ನವದೆಹಲಿ: ಭಾರತೀಯ ವಾಯುಪಡೆ ನಡೆಸಿದ ಪಾಕಿಸ್ತಾನದೊಳಗೆ ನಡೆಸಿದ್ದ ಮಿಂಚಿನ ಕಾರ್ಯಾಚರಣೆಯಿಂದ ತೀವ್ರ ಮುಖಭಂಗಕ್ಕೊಳಗಾಗಿರುವ ಪಾಕಿಸ್ತಾನ ಕೈ, ಕೈ ಹಿಸುಕಿಕೊಳ್ಳುತ್ತಿದ್ದರೆ ಮತ್ತೊಂದೆಡೆ ಪಾಕಿಸ್ತಾನದ ಮಾಧ್ಯಮಗಳು ಭಾರತದ ವಿರುದ್ಧ ನಕಲಿ ವಿಡಿಯೋ, ಫೂಟೇಜ್ ಬಳಸಿ ಸುದ್ದಿಯನ್ನು ಬಿತ್ತರಿಸುತ್ತಿವೆ.
ಬುಧವಾರ ಜಮ್ಮು-ಕಾಶ್ಮೀರದ ಬುದ್ಗಾಮ್ ನಲ್ಲಿ ಗಸ್ತು ತಿರುಗುತ್ತಿದ್ದ ಮಿಗ್ 21 ವಿಮಾನವೊಂದು ಪತನಗೊಂಡಿತ್ತು. ಆದರೆ ಪಾಕಿಸ್ತಾನದ ಮಾಧ್ಯಮಗಳು ಅದನ್ನು ತಿರುಚಿ, ಪಾಕ್ ದಾಳಿಗೆ ಭಾರತೀಯ ವಾಯುಪಡೆಯ ಎರಡು ವಿಮಾನ ಹೊಡೆದುರುಳಿಸಿರುವುದಾಗಿ ಸುದ್ದಿ ಬಿತ್ತರಿಸಿದ್ದವು!
ಪಾಕಿಸ್ತಾನದ ಹಲವು ಟಿವಿ ಚಾನೆಲ್ ಗಳು ಹಳೇಯ ಮಿಗ್ ಮತ್ತು ಹವಾಕ್ ಯುದ್ಧ ವಿಮಾನ ಪತನಗೊಂಡ ವಿಡಿಯೋ ಬಳಸಿ ಸುದ್ದಿಯನ್ನು ಪ್ರಸಾರ ಮಾಡಿದ್ದವು. ಐಎಎಫ್ ಹವಾಕ್ ಜೆಟ್ ವಿಮಾನ 2018ರ ಮಾರ್ಚ್ ನಲ್ಲಿ ಒಡಿಶಾ-ಜಾರ್ಖಂಡ್ ಗಡಿಯ ನದಿ ಸಮೀಪ ಪತನಗೊಂಡಿತ್ತು. ಮತ್ತೊಂದು 2016ರಲ್ಲಿ ರಾಜಸ್ತಾನದ ಜೋಧ್ ಪುರದ ಜನವಸತಿ ಪ್ರದೇಶದಲ್ಲಿ ಮಿಗ್ 27 ಪತನಗೊಂಡಿತ್ತು. ಈ ವಿಡಿಯೋ ಉಪಯೋಗಿಸಿಕೊಂಡು ಪಾಕ್ ಸೇನೆ ಭಾರತದ ಎರಡು ವಿಮಾನವನ್ನು ಹೊಡೆದುರುಳಿಸಿರುವುದಾಗಿ ಪಾಕ್ ಟಿವಿ ಚಾನೆಲ್ ಗಳು ವರದಿ ಬಿತ್ತರಿಸಿದ್ದವು!
ನಕಲಿ ವಿಡಿಯೋ, ನಕಲಿ ಫೂಟೇಜ್ ಬಳಸಿ ಸುಳ್ಳು ಸುದ್ದಿ ಬಿತ್ತರಿಸುತ್ತಿರುವ ಪಾಕಿಸ್ತಾನದ ಚಾನೆಲ್ ಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ.