ಹೊಸದಿಲ್ಲಿ: ಉಗ್ರ ಸಂಘಟನೆಗಳನ್ನು ಭಾರತದೊಳಕ್ಕೆ ನುಸುಳಿಸುವ ತನ್ನ ಪ್ರಯತ್ನಕ್ಕೆ ಕುಖ್ಯಾತವಾಗಿರುವ ಪಾಕಿಸ್ಥಾನ ಈಗ ಭಾರತದ ವಿರುದ್ಧ ಮತ್ತೂಂದು ಕುತಂತ್ರ ರಚಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಮೊಬೈಲ್ ನೆಟ್‌ವರ್ಕ್ ಕವರೇಜ್ ವ್ಯಾಪ್ತಿಯನ್ನು ಜಮ್ಮು-ಕಾಶ್ಮೀರದವರೆಗೂ ವಿಸ್ತರಿಸಲು ಇಮ್ರಾನ್ ಸರಕಾರ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.
ಇದು ಸಾಧ್ಯವಾದರೆ ಭಾರತದೊಳಕ್ಕೆ ನುಸುಳಲು ಪ್ರಯ ತ್ನಿಸುವ ತನ್ನ ಉಗ್ರರೊಂದಿಗೆ ನಿರಂತರ ಸಂಪರ್ಕದಲ್ಲಿರಲು ಪಾಕ್‌ಗೆ ಸಾಧ್ಯವಾಗುತ್ತದೆ ಹಾಗೂ ಭವಿಷ್ಯದಲ್ಲಿ ಭಾರತ ಸರಕಾರವೇನಾದರೂ ಜಮ್ಮು-ಕಾಶ್ಮೀರದಲ್ಲಿ ನೆಟ್‌ವರ್ಕ್ ಕಡಿತಗೊಳಿಸಿದರೆ, ಕಾಶ್ಮೀರಿಗಳು ತನ್ನ ನೆಟ್‌ವರ್ಕ್ ಬಳಸುವುದಕ್ಕೆ ಸಾಧ್ಯವಾಗುತ್ತದೆ ಎನ್ನುವುದು ಪಾಕ್‌ನ ಯೋಚನೆ.
ಜಮ್ಮು-ಕಾಶ್ಮೀರದಿಂದ 370ನೇ ವಿಧಿ ಹಿಂಪಡೆದಾಗ ಸುರಕ್ಷತಾ ದೃಷ್ಟಿಯಿಂದ ಅಲ್ಲಿನ ನೆಟ್‌ವರ್ಕ್‌ಗಳನ್ನು ಹಲವು ತಿಂಗಳವರೆಗೆ ನಿಷ್ಕ್ರಿಯಗೊಳಿಸಲಾಗಿತ್ತು. ಇದರಿಂದಾಗಿ, ಸೋಷಿಯಲ್ ಮೀಡಿಯಾಗಳಲ್ಲಿ ಸುಳ್ಳು ಸುದ್ದಿ ಹರಡುವುದನ್ನು ತಡೆಯಲು ಸಾಧ್ಯವಾಗಿತ್ತು. ಈಗ ಮೊಬೈಲ್ ನೆಟ್‌ವರ್ಕ್ ಗಳನ್ನು ಮತ್ತೆ ಸಕ್ರಿಯಗೊಳಿಸಲಾಗಿದೆ. ಭವಿಷ್ಯದಲ್ಲಿ ಭಾರತ ಮತ್ತೆ ಅಂಥ ನಿರ್ಬಂಧ ಜಾರಿ ಮಾಡಿದರೆ, ಕಾಶ್ಮೀರಿಗಳು ಪಾಕಿಸ್ಥಾನದ ನೆಟ್‌ವರ್ಕ್ ಬಳಸುವಂತಾಗಲಿ ಎಂಬುದು ಇಮ್ರಾನ್ ಸರಕಾರದ ಯೋಚನೆ ಎನ್ನುತ್ತಾರೆ ದಿಲ್ಲಿಯಲ್ಲಿನ ಹಿರಿಯ ಭದ್ರತಾ ಅಧಿಕಾರಿ.
ಇದನ್ನೂ ಓದಿ:ಚೀನದ ಚಳಿ ಬಿಡಿಸಲು ಸಿದ್ಧ; ಅಮೆರಿಕದಿಂದ ಚಳಿಗಾಲದ ಯುದ್ಧ ಸಂಬಂಧಿ ಕಿಟ್ ಖರೀದಿಸಿದ ಭಾರತ
“ಒಂದು ವರ್ಷದಿಂದ ಪಾಕಿಸ್ಥಾನ ತನ್ನ ಹಳೆಯ ಟೆಲಿಕಾಂ ಟವರ್‌ಗಳ ದುರಸ್ತಿ ಹಾಗೂ ನೆಟ್‌ವರ್ಕ್ ಕವರೇಜ್ ವ್ಯಾಪ್ತಿಯ ಹೆಚ್ಚಳದ ಜತೆ ಜತೆಗೇ ಹೊಸ ಟವರ್ ಗಳ ಸ್ಥಾಪನೆಯಲ್ಲೂ ವ್ಯಸ್ತವಾಗಿದೆ” ಎಂದೂ ಅವರು ಮಾಹಿತಿ ನೀಡಿದ್ದಾರೆ.