ನವದೆಹಲಿ:ಭಾರತದ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆ ಮಾಡುವುದಾಗಿ ಪಾಕಿಸ್ತಾನ ಘೋಷಿಸಿದ್ದ ಕೆಲ ಹೊತ್ತಿನಲ್ಲಿ ಭಾರತ, ತಮ್ಮ ಕಮಾಂಡರನ್ನು ವಿಮಾನ ಮಾರ್ಗದಲ್ಲಿ ವಾಪಸ್ ಕಳುಹಿಸಬೇಕು, ವಾಘಾ ಗಡಿಯ ರಸ್ತೆಯ ಮೂಲಕ ಬೇಡ ಎಂದು ಪಾಕಿಸ್ತಾನಕ್ಕೆ ತಿಳಿಸಿತ್ತು. ಆದರೆ ಪಾಕಿಸ್ತಾನ ಭಾರತದ ಬೇಡಿಕೆಯನ್ನು ತಿರಸ್ಕರಿಸಿತ್ತು ಎಂದು ಅಧಿಕಾರಿಗಳ ಮೂಲಗಳು ತಿಳಿಸಿರುವುದಾಗಿ ವರದಿ ಹೇಳಿದೆ.
ಭಾರತದ ದೂರವಾಣಿ ಕರೆ ಬಳಿಕ ಅಂದು ರಾತ್ರಿ ಪಾಕಿಸ್ತಾನದ ಅಧಿಕಾರಿಗಳು ಭಾರತೀಯ ಅಧಿಕಾರಿಗಳನ್ನು ಸಂಪರ್ಕಿಸಿ, ತಾವು ಅಭಿನಂದನ್ ಅವರನ್ನು ಅಟ್ಟಾರಿ ವಾಘಾ ಗಡಿ ಮೂಲಕವೇ ಹಸ್ತಾಂತರಿಸುವುದಾಗಿ ತಿಳಿಸಿರುವುದಾಗಿ ವರದಿ ಹೇಳಿದೆ.
ಭಾರತದ ವಾಯುಪಡೆಯ ಪೈಲಟ್ ಅಭಿನಂದನ್ ಅವರನ್ನು ಕರೆತರಲು ಪಾಕಿಸ್ತಾನಕ್ಕೆ ವಿಶೇಷ ವಿಮಾನ ಕಳುಹಿಸಲು ಭಾರತದ ರಕ್ಷಣಾ ಸಚಿವಾಲಯ ಸಿದ್ಧತೆ ನಡೆಸಿತ್ತು. ಆದರೆ ಪಾಕಿಸ್ತಾನ ಅದಕ್ಕೆ ಅವಕಾಶ ನೀಡಲಿಲ್ಲ ಎಂದು ಮೂಲಗಳು ತಿಳಿಸಿವೆ.
ಬುಧವಾರ ವಾಯುಪಡೆ ವಿಮಾನದಿಂದ ಪ್ಯಾರಚೂಟ್ ಮೂಲಕ ಸುರಕ್ಷಿತವಾಗಿ ಅಭಿನಂದನ್ ಅವರು ಕೆಳಗೆ ಜಿಗಿದಿದ್ದರು, ಆದರೆ ಅವರು ಪಾಕಿಸ್ತಾನದ ಗಡಿಯೊಳಗೆ ಬಿದ್ದ ಪರಿಣಾಮ, ಪಾಕ್ ಸೇನೆ ಅವರನ್ನು ವಶಕ್ಕೆ ತೆಗೆದುಕೊಂಡಿತ್ತು. ಏತನ್ಮಧ್ಯೆ ಪಾಕ್ ವಶದಲ್ಲಿದ್ದ ಅಭಿನಂದನ್ ಅವರನ್ನು ಬೇಷರತ್ ಆಗಿ ಭಾರತಕ್ಕೆ ಹಸ್ತಾಂತರಿಸಬೇಕು, ಇಲ್ಲವೇ ಕಠಿಣ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿತ್ತು. ತದನಂತರ ತಮ್ಮ ವಶದಲ್ಲಿರುವ ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸುವುದಾಗಿ ಪಾಕಿಸ್ತಾನ ಬಹಿರಂಗವಾಗಿ ಘೋಷಿಸಿತ್ತು.