Advertisement

ತಾಂತ್ರಿಕ ದೋಷದಿಂದ ಕೈಕೊಟ್ಟ ವಿಶೇಷ ವಿಮಾನ; ನ್ಯೂಯಾರ್ಕ್ ನಲ್ಲಿ ಖಾನ್ ಕಂಗಾಲು!

09:50 AM Sep 29, 2019 | Nagendra Trasi |

ವಾಷಿಂಗ್ಟನ್: ಸೌದಿ ರಾಜ ಮೊಹ್ಮದ್ ಬಿನ್ ಸಲ್ಮಾನ್ ಗೆ ಸೇರಿದ್ದ ವಿಶೇಷ ವಿಮಾನದಲ್ಲಿ ಅಮೆರಿಕಕ್ಕೆ ತೆರಳಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹಾಗೂ ನಿಯೋಗ ನ್ಯೂಯಾರ್ಕ್ ನಿಂದ ಇಸ್ಲಾಮಾಬಾದ್ ಗೆ ವಾಪಸ್ ಆಗುವ ವೇಳೆ ವಿಮಾನದ ತಾಂತ್ರಿಕ ದೋಷದಿಂದ ಪಾಕ್ ಆಗಮಿಸಲು ಪರದಾಡಿದ ಘಟನೆ ವರದಿಯಾಗಿದೆ.

Advertisement

ಸೌದಿ ಅರೇಬಿಯಾ ಸರಕಾರ ನೀಡಿದ್ದ ವಿಮಾನ ತಾಂತ್ರಿಕ ದೋಷದಿಂದಾಗಿ ಜಾನ್ ಎಫ್ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಬಾಕಿ ಉಳಿದಿತ್ತು. ಇದರಿಂದಾಗಿ ಇಮ್ರಾನ್ ಖಾನ್ ಶುಕ್ರವಾರ ರಾತ್ರಿ (ಭಾರತೀಯ ಕಾಲಮಾನ ಶನಿವಾರ ಬೆಳಗ್ಗೆ) ನ್ಯೂಯಾರ್ಕ್ ನ ರೂಸ್ ವೆಲ್ಟ್ ಹೋಟೆಲ್ ನಲ್ಲಿ ತಂಗಿರುವುದಾಗಿ ವರದಿ ತಿಳಿಸಿದೆ.

ವಿಮಾನದ ತಾಂತ್ರಿಕ ದೋಷ ಸರಿಯಾಗಬಹುದು ಎಂಬ ವಿಶ್ವಾಸದಲ್ಲಿ ಇಮ್ರಾನ್ ಖಾನ್ ವಿಮಾನ ನಿಲ್ದಾಣದಲ್ಲಿ ಕಾದು ಕುಳಿತಿದ್ದು, ಏತನ್ಮಧ್ಯೆ ತಾಂತ್ರಿಕ ದೋಷ ಸರಿಪಡಿಸಲು ಹೆಚ್ಚಿನ ಸಮಯದ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದರು ಎಂದು ವರದಿ ವಿವರಿಸಿದೆ. ಕೊನೆಗೆ ಬೇರೆ ದಾರಿ ಕಾಣದ ಪಾಕಿಸ್ತಾನ ಪ್ರಧಾನಿ ಕಮರ್ಷಿಯಲ್ ಫ್ಲೈಟ್ ನಲ್ಲಿ ಇಸ್ಲಾಮಾಬಾದ್ ಗೆ ತೆರಳಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಸೌದಿ ರಾಜನ ಭೇಟಿಗಾಗಿ ಇಮ್ರಾನ್ ಖಾನ್ ಹೋಗಿದ್ದಾಗ ಅಲ್ಲಿಂದಲೇ ಸಾಮಾನ್ಯ ಪ್ರಯಾಣಿಕ ವಿಮಾನದಲ್ಲಿಯೇ ಅಮೆರಿಕಕ್ಕೆ ಹೋಗುವುದಾಗಿ ತಿಳಿಸಿದ್ದರು. ಇದನ್ನು ಮನಗಂಡ ಸೌದಿ ರಾಜ ಮೊಹ್ಮದ್ ಬಿನ್ ಸಲ್ಮಾನ್ ಪ್ರತ್ಯೇಕ ವಿಮಾನದ ವ್ಯವಸ್ಥೆ ಮಾಡಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next