ಇಸ್ಲಾಮಾಬಾದ್: ಅಮೆರಿಕದೊಂದಿಗೆ ಭಾರತ ತುಂಬ ಗೌರವಾನ್ವಿತ ಸಂಬಂಧ ಹೊಂದಿದೆ. ಆದರೆ ಅಮೆರಿಕದೊಂದಿಗೆ ಪಾಕಿಸ್ತಾನ ಯಜಮಾನ-ಗುಲಾಮ ರೀತಿಯ ಸಂಬಂಧ ಹೊಂದಿದೆ ಎಂದು ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದರು.
ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪಿಟಿಐ ಅಧ್ಯಕ್ಷ, “ಭಾರತದಂತೆ ಪಾಕಿಸ್ತಾನವು ಕೂಡ ಅಮೆರಿಕದೊಂದಿಗೆ ಗೌರವಾನ್ವಿತ ಸಂಬಂಧ ಹೊಂದಬೇಕೆಂಬುದು ನನ್ನ ಬಯಕೆಯಾಗಿದೆ. ಆದರೆ ನಮ್ಮದು ಗುಲಾಮ-ಸೇವಕ ರೀತಿಯ ಸಂಬಂಧದಂತಾಗಿದೆ,’ ಎಂದು ಬೇಸರ ವ್ಯಕ್ತಪಡಿಸಿದರು.
“ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾದಿಂದ ತೈಲ ಖರೀದಿಸಬಾರದು ಎಂದು ಅಮೆರಿಕ ನಿರ್ಬಂಧ ವಿಧಿಸಿದೆ. ಇದರ ಹೊರತಾಗಿಯೂ ಭಾರತ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿದೆ. ದೇಶದ ಜನರ ಒಳಿತಿಗಾಗಿ ಅಮೆರಿಕಗೆ “ಇಲ್ಲ’ ಎಂದು ಹೇಳುವ ಛಾತಿ ಭಾರತಕ್ಕಿದೆ. ಆದರೆ ಈ ರೀತಿಯ ಛಾತಿಯನ್ನು ಪಾಕಿಸ್ತಾನ ಕೂಡ ಬೆಳಸಿಕೊಳ್ಳಬೇಕು,’ ಎಂದು ಇಮ್ರಾನ್ ಖಾನ್ ಆಶಿಸಿದರು.