Advertisement

ಪಾಕಿಸ್ಥಾನದಲ್ಲಿ ಮೂರನೇ ದಿನವೂ ವಿದ್ಯುತ್‌ ಬಿಕ್ಕಟ್ಟು

10:25 PM Jan 25, 2023 | Team Udayavani |

ಇಸ್ಲಾಮಾಬಾದ್‌: ಮೂರನೇ ದಿನವಾದ ಬುಧವಾರವೂ ಪಾಕಿಸ್ಥಾನದಲ್ಲಿ ವಿದ್ಯುತ್‌ ಸಂಪರ್ಕ ದೊರಕದೇ ದೇಶದ ಬಹುತೇಕ ಭಾಗಗಳ ನಾಗರಿಕರು ತೀವ್ರ ಸಂಕಷ್ಟ ಅನುಭವಿಸಿದ್ದಾರೆ.

Advertisement

ಕಳೆದ ನಾಲ್ಕು ತಿಂಗಳುಗಳಲ್ಲಿ ವಿದ್ಯುತ್‌ ಸಂಪರ್ಕ ಇಲ್ಲದೇ ಎರಡನೇ ಬಾರಿ ಈ ರೀತಿಯ ದುಃಸ್ಥಿತಿಯನ್ನು ಪಾಕಿಸ್ಥಾನಿ ಯರು ಎದುರಿಸುತ್ತಿದ್ದಾರೆ. ದೇಶದ ಬಹುತೇಕ ಪ್ರದೇಶ ಗಳು ಕತ್ತಲಲ್ಲಿ ಕಳೆಯುತ್ತಿದೆ. ಇಸ್ಲಾಮಾಬಾದ್‌, ಕರಾಚಿ, ಲಾಹೋರ್‌, ಕ್ವೆಟ್ಟಾ ಸಹಿತ ದೇಶದ ಅನೇಕ ಪ್ರಮುಖ ನಗರಗಳಲ್ಲಿ ವಿದ್ಯುತ್‌ ಇಲ್ಲದೇ ಕೈಗಾರಿಕೆಗಳು, ಕಂಪೆನಿಗಳು ಸಂಪೂರ್ಣ ಸ್ಥಗಿತವಾಗಿವೆ. ಮಂಗಳವಾರ ನಗರ ಪ್ರದೇಶಗಳ ಕೆಲವೆಡೆ ವಿದ್ಯುತ್‌ ಪೂರೈಕೆ ಪುನರಾರಂಭ ಗೊಂಡಿತಾದರೂ ಬೇಡಿಕೆಯಷ್ಟು ವಿದ್ಯುತ್‌ ಪೂರೈಕೆ ಸಾಧ್ಯವಾಗಿರಲಿಲ್ಲ. ಬುಧ ವಾರ ಮತ್ತಷ್ಟು ಪ್ರದೇಶಗಳಿಗೆ ವಿದ್ಯುತ್‌ ಅನ್ನು ಪೂರೈಸಲು ಪ್ರಯತ್ನಿಸಲಾಗಿದೆಯಾದರೂ ಯಥಾಸ್ಥಿತಿಗೆ ಬರಲು ಇನ್ನೂ 2-3 ದಿನಗಳು ಬೇಕಾದೀತು ಎನ್ನಲಾಗಿದೆ.

ಇದೇ ವೇಳೆ ವಿದ್ಯುತ್‌ ಸಂಪರ್ಕ ಕಡಿತದಿಂದ ಉಂಟಾಗಿರುವ ಸಮಸ್ಯೆಗೆ ಪಾಕಿಸ್ಥಾನ ಪ್ರಧಾನಿ ಶೆಹಬಾಜ್‌ ಶರೀಫ್ ದೇಶದ ನಾಗರಿಕರ ಕ್ಷಮೆ ಯಾಚಿಸಿದ್ದಾರೆ.

ವಿದ್ಯುತ್‌ ಸಂಪರ್ಕ ಸರಿಪಡಿಸುವ ಬಗ್ಗೆ ಪಾಕಿಸ್ಥಾನ ಇಂಧನ ಸಚಿವ ಖುರ್ರಮ್‌ ದಸ್ತಗಿರ್‌ ಅವರ ಭರವಸೆಯ ಹೊರತಾಗಿಯೂ ಸಮಸ್ಯೆ ಬಗೆಹರಿಯದೇ ಜನರು ಪರಿತಪಿಸುತ್ತಿದ್ದಾರೆ.

ಉತ್ಪಾದನ ಘಟಕಗಳು ಕಾರ್ಯಾ ಚರಣೆಯನ್ನೇ ನಿಲ್ಲಿಸಿವೆ. ಈಗಾಗಲೇ ಇಂಧನ ಉಳಿತಾಯದ ನಿಟ್ಟಿನಲ್ಲಿ ರಾತ್ರಿ 8.30 ಗಂಟೆಯ ಬಳಿಕ ಮಾರುಕಟ್ಟೆ, ಮಾಲ್‌ ಸಹಿತ ಅಂಗಡಿ- ಮುಂಗಟ್ಟುಗಳನ್ನು ಮುಚ್ಚಲು ಸ್ಥಳೀಯ ಆಡಳಿತ ಆದೇಶಿಸಿದೆ.

Advertisement

ಇದೇ ವೇಳೆ ಅಮೆರಿಕ ವಿದೇಶಾಂಗ ಸಚಿವಾಲಯದ ವಕ್ತಾರ ನೆಡ್‌ ಪ್ರೈಸ್‌, ವಿದ್ಯುತ್‌ ಬಿಕ್ಕಟ್ಟು ಸರಿಪಡಿಸುವ ನಿಟ್ಟಿನಲ್ಲಿ ಪಾಕಿಸ್ಥಾನಕ್ಕೆ ಅಗತ್ಯವಿರುವ ನೆರವನ್ನು ನೀಡಲು ಅಮೆರಿಕ ಸಿದ್ಧವಿದೆ ಎಂದು ತಿಳಿಸಿದ್ದಾರೆ.

ಬೇಡಿಕೆಗಿಂತ ಕಡಿಮೆ ಪ್ರಮಾಣದ ವಿದ್ಯುತ್‌ ಸರಬರಾಜಿನ ಕಾರಣ ಸಮಸ್ಯೆ ಎದುರಾಗಿದೆ. ಅಂದಾಜು 6,600 ಮೆಗಾ ವ್ಯಾಟ್‌ ಕಲ್ಲಿದ್ದಲು ಹಾಗೂ 3,500 ಮೆಗಾ ವ್ಯಾಟ್‌ ಪರಮಾಣು ಸ್ಥಾವರಗಳು ಮರುಚಾಲನೆಗೊಳ್ಳಲು ಕನಿಷ್ಠ 72 ತಾಸು ಬೇಕಾಗುತ್ತದೆ. ಅಲ್ಲಿಯವರೆಗೆ ಕೈಗಾರಿಕೆ ಗಳಿಗೆ ಹೊರತಾಗಿ ಸಾಮಾನ್ಯ ನಾಗರಿಕರಿಗೆ ಅಲ್ಪ ತಾಸಿನ ವಿದ್ಯುತ್‌ ಪೂರೈಸಲಾಗುತ್ತದೆ ಎಂದು ಪಾಕ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಸತತವಾಗಿ ಪಾಕಿಸ್ಥಾನವು ವಿದ್ಯುತ್‌ ಬಿಕ್ಕಟ್ಟು ಎದುರಿಸುತ್ತಿದೆ. 2022ರ ಅಕ್ಟೋಬರ್‌ನಲ್ಲಿ ಉಂಟಾದ ವಿದ್ಯುತ್‌ ಸಮಸ್ಯೆ ಸರಿಪಡಿಸಲು 12 ತಾಸಿಗೂ ಹೆಚ್ಚು ಅವಧಿ ಬೇಕಾಗಿತ್ತು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next