ತಕ್ಕ ಪ್ರತ್ಯುತ್ತರ ಎಂಬಂತೆ ಹಿಮ್ಮೆಟ್ಟಿಸಿದ್ದವು. ಈ ಘಟನೆಯ ಬಳಿಕ ಪಾಕಿಸ್ತಾನ ತಾನು ಕೂಡಾ ಭಾರತೀಯ ವಾಯುಪಡೆಯ ಎರಡು ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಟ್ವೀಟ್ ಮಾಡಿತ್ತು!