ಇಸ್ಲಾಮಾಬಾದ್ : ಪಾಕ್ ರಾಜಧಾನಿಯನ್ನು ವಾರಗಳ ಕಾಲ ಮುತ್ತಿಗೆ ಹಾಕಿದ್ದ ಪ್ರತಿಭಟನಕಾರರಿಗೆ ಪಾಕ್ ಸರಕಾರ ಕೊನೆಗೂ ಮಣಿದಿದೆ. ಪರಿಣಾವಾಗಿ ಕಳೆದ ಶನಿವಾರ ಪ್ರತಿಭಟನಕಾರರೊಂದಿಗೆ ಕುದುರಿಸಲಾಗಿದ್ದ ಒಪ್ಪಂದದ ಪ್ರಕಾರ ಪಾಕ್ ಕಾನೂನು ಸಚಿವ ಝಾಹಿದ್ ಹಮೀದ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
“ದೇಶವನ್ನು ಆಡಳಿತಾತ್ಮಕ ಬಿಕ್ಕಟ್ಟಿನಿಂದ ಪಾರುಗೊಳಿಸುವ ಸಲುವಾಗಿ ಕಾನೂನು ಸಚಿವ ಹಮೀದ್ ಅವರು ಪ್ರಧಾನಿ ಶಾಹೀದ್ ಖಕಾನ್ ಅಬ್ಟಾಸಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ’ ಎಂದು ಪಾಕಿಸ್ಥಾನದ ಡಾನ್ ದೈನಿಕ ವರದಿ ಮಾಡಿದೆ. ಪ್ರಧಾನಿ ಅಬ್ಟಾಸಿ ಅವರು ಸಚಿವ ಹಮೀದ್ ಅವರ ತ್ಯಾಗಪತ್ರವನ್ನು ಇಂದು ಸಂಜೆಯೊಳಗೆ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಡಾನ್ ಹೇಳಿದೆ.
ದೇಶದಲ್ಲಿನ ಮುಂಬರುವ ಮಹಾ ಚುನಾವಣೆಗೆ ಮುನ್ನ ಧಾರ್ಮಿಕ ಪಕ್ಷಗಳನ್ನು ಏಕ ವೇದಿಕೆಗೆ ತರಲು ಉದ್ದೇಶಿಸಿದ್ದ ಕಾನೂನು ಸಚಿವ ಹಮೀದ್ ರಾಜೀನಾಮೆಯನ್ನು ಪಡೆಯುವುದು ಪ್ರತಿಭಟಕಾರರ ಮುಖ್ಯ ಉದ್ದೇಶಗಳಲ್ಲಿ ಒಂದಾಗಿತ್ತು.
ಹಮೀದ್ ಅವರು ತಮ್ಮ ಸಚಿವ ಪದಕ್ಕೆ ರಾಜೀನಾಮೆ ನೀಡಿರುವರಾದರೂ ಪ್ರತಿಭಟಕಾರರು ಮತ್ತು ಪ್ರತಿಭಟನೆಯನ್ನು ಹಿಂದೆಗೆದುಕೊಂಡಿರುವ ಬಗ್ಗೆ ಇನ್ನಷ್ಟೇ ಪ್ರಕಟಿಸಬೇಕಾಗಿದೆ.
ಪ್ರತಿಭಟನಕಾರರನ್ನು ಬಲವಂತದಿಂದ ಎತ್ತಂಗಡಿ ಮಾಡುವ ಸೇನಾ ಕಾರ್ಯಾಚರಣೆಯು ಗೊಂದಲಕಾರಿಯಾಗಿ ವಿಫಲವಾದುದನ್ನು ಅನುಸರಿಸಿ ಸಚಿವ ಹಮೀದ್ ತಮ್ಮ ಪದಕ್ಕೆ ರಾಜೀನಾಮೆ ನೀಡಿದ್ದರು.
ಪ್ರತಿಭಟನಕಾರರನ್ನು ಮಣಿಸಲು ಇನ್ನೂಹೆಚ್ಚಿನ ಸೇನಾ ಬಲವನ್ನು ರವಾನಿಸುವಂತೆ ಪಾಕ್ ಸರಕಾರ ಮಾಡಿಕೊಂಡಿದ್ದ ಮನವಿಯನ್ನು ಪಾಕ್ ಸೇನೆ ತಿರಸ್ಕರಿಸಿತ್ತು. ಇದು ಸಚಿವರ ರಾಜೀನಾಮೆಗೆ ಮುಖ್ಯ ಕಾರಣವಾಯಿತು ಎಂದು ಡಾನ್ ವರದಿ ಮಾಡಿದೆ.