Advertisement

ಮಿತಿ ಮೀರಿದ ಮಿಡತೆ ಹಾವಳಿ ; ಏಳು ರಾಜ್ಯಗಳಿಗೆ ವ್ಯಾಪಿಸಿದ ಹಾನಿಕಾರಕ ಕೀಟಗಳು

04:46 AM May 29, 2020 | Hari Prasad |

ಹೊಸದಿಲ್ಲಿ: ಪಾಕಿಸ್ಥಾನದಿಂದ ದಂಡೆತ್ತಿ ಬಂದಿರುವ ಮಿಡತೆಗಳ ಹಿಂಡು ದಿನೇ ದಿನೆ ಒಂದೊಂದೇ ರಾಜ್ಯ ಪ್ರವೇಶಿಸುತ್ತಿದೆ.

Advertisement

ಪ್ರಸ್ತುತ ಏಳು ರಾಜ್ಯಗಳಲ್ಲಿ ತನ್ನ ಹಾವಳಿ ಆರಂಭಿಸಿದೆ. 20 ಜಿಲ್ಲೆಗಳ 303 ಪ್ರದೇಶಗಳಲ್ಲಿ ಒಟ್ಟು 47,000 ಹೆಕ್ಟೇರ್‌ ಕೃಷಿ ಭೂಮಿಯಲ್ಲಿನ ಬೆಳೆಗೆ ಮಿಡತೆಗಳು ಮುತ್ತಿಗೆ ಹಾಕಿದೆ.

ಪರಿಸ್ಥಿತಿಯ ಗಂಭೀರತೆ ಅರಿತ ಕೇಂದ್ರ ಸರಕಾರ ಕೀಟಗಳ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್‌, ಮಧ್ಯಪ್ರದೇಶ, ಹರ್ಯಾಣ ರಾಜ್ಯಗಳಲ್ಲಿದ್ದ ಮಿಡತೆಗಳು ಗುರುವಾರ ಬೆಳಗಾಗುವ ವೇಳೆಗೆ ಉತ್ತರಪ್ರದೇಶ ಮತ್ತು ಪಂಜಾಬ್‌ ಗಡಿಯನ್ನೂ ಪ್ರವೇಶಿಸಿವೆ. ಹೀಗಾಗಿ ಪಂಜಾಬ್‌ನಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.

ರಾಜಸ್ಥಾನದ 20 ಜಿಲ್ಲೆಗಳು, ಮಧ್ಯಪ್ರದೇಶದ ಒಂಭತ್ತು, ಮಹಾರಾಷ್ಟ್ರ, ಗುಜರಾತ್‌ನಲ್ಲಿ ತಲಾ ಎರಡು ಹಾಗೂ ಉತ್ತರಪ್ರದೇಶ, ಪಂಜಾಬ್‌ನ ತಲಾ ಒಂದು ಜಿಲ್ಲೆಯಲ್ಲಿ ಮಿಡತೆ ಗಳ ಹಿಂಡು ಕಾಣಿಸಿಕೊಂಡಿದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ.


ವಿಮಾನ, ಡ್ರೋನ್‌ ಬಳಕೆ: ಈ ನಡುವೆ ಮಿಡತೆಗಳ ಹಾವಳಿಯಿಂದಾಗಿ ದೇಶದ ಆಹಾರ ಭದ್ರತೆಗೆ ಅಪಾಯ ಎದುರಾಗಿರುವ ಹಿನ್ನೆಲೆಯಲ್ಲಿ, ಮಿಡತೆಗಳ ವಿರುದ್ಧ ಕಾರ್ಯಾಚರಣೆ ನಡೆಸಲು, ರಿಮೋಟ್‌ನಿಂದ ನಿಯಂತ್ರಿಸಬಹುದಾದ ತನ್ನ ಏರ್‌ಕ್ರಾಫ್ಟ್‌ಗಳನ್ನು ಬಳಸಲು ನಾಗರಿಕ ವಿಮಾನಯಾನ ಸಚಿವಾಲಯ ಷರತ್ತುಬದ್ಧ ಅನುಮತಿ ನೀಡಿದೆ. ಇದರೊಂದಿಗೆ ಡ್ರೋನ್‌ಗಳನ್ನು ಬಳಸಿ ಮಿಡತೆಗಳ ಮೇಲೆ ಕೀಟನಾಶಕ ಸಿಂಪಡಿಸಲು ಎರಡು ಸಂಸ್ಥೆಗಳ ಜತೆ ಒಪ್ಪಂದ ಅಂತಿಮಗೊಂಡಿದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ.

Advertisement

ಕೃಷಿಕರ ನೆರವಿಗೆ ನಿಂತ ಸರಕಾರ: ಒಂದೆಡೆ ಕೋವಿಡ್ ಸೋಂಕಿನ ವಿರುದ್ಧ ನಿರಂತರವಾಗಿ ಹೋರಾಡುತ್ತಿರುವ ಕೇಂದ್ರ ಸರಕಾರ, ಇದೀಗ ಮಿಡತೆಗಳ ಹಾವಳಿಯಿಂದ ಕಂಗೆಟ್ಟಿರುವ ಏಳು ರಾಜ್ಯಗಳ ಕೃಷಿಕರ ನೆರವಿಗೆ ಧಾವಿಸಿದೆ. ಮಿಡತೆಗಳ ಮೇಲೆ ರಾಸಾಯನಿಕ ಸಿಂಪಡಿಸಲು 60 ಹೆಚ್ಚುವರಿ ಸುಧಾರಿತ ಸ್ಪ್ರೇಯರ್‌ಗಳನ್ನು ಯುನೈಟೆಡ್‌ ಕಿಂಗ್ಡಮ್‌ನಿಂದ ತರಿಸಿಕೊಳ್ಳಲು ಕೇಂದ್ರ ಕೃಷಿ ಸಚಿವಾಲಯ ಸಮ್ಮತಿಸಿದೆ.

ಇದರೊಂದಿಗೆ ಮಿಡತೆಗಳ ಪರಿಣಾಮಕಾರಿ ನಿಯಂತ್ರಣಕ್ಕಾಗಿ ಕೀಟನಾಶಕ ಸಿಂಪಡಿಸಲು 89 ಅಗ್ನಿಶಾಮಕ ವಾಹನಗಳು, 120 ಸರ್ವೆ ವಾಹನಗಳು, ರಾಸಾಯನಿಕ ಸಿಂಪಡಣೆ ಸಾಧನಗಳನ್ನು ಒಳಗೊಂಡ 47 ನಿಯಂತ್ರಕ ವಾಹನಗಳು ಮತ್ತು ಸ್ಪ್ರೇಯರ್‌ಗಳನ್ನು ಅಳವಡಿಸಿರುವ 810 ಟ್ರ್ಯಾಕ್ಟರ್‌ಗಳನ್ನು ವಿವಿಧ ರಾಜ್ಯಗಳಲ್ಲಿ ಈಗಾಗಲೇ ನಿಯೋಜಿಸಲಾಗಿದೆ. ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ನೇತೃತ್ವದಲ್ಲಿ ಈ ಎಲ್ಲ ಚಟುವಟಿಕೆಗಳು ನಡೆಯುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next