ಹೊಸದಿಲ್ಲಿ : ಪಾಕಿಸ್ತಾನ ತನ್ನ ನೆಲದ ಉಗ್ರವಾದವನ್ನು ವಿಶ್ವಕ್ಕೆಲ್ಲ ಹಂಚಿದೆ. ಭಯೋತ್ಪಾದನಾ ಚಟುವಟಿಕೆಗಳಿಗೆ ಪಾಕ್ ಬೃಹತ್ ಕೇಂದ್ರಬಿಂದು ಎಂದು ಭಾರತದ ವಿದೇಶಾಂಗ ಸಚಿವಾಲಯ ವಕ್ತಾರ ಅನುರಾಗ್ ಶ್ರೀವಾಸ್ತವ್, ಪಾಕಿಸ್ತಾನದ ವಿರುದ್ಧ ನೇರ ವಾಗ್ಧಾಳಿ ಮಾಡಿದ್ದಾರೆ.
“ಪ್ರಧಾನಿ ಇಮ್ರಾನ್‌ಖಾನ್ ಕಳೆದ ವರ್ಷ, ಪಾಕ್ 30- 40 ಸಾವಿರ ಉಗ್ರರಿಗೆ ಆಶ್ರಯ ನೀಡಿದೆ ಎಂದು ತಪ್ಪೊಪ್ಪಿಕೊಂಡಿದ್ದರು. ಈ ಹೇಳಿಕೆಯನ್ನು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ನೆನಪಿಸಿಕೊಳ್ಳಬೇಕು’ ಎಂದು ಅವರು ತಿಳಿಸಿದ್ದಾರೆ.
ಇತ್ತೀಚೆಗೆ, ವಿಶ್ವಸಂಸ್ಥೆಯ ವಿಶ್ಲೇಷಣಾತ್ಮಕ ಬೆಂಬಲ ಮತ್ತು ನಿರ್ಬಂಧ ಮೇಲ್ವಿಚಾರಣಾ ತಂಡದ ವರದಿಯಲ್ಲಿ ಅಫ್ಘಾನಿಸ್ತಾನದಲ್ಲಿ ಸಕ್ರಿಯವಾಗಿರುವ ವಿದೇಶಿ ಭಯೋತ್ಪಾದಕರಲ್ಲಿ 6,500 ಮಂದಿ ಪಾಕಿಸ್ತಾನದವರೇ ಆಗಿದ್ದಾರೆ ಎಂದು ಹೇಳಲಾಗಿತ್ತು. ಈ ಆರೋಪವನ್ನು ನಿರಾಕರಿಸಿದ್ದ ಪಾಕಿಸ್ತಾನದ ವಿದೇಶಾಂಗ ಇಲಾಖೆ, ಉಗ್ರವಾದಕ್ಕೆ ಭಾರತವೇ ಕಾರಣ ಎಂದಿತ್ತು. ಆ ಆರೋಪಕ್ಕೆ ಶ್ರೀವಾಸ್ತವ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. “ವಿಶ್ವಸಂಸ್ಥೆ ಮತ್ತು ವಿಶ್ವ ಸಮುದಾಯಕ್ಕೆ ಪಾಕಿಸ್ತಾನ ಭಯೋತ್ಪಾದನೆಯ ಹಾಟ್‌ಸ್ಪಾಟ್ ಎಂದು ಚೆನ್ನಾಗಿ ಗೊತ್ತಿದೆ. ಪಾಕಿಸ್ತಾನ ಆತ್ಮಾವಲೋಕನ ಮಾಡಿ ಕೊಳ್ಳಬೇಕು. ಪಾಕ್ 40 ಸಾವಿರ ಸಂಖ್ಯೆಯ ಉಗ್ರರಿಗೆ ಆಶ್ರಯ ನೀಡಿದ್ದರ ಬಗ್ಗೆ ಇಮ್ರಾನ್ ಖಾನ್, ವಾಷಿಂಗ್ಟನ್‌ನಲ್ಲಿ ನಡೆದ ಸಭೆಯಲ್ಲಿಯೇ ತಪ್ಪೊಪ್ಪಿಕೊಂಡಿದ್ದನ್ನು ಮರೆಯಬಾರದು” ಎಂದು ಅವರು ಹೇಳಿದ್ದಾರೆ.
ಇಂಧನ ಕೊರತೆ
ಪಾಕಿಸ್ತಾನದ ಹಲವು ನಗರಗಳು ಈಗ ಪೆಟ್ರೋಲ್, ಡೀಸೆಲ್ ಕೊರತೆಯನ್ನು ಎದುರಿಸುತ್ತಿವೆ. ಬಲೂಚಿ ಸ್ತಾನ, ಕ್ವೆಟ್ಟಾದಲ್ಲಿ ಪೆಟ್ರೋಲ್, ಡೀಸೆಲ್‌ಗಾಗಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಕರಾಚಿಯಲ್ಲೂ ಇದೇ ಪರಿಸ್ಥಿತಿ ತಲೆದೋರಿದೆ. ತೈಲ ಅಭಾವದಿಂದ ಬೆಲೆಯೂ ಹೆಚ್ಚಳವಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.