Advertisement

Operation Arjun: ಪಾಕ್‌ ಸೇನಾಧಿಕಾರಿ ಮನೆಗಳ ಮೇಲೆ ದಾಳಿ

03:28 PM Sep 27, 2017 | udayavani editorial |

ಹೊಸದಿಲ್ಲಿ : ಪದೇ ಪದೇ ಕದನ ವಿರಾಮ ಉಲ್ಲಂಘನೆಗೈದು ಭಾರತೀಯ ಸೇನಾ ಪಡೆಯ ಮುಂಚೂಣಿ ಹೊರ ಠಾಣೆಗಳು ಹಾಗೂ ಪೌರರ ವಸತಿ ಪ್ರದೇಶಗಳ ಮೇಲೆ ಶೆಲ್‌ ಹಾಗೂ ಗುಂಡಿನ ದಾಳಿ ನಡೆಸುತ್ತಾ ತನ್ನ ಉಗ್ರರನ್ನು ಭಾರತದ ಗಡಿಯೊಳಗೆ ನುಸುಳಿಸುವ ಕುತಂತ್ರವನ್ನು ಕಾರ್ಯಗತಗೊಳಿಸುತ್ತಿರುವ ಪಾಕಿಸ್ಥಾನಕ್ಕೆ ಸರಿಯಾದ ರೀತಿಯಲ್ಲಿ ಬುದ್ಧಿ ಕಲಿಸಲು ಭಾರತೀಯ ಸೇನೆ, ಭಾರತದ ಗಡಿಯ ಉದ್ದಕ್ಕೂ ಇರುವ ನಿವೃತ್ತ ಪಾಕ್‌ ಸೇನಾಧಿಕಾರಿಗಳು, ಐಎಸ್‌ಐ ಮತ್ತು ಪಾಕ್‌ ರೇಂಜರ್ ಅಧಿಕಾರಿಗಳ ನಿವಾಸದ ಮೇಲೆ ದಾಳಿಯನ್ನು ಆರಂಭಿಸಿದೆ.

Advertisement

ಭಾರತ ವಿರುದ್ಧದ ಕಾರ್ಯಾಚರಣೆಗೆ ನೆರವಾಗಬೇಕೆಂಬ ಉದ್ದೇಶದಿಂದ ಪಾಕ್‌ ಸರಕಾರ, ತನ್ನ ನಿವೃತ್ತ ಸೇನಾಧಿಕಾರಿಗಳಿಗೆ, ಐಎಸ್‌ಐ ಅಧಿಕಾರಿಗಳಿಗೆ ಮತ್ತು ರೇಂಜರ್ ಅಧಿಕಾರಿಗಳಿಗೆ ಭಾರತದ ಗಡಿಯುದ್ದಕ್ಕೂ  ಮನೆ ನಿವೇಶನಗಳನ್ನು ನೀಡಿದ್ದು ಅಲ್ಲಿ ಅವರ ವಸತಿ ಗೃಹಗಳು ಇವೆ. 

“ಆಪರೇಶನ್‌ ಅರ್ಜುನ್‌”ನಾಮಾಂಕಿತ ಈ ದಾಳಿಯಲ್ಲಿ  ಭಾರತೀಯ ಸೇನೆ ಪಾಕ್‌ ನಿವೃತ್ತ ಸೇನಾಧಿಕಾರಿಗಳು ಮನೆಗಳನ್ನು ಗುರಿ ಇರಿಸಿ ಲಘು, ಮಧ್ಯಮ ಹಾಗೂ ಪ್ರಾದೇಶಿಕ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದೆ ಎಂದು ದಿ ಟೈಮ್ಸ್‌ ಆಫ್ ಇಂಡಿಯಾ ವರದಿ ತಿಳಿಸಿದೆ.

ಭಾರತೀಯ ಸೇನೆಯ “ಆಪರೇಶನ್‌ ಅರ್ಜುನ್‌” ಪರಿಣಾಮವಾಗಿ ಪಾಕ್‌ ಕಡೆಯಲ್ಲಿ ಭಾರೀ ಹಾನಿ ಉಂಟಾಗಿದ್ದು ಕನಿಷ್ಠ 7 ಪಾಕ್‌ ರೇಂಜರ್‌ಗಳು ಮತ್ತು 11 ಪೌರರು ಹತರಾಗಿರುವುದಾಗಿ ವರದಿ ತಿಳಿಸಿದೆ. 

ಆಪರೇಶನ್‌ ಅರ್ಜುನ್‌ ನಿಂದ ಕಂಗಾಲಾಗಿರುವ ಪಾಕ್‌ ರೇಂಜರ್ ನ ಪಂಜಾಬ್‌ ಡಿಜಿ ಮೇಜರ್‌ ಜನರಲ್‌ ಅಸ್‌ಗರ್‌ ನವೀದ್‌ ಹಯಾತ್‌ ಅವರು ಬಿಎಸ್‌ಎಫ್ ನಿರ್ದೇಶಕ ಕೆ ಎಸ್‌ ಶರ್ಮಾ ಅವರನ್ನು ಸಂಪರ್ಕಿಸಿದ್ದು  ಫ‌ಯರಿಂಗ್‌ ಕೊನೆಗೊಳಿಸುವಂತೆ ಯಾಚಿಸಿದ್ದಾರೆ.

Advertisement

ಆದರೆ ಹಯಾತ್‌ ಖಾನ್‌ ಅವರ ಈ ಕೋರಿಕೆಯನ್ನು ತಿರಸ್ಕರಿಸಿರುವ ಶರ್ಮಾ ಅವರು, “ನಿಮ್ಮ ಕಡೆಯ 12ನೇ ಚೀನಾಬ್‌ ರೇಂಜರ್ನ ಕಮಾಂಡಿಂಗ್‌ ಆಫೀಸರ್‌ ಆಗಿರುವ ಲೆ| ಕ| ಇರ್ಫಾನ್‌ ಅವರು ಪ್ರಚೋದನಾತ್ಮಕ ದಾಳಿಯನ್ನು ಮುಂದುವರಿಸಿರುವುದರಿಂದ ನಾವು ಕೈಕಟ್ಟಿ ಕುಳಿತಿರಲು ಸಾಧ್ಯವಿಲ್ಲ’ ಎಂದು ಖಡಕ್‌ ಉತ್ತರ ನೀಡಿದ್ದಾರೆ. 

ಪಾಕ್‌ ರೇಂಜರ್‌ಗಳು ಭಾರತೀಯ ನೆಲೆಗಳನ್ನು, ಪೌರರನ್ನು ಗುರಿ ಇರಿಸಿಕೊಂಡು ನಿರಂತರವಾಗಿ ಶೆಲ್‌ ಮತ್ತು ಗುಂಡಿನ ದಾಳಿ ನಡೆಸುತ್ತಿರುವುದರಿಂದ ಬಿಎಸ್‌ಎಫ್ “ಆಪರೇಶನ್‌ ಅರ್ಜುನ್‌ ‘ ಆರಂಭಿಸಲೇಬೇಕಾಯಿತೆಂದು ಶರ್ಮಾ ಹೇಳಿದ್ದಾರೆ. 

ಪಶ್ಚಿಮ ಗಡಿ ಉದ್ದಕ್ಕೂ  ಭಾರತೀಯ ಸೇನಾ ಕಾರ್ಯಾಚರಣೆಯನ್ನು ಪುನರ್‌ ರೂಪಿಸುವ ನಿರ್ಧಾರವನ್ನು ಉನ್ನತ ಮಟ್ಟದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಕಳೆದ ವರ್ಷವೂ ಪಾಕಿಸ್ಥಾನ ಭಾರತದ ಗಡಿ ಉದ್ದಕ್ಕೂ ಇದೇ ರೀತಿ ನಿರಂತರ ಶೆಲ್‌ ಹಾಗೂ ಗುಂಡಿನ ದಾಳಿಯನ್ನು ಕೈಗೊಂಡಿದ್ದಾಗ ಭಾರತ, “ಆಪರೇಶನ್‌ ರುಸ್ತುಂ’ ಕಾರ್ಯಾಚರಣೆಯನ್ನು ನಡೆಸಿತ್ತು. ಆ ಬಳಿಕ ಸೆ.19ರಂದು ಸರ್ಜಿಕಲ್‌ ದಾಳಿಯನ್ನು ನಡೆಸಿತ್ತು. ಭಾರತೀಯ ಸೇನಾ ಕಾರ್ಯಾಚರಣೆಯ ಪರಿಣಾಮವಾಗಿ ಪಾಕ್‌ ರೇಂಜರ್‌ಗಳು ಕೊನೆಗೂ ತಮ್ಮ ಶೆಲ್‌ ಹಾಗೂ ಗುಂಡಿನ ದಾಳಿಯನ್ನು ನಿಲ್ಲಿಸಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next