ಇಸ್ಲಾಮಾಬಾದ್: ಪಾಕಿಸ್ತಾನ ಹಿಂದೆಂದೂ ಕಂಡು, ಕೇಳರಿಯದ ಬಿಕ್ಕಟ್ಟಿಗೆ ಸಿಲುಕಿಕೊಂಡಿದ್ದು, ಗೋಧಿ ಮತ್ತು ಅಕ್ಕಿಯ ಬೆಲೆ ಗಗನಕ್ಕೇರಿದೆ. ಮತ್ತೊಂದೆಡೆ ಗೋಧಿ, ಅಕ್ಕಿ ಕೊರತೆಯಿಂದ ಖೈಬರ್ ಪಖ್ತುನ್ ಖಾವಾ, ಸಿಂಧ್, ಬಲೂಚಿಸ್ತಾನ್ ಪ್ರಾಂತ್ಯದ ಹಲವೆಡೆ ಕಾಲ್ತುಳಿತ ಸಂಭವಿಸಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಬಾಂಬ್ ಬೆದರಿಕೆ: ಗೋವಾದ ದಾಬೋಲಿ ವಿಮಾನ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ವರದಿಯ ಪ್ರಕಾರ, ಪಾಕಿಸ್ತಾನದ ಮಾರುಕಟ್ಟೆಯಲ್ಲಿ ಈಗಾಗಲೇ ಅಕ್ಕಿ, ಗೋಧಿ ಪೂರೈಕೆಯಲ್ಲಿನ ಕೊರತೆಯ ಹಿನ್ನೆಯಲ್ಲಿ ಸಬ್ಸಿಡಿ ದರದ ಗೋಧಿ ಹಿಟ್ಟನ್ನು ಪಡೆಯಲು ದಿನಂಪ್ರತಿ ಸಾವಿರಾರು ಜನರು ಮಾರುಕಟ್ಟೆ ಮುಂದೆ ಜಮಾಯಿಸುತ್ತಿದ್ದಾರೆ ಎಂದು ವಿವರಿಸಿದೆ.
ಎಲ್ಲೆಡೆ ಜನರು ಸಬ್ಸಿಡಿ ಗೋಧಿ ಹಿಟ್ಟು, ಅಕ್ಕಿ ಪಡೆಯಲು ಗುಂಪು, ಗುಂಪು ಸೇರುತ್ತಿದ್ದು, ಗಗನಕ್ಕೇರಿದ ಬೆಲೆಯಿಂದ ರೋಸಿ ಹೋದ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಗೋಧಿ ಸರಬರಾಜು ಮಾಡುವ ಲಾರಿಗಳು ಬಂದಾಗ ತಳ್ಳಾಟ, ನೂಕುನುಗ್ಗಲಿನಿಂದ ಕಾಲ್ತುಳಿತ ಸಂಭವಿಸಿದೆ ಎಂದು ವರದಿ ತಿಳಿಸಿದೆ.
ಗೋಧಿ ಮಾರಾಟಗಾರರು ಮತ್ತು ಖರೀದಿದಾರರ ನಡುವೆ ಘರ್ಷಣೆ ನಡೆದಿರುವುದಾಗಿ ವರದಿ ತಿಳಿಸಿದೆ. ಗೋಧಿ ಮಾರಾಟಗಾರರಿಂದ ಜನರು ಗೋಧಿ ಚೀಲವನ್ನು ಕಸಿದುಕೊಂಡು ಓಡಿಹೋಗುತ್ತಿರುವುದು ಘರ್ಷಣೆಗೆ ಎಡೆಮಾಡಿಕೊಟ್ಟಿದೆ ಎಂದು ವರದಿ ವಿವರಿಸಿದೆ.
ಗೋಧಿ ಹಿಟ್ಟು ಮತ್ತು ಅಕ್ಕಿ ಸರಬರಾಜು ಕೊರತೆಯಿಂದ ಪಾಕಿಸ್ತಾನದಲ್ಲಿ ಬೆಲೆ ಗಗನಕ್ಕೇರಿರುವುದಾಗಿ ದ ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಕರಾಚಿಯಲ್ಲಿ ಒಂದು ಕೆಜಿ ಗೋಧಿ ಹಿಟ್ಟಿನ ಬೆಲೆ 160 ರೂಪಾಯಿ. ಇಸ್ಲಾಮಾಬಾದ್ ಮತ್ತು ಪೇಶಾವರದಲ್ಲಿ ಹತ್ತು ಕೆಜಿಯ ಗೋಧಿ ಹಿಟ್ಟಿನ ಚೀಲವನ್ನು 1,500 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. 20 ಕೆಜಿ ಗೋಧಿ ಹಿಟ್ಟಿನ ಚೀಲಕ್ಕೆ 2,800 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.
ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಗೋಧಿ ದಾಸ್ತಾನು ಸಂಪೂರ್ಣವಾಗಿ ಖಾಲಿಯಾಗಿದೆ ಎಂದು ಬಲೂಚಿ ಸಚಿವರೊಬ್ಬರು ತಿಳಿಸಿದ್ದಾರೆ. ಬಲೂಚಿಸ್ತಾನಕ್ಕೆ 400,000 ಗೋಧಿ ಚೀಲಗಳ ಅಗತ್ಯವಿದ್ದು, ಇಲ್ಲದಿದ್ದಲ್ಲಿ ಪರಿಸ್ಥಿತಿ ಹದಗೆಡುವ ಸಾಧ್ಯತೆ ಇದ್ದಿರುವುದಾಗಿ ಎಚ್ಚರಿಸಿರುವುದಾಗಿ ವರದಿ ತಿಳಿಸಿದೆ.