ಲಂಡನ್: ಪಾಕಿಸ್ತಾನ ತನ್ನ ವಿಶ್ವಕಪ್‌ನ ಕೊನೆಯ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 94 ರನ್ ಪ್ರಚಂಡ ಗೆಲುವು ಸಾಧಿಸಿದೆ. ಗೆದ್ದರೂ ಸೆಮಿಫೈನಲ್ ರೇಸ್‌ನಿಂದ ಪಾಕಿಸ್ತಾನ ಅಧಿಕೃತವಾಗಿ ಹೊರಬಿದ್ದಿದೆ.
ಮಿಶನ್ ಇಂಪಾಸಿಬಲ್’ ಸುಳಿಯಲ್ಲಿದ್ದ ಸಫರ್ರಾಜ್ ಪಡೆಯಿಂದ ಬಾಂಗ್ಲಾದೇಶ ವಿರುದ್ಧದ ಶುಕ್ರವಾರದ ಅಂತಿಮ ಲೀಗ್ ಪಂದ್ಯದಲ್ಲಿ ಯಾವುದೇ ಪವಾಡ ನಡೆಯಲಿಲ್ಲ. ಹೀಗಾಗಿ 4ನೇ ಸ್ಥಾನದಲ್ಲಿ ನ್ಯೂಜಿಲೆಂಡ್ ತಂಡವೇ ಮುಂದುವರಿದು ಸೆಮಿಫೈನಲ್ ಪ್ರವೇಶಿಸಿತು. ಸೋತ ಬಾಂಗ್ಲಾದೇಶವೂ ನಿರಾಶೆಯೊಂದಿಗೆ ತವರಿಗೆ ತೆರಳಿತು.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನದ ಇಮಾಮ್ ಉಲ್ ಹಕ್ (100 ರನ್, 100 ಎಸೆತ, 7 ಬೌಂಡರಿ), ಬಾಬರ್ ಅಜಂ (96 ರನ್, 98 ಎಸೆತ, 11 ಬೌಂಡರಿ) ಹಾಗೂ ಇಮಾದ್ ವಾಸೀಂ (43 ರನ್, 26 ಎಸೆತ, 6 ಬೌಂಡರಿ, 1 ಸಿಕ್ಸರ್) ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ 50 ಓವರ್‌ಗೆ 9 ವಿಕೆಟ್‌ಗೆ 315 ರನ್‌ಗಳಿಸಿತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 44.1 ಓವರ್‌ಗೆ 221 ರನ್‌ಗೆ ಆಲೌಟಾಯಿತು. ಬಾಂಗ್ಲಾ ಪರ ಶಕೀಬ್ (64 ರನ್, 77 ಎಸೆತ, 6 ಬೌಂಡರಿ) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದು ಬಿಟ್ಟರೆ ಉಳಿದವರೆಲ್ಲರು ವೈಫಲ್ಯ ಅನುಭವಿಸಿದರು.
ಪಾಕಿಸ್ತಾನ ತಂಡದ ಪರ ವೇಗಿ ಶಾಹೀನ್ ಅಫ್ರಿದಿ 35ಕ್ಕೆ 6 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಸ್ಪಿನ್ನರ್ ಶಾದಾಬ್ ಖಾನ್ 59ಕ್ಕೆ 2 ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ 50 ಓವರ್‌ಗೆ 315/9 (ಇಮಾಮ್ ಉಲ್ ಹಕ್ 100, ಬಾಬರ್ ಅಜಂ 96, ಮುಸ್ತಾಫಿಜುರ್ 75ಕ್ಕೆ5). ಬಾಂಗ್ಲಾದೇಶ 44.1 ಓವರ್‌ಗೆ 221 ಆಲೌಟ್ (ಶಕೀಬ್ ಅಲ್ ಹಸನ್ 64 , ಲಿಟನ್ ದಾಸ್ 32, ಶಾಹೀನ್ ಅಫ್ರಿದಿ 35ಕ್ಕೆ6).