ಶ್ರೀನಗರ: ಪಾಕ್ ಆಕ್ರಮಿತ ಕಾಶ್ಮೀರ ಭಾಗವು ಶೀಘ್ರದಲ್ಲಿ ಭಾರತದೊಂದಿಗೆ ವಿಲೀನವಾಗಲಿದೆ ಎಂಬ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಗೆ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಭಾನುವಾರ ಪ್ರತಿಕ್ರಿಯೆ ನೀಡಿದ್ದು, “ಪಾಕಿಸ್ತಾನವು ಬಳೆಗಳನ್ನು ಧರಿಸಿಲ್ಲ ಮತ್ತು ಅದು ಪರಮಾಣು ಬಾಂಬ್ ಗಳನ್ನು ಸಹ ಹೊಂದಿದ್ದು, ನಮ್ಮ ಮೇಲೆ ಬೀಳಬಹುದು” ಎಂದು ಹೇಳಿದ್ದಾರೆ.
“ಒಂದು ವೇಳೆ ರಕ್ಷಣಾ ಸಚಿವರು ಈ ರೀತಿ ಹೇಳಿದ್ದರು ಮುಂದುವರಿಯಿರಿ, ಯಾರು ನಿಮ್ಮನ್ನು ತಡೆಯುತ್ತಿದ್ದಾರೆ. ಆದರೆ ಒಂದು ನೆನಪಿಡಿ ಅವರು ಬಳೆ ಧರಿಸಿ ಕುಳಿತಿಲ್ಲ. ಅವರ ಬಳಿ ಪರಮಾಣು ಬಾಂಬ್ ಕೂಡಾ ಇದೆ. ದುರದೃಷ್ಟವಶಾತ್, ಆ ಅಣುಬಾಂಬ್ ನಮ್ಮ ಮೇಲೆ ಬೀಳುತ್ತದೆ” ಎಂದು ಅವರು ಹೇಳಿದರು.
ಏಪ್ರಿಲ್ ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಪರಿಗಣಿಸಿ, ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಜನರು ಸ್ವತಃ ಭಾರತದೊಂದಿಗೆ ಇರಲು ಒತ್ತಾಯಿಸುತ್ತಾರೆ ಎಂದು ಹೇಳಿದ್ದರು.
ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಭಾಗವಾಗಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾನುವಾರ ಹೇಳಿದ್ದಾರೆ. ಪಿಒಕೆ ದೇಶದ ಭಾಗ ಎಂದು ಹೇಳುವ ಭಾರತೀಯ ಸಂಸತ್ತಿನ ನಿರ್ಣಯವಿದೆ ಎಂದು ಹೇಳಿದರು.