ಹೊಸದಿಲ್ಲಿ: ಪಾಕಿಸ್ಥಾನದಲ್ಲಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ‘ಎಕ್ಸ್’ ನಿಷೇದಿಸುವುದರ ಗುರಿಯನ್ನು ಹೊಂದಿರುವುದಾಗಿ ಆಂತರಿಕ ಸಚಿವಾಲಯ ಇಸ್ಲಾಮಾಬಾದ್ ಹೈಕೋರ್ಟ್‌ಗೆ (ಐಎಚ್‌ಸಿ) ಮಾಹಿತಿ ನೀಡಿದೆ ಎಂದು ಡಾನ್ ವರದಿ ಮಾಡಿದೆ.
ನಿಷೇಧವನ್ನು ಪ್ರಶ್ನಿಸಿ ಪತ್ರಕರ್ತ ಎಹ್ತಿಶಾಮ್ ಅಬ್ಬಾಸಿ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ಸಚಿವಾಲಯವನ್ನು ಪ್ರತಿನಿಧಿಸುವ ಆಂತರಿಕ ಕಾರ್ಯದರ್ಶಿ ಖುರ್ರಾಮ್ ಅಘಾ ಅವರು ಹೈಕೋರ್ಟ್‌ಗೆ ವರದಿಯನ್ನು ಸಲ್ಲಿಸಿದ್ದಾರೆ.
ಫೆಬ್ರವರಿ 8 ರ ಸಾರ್ವತ್ರಿಕ ಚುನಾವಣೆಯಲ್ಲಿ ರಿಗ್ಗಿಂಗ್ ಕುರಿತು ಪಾಕಿಸ್ಥಾನದ ಮುಖ್ಯ ಚುನಾವಣ ಆಯುಕ್ತ ಮತ್ತು ಮುಖ್ಯ ನ್ಯಾಯಾಧೀಶರ ವಿರುದ್ಧ ರಾವಲ್ಪಿಂಡಿಯ ಮಾಜಿ ಕಮಿಷನರ್ ಲಿಯಾಕತ್ ಚಟ್ಟಾ ಅವರು ಮಾಡಿದ ಆರೋಪದ ನಂತರ ಫೆಬ್ರವರಿ 17 ರಿಂದ ಪಾಕಿಸ್ಥಾನದಲ್ಲಿ ಎಕ್ಸ್ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಎಕ್ಸ್ ಕಾನೂನುಬದ್ಧ ನಿರ್ದೇಶನಗಳನ್ನು ಅನುಸರಿಸಲು ವಿಫಲವಾಗಿದೆ ಮತ್ತು ದುರುಪಯೋಗದ ಬಗ್ಗೆ ಕಳವಳಗಳನ್ನು ಪರಿಹರಿಸಲು ನಿಷೇಧ ಹೇರಲು ಕಾರಣವಾಯಿತು.ಗುಪ್ತಚರ ಮತ್ತು ಭದ್ರತಾ ಏಜೆನ್ಸಿಗಳ ವರದಿಗಳನ್ನು ಪರಿಗಣಿಸಿ ರಾಷ್ಟ್ರೀಯ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ ಮತ್ತು ದೇಶದ ಸಮಗ್ರತೆಯ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಂತರಿಕ ಸಚಿವಾಲಯದ ವರದಿ ಹೇಳಿದೆ.
ಹಕ್ಕುಗಳ ಹೋರಾಟ ಸಂಸ್ಥೆಗಳು, ಪತ್ರಕರ್ತರ ಸಂಘಟನೆಗಳು ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರು ಸಾಮಾಜಿಕ ಮಾಧ್ಯಮ ತಡೆ ವಿಧಿಸಿರುವುದನ್ನು ಖಂಡಿಸಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲಿನ
ನಿರ್ಬಂಧಗಳನ್ನು ತೆಗೆದುಹಾಕುವಂತೆ ಯುನೈಟೆಡ್ ಸ್ಟೇಟ್ಸ್ ಪಾಕಿಸ್ಥಾನಕ್ಕೆ ಕರೆ ನೀಡಿದೆ.
ಜಗತ್ತು ನಗುವುದು
ಈ ಕ್ರಮವನ್ನು ಸಿಂಧ್ ಪ್ರಾಂತದ ಹೈಕೋರ್ಟ್ ಟೀಕಿಸಿದೆ. “ಇಂಥ ಕ್ರಮದ ಮೂಲಕ ಏನನ್ನು ಸಾಧಿಸಲು ಹೊರಟಿದ್ದೀರಿ?ಈ ರೀತಿಯ ಕ್ರಮದಿಂದ ಪಾಕಿಸ್ಥಾನವನ್ನು ನೋಡಿ ಜಗತ್ತು ನಗಲಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ ಬಳಿಕ ಎಕ್ಸ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೇಲೆ ಫೆಬ್ರವರಿಯಲ್ಲಿ ನಿಷೇಧ ಹೇರಲಾಗಿತ್ತು.