ದ್ವೀಪ ರಾಷ್ಟ್ರ ಶ್ರೀಲಂಕಾ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸಿದ್ದು, ಪೆಟ್ರೋಲ್, ಡೀಸೆಲ್ ಇಲ್ಲದೆ ಪರದಾಡುವಂತಾಗಿದೆ. ಇದೀಗ ಪಾಕಿಸ್ತಾನ ಕೂಡಾ ಅದೇ ಸಾಲಿಗೆ ಸೇರಿದ್ದು ದೇಶದಲ್ಲಿ ವಿದ್ಯುತ್ ಕೊರತೆ ತೀವ್ರವಾಗಿದೆ. ಪಾಕಿಸ್ತಾನದಲ್ಲಿ ಇಂಧನ ಕೊರತೆಯಿಂದಾಗಿ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮ ಪಾಕ್ ನಲ್ಲಿ ಲೋಡ್ ಶೆಡ್ಡಿಂಗ್ ಅವಧಿಯನ್ನು 12ಗಂಟೆಗಳಿಗೆ ಏರಿಕೆ ಮಾಡಲಾಗಿದೆ.
ಶ್ರೀಲಂಕಾದಂತೆ ಪಾಕ್ ಕೂಡಾ ದಿವಾಳಿಯತ್ತ?
ಪ್ರಸ್ತುತ ಪಾಕಿಸ್ತಾನದಲ್ಲಿನ ಸ್ಥಿತಿ ಶ್ರೀಲಂಕಾದ ಸನ್ನಿವೇಶವನ್ನು ನೆನಪಿಸುತ್ತಿದೆ. ಏತನ್ಮಧ್ಯೆ ಪಾಕಿಸ್ತಾನ ಸರ್ಕಾರ ಮುಂಬರುವ ದಿನಗಳಲ್ಲಿ ಬ್ಲ್ಯಾಕ್ ಔಟ್ (ಲೋಡ್ ಶೆಡ್ಡಿಂಗ್) ಅವಧಿಯನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂಬ ಆತಂಕ ಪಾಕಿಸ್ತಾನಿಯರದ್ದಾಗಿದೆ.
ವಾಸ್ತವವಾಗಿ ಪಾಕಿಸ್ತಾನದಲ್ಲಿ ಭಾರೀ ಪ್ರಮಾಣದಲ್ಲಿ ಇಂಧನ ಕೊರತೆಯನ್ನು ಎದುರಿಸುವಂತಾಗಿದೆ. ಈ ನಿಟ್ಟಿನಲ್ಲಿ ಶಹಬಾಜ್ ಷರೀಫ್ ನೇತೃತ್ವದ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಹಲವಾರು ನಿರ್ಧಾರವನ್ನು ತೆಗೆದುಕೊಂಡಿತ್ತು.
1)ದೇಶದ ಹಲವು ಕಚೇರಿಗಳು ವರ್ಕ್ ಫ್ರಂ ಹೋಮ್ ಅನ್ನು ಕಡ್ಡಾಯಗೊಳಿಸಿತ್ತು.
2)ವಿವಾಹ ಸಮಾರಂಭಗಳನ್ನು ರಾತ್ರಿ 10ಗಂಟೆಯೊಳಗೆ ಮುಕ್ತಾಯಗೊಳಿಸುವಂತೆ ಆದೇಶ ಹೊರಡಿಸಲಾಗಿತ್ತು.
3)ನಿರ್ದಿಷ್ಟ ಸಮಯದವರೆಗೆ ಬೀದಿ ದೀಪಗಳನ್ನು ಆಫ್ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
4)ಹವಾನಿಯಂತ್ರಣ ಸಾಧನಗಳ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ.
ಆದರೂ ಇಷ್ಟೆಲ್ಲಾ ಮುನ್ನೆಚ್ಚರಿಕೆಗಳ ಹೊರತಾಗಿಯೂ ಇಂಧನ ಬಿಕ್ಕಟ್ಟಿನಿಂದ ಹೊರಬರಲು ಪಾಕಿಸ್ತಾನಕ್ಕೆ ಸಾಧ್ಯವಾಗಿಲ್ಲ. ಇದರಿಂದಾಗಿ ಬ್ಲ್ಯಾಕ್ ಔಟ್ ಸಮಯವನ್ನು ಹೆಚ್ಚಳ ಮಾಡಲು ಪಾಕ್ ಸರ್ಕಾರ ನಿರ್ಧರಿಸಿದೆ. ಇಂಧನ ಕೊರತೆಯಿಂದ ಇಸ್ಲಾಮಾಬಾದ್ ಸೇರಿದಂತೆ ಪಾಕಿಸ್ತಾನದ ಹಲವು ನಗರಗಳು ಕತ್ತಲಲ್ಲಿ ಮುಳುಗಿದೆ!
ಪಾಕಿಸ್ತಾನದ ಆರ್ಥಿಕತೆ ತೀವ್ರ ಬಿಕ್ಕಟ್ಟಿನತ್ತ ಸಾಗತೊಡಗಿದೆ. ದೇಶದಲ್ಲಿನ ಬೆಲೆ ಏರಿಕೆ ದರ ಶೇ.13.08ಕ್ಕೆ ಏರಿಕೆಯಾಗಿದೆ. ಇದರ ಪರಿಣಾಮ ಆಹಾರ ಸಮಸ್ಯೆಯೂ ಶೋಚನೀಯ ಸ್ಥಿತಿಗೆ ತಲುಪಿದೆ.
ಈ ಬಾರಿ ಪ್ರತಿಯೊಬ್ಬ ಪಾಕಿಸ್ತಾನದ ನಾಗರಿಕ ಹಸಿವಿನಿಂದ ಹೆಚ್ಚು ಉರಿಯಬೇಕಾಗುತ್ತದೆ. ಒಟ್ಟಿನಲ್ಲಿ ಪರಿಸ್ಥಿತಿ ಭಾರೀ ಹದಗೆಡುತ್ತಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕಳವಳ ವ್ಯಕ್ತಪಡಿಸಿರುವುದು ಪಾಕ್ ನ ಶೋಚನೀಯ ಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.
ಸಂಕಷ್ಟದ ಪರಿಸ್ಥಿತಿಯಿಂದ ಹೊರಬರಲು ಸಾಧ್ಯವಾಗದೆ ನೂತನ ಪ್ರಧಾನಿ ಶೆಹಬಾಝ್ ಶರೀಫ್ ಅಸಹಾಯಕರಾಗಿದ್ದಾರೆ. ಪಾಕಿಸ್ತಾನದಲ್ಲಿ ನೈಸರ್ಗಿಕ ಅನಿಲ ಬೆಲೆ ಭಾರೀ ದುಬಾರಿಯಾಗಿದೆ. ವಿದ್ಯುತ್ ಕೊರತೆ ನೀಗಿಸಲು ತೈಲವನ್ನು ಖದೀದಿಸುವುದು ಕೂಡಾ ದುಬಾರಿಯಾಗಿದೆ ಎಂದು ಶರೀಫ್ ಕೈಚೆಲ್ಲಿದ್ದಾರೆ. ಅದಕ್ಕೆ ಕಾರಣ ಪಾಕಿಸ್ತಾನದ ಹಣದ ಖಜಾನೆಯೇ ಖಾಲಿಯಾಗಿರುವುದು! ಇದೀಗ ಪಾಕಿಸ್ತಾನ ಕೂಡಾ ಶ್ರೀಲಂಕಾದ ಸಾಲಿಗೆ ಸೇರುವ ದಿನ ದೂರವಿಲ್ಲ.