ಇಸ್ಲಾಮಾಬಾದ್:ಬಿಗಿ ಭದ್ರತೆಯೊಂದಿಗೆ ಪಾಕಿಸ್ತಾನದ ಸಂಸತ್ ಚುನಾವಣೆಯ ಮತದಾನ ಬುಧವಾರ ನಡೆಯುತ್ತಿರುವ ನಡುವೆಯೇ ಪಾಕಿಸ್ತಾನದ ಕ್ವೆಟ್ವಾ ಮತಗಟ್ಟೆ ಸಮೀಪ ಸಂಭವಿಸಿದ ಆತ್ಮಹತ್ಯಾ ಬಾಂಬ್ ದಾಳಿಗೆ 34 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ದಾಳಿಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿದೆ. ಈ ಚುನಾವಣೆ ಮಾಜಿ ಕ್ರಿಕೆಟಿಗ, ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್(ಪಿಟಿಐ) ಪಕ್ಷದ ಸಂಸ್ಥಾಪಕ ಇಮ್ರಾನ್ ಖಾನ್ ಹಾಗೂ ಜೈಲುಪಾಲಾಗಿರುವ ಮಾಜಿ ಪ್ರಧಾನಿ ನವಾಜ್ ಷರೀಫ್ ನಡುವಿನ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಆತ್ಮಹತ್ಯಾ ಬಾಂಬರ್ ಮತಗಟ್ಟೆಯೊಳಗೆ ಪ್ರವೇಶಿಸಲು ಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ಆತನನ್ನು ತಡೆಯಲು ಯತ್ನಿಸಿದ ವೇಳೆ ತನ್ನನ್ನು ತಾನು ಸ್ಫೋಟಿಸಿಕೊಂಡ ಪರಿಣಾಮ ಈ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯ ಆಡಳಿತಾಧಿಕಾರಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಬೆಳಗ್ಗೆ 8ಗಂಟೆಗೆ ಮತದಾನ ಆರಂಭವಾಗಿದ್ದು ಸಂಜೆ 6ಗಂಟೆವರೆಗೆ ಮತದಾನ ನಡೆಯಲಿದೆ. ಮತದಾನ ಪ್ರಕ್ರಿಯೆ ಮುಗಿದ ಕೂಡಲೇ ಮತಎಣಿಕೆ ನಡೆಯಲಿದೆ.
ಇಮ್ರಾನ್ ಖಾನ್ ಜೊತೆ ಪಾಕ್ ಮಿಲಿಟರಿ ರಹಸ್ಯವಾಗಿ ಕೈಜೋಡಿಸಿರುವುದಾಗಿ ಮಾಧ್ಯಮಗಳಲ್ಲಿ ಭಾರೀ ಚರ್ಚೆಯಾಗಿತ್ತು. 1947ರ ಸ್ವಾತಂತ್ರ್ಯದ ಬಳಿಕ ಪಾಕಿಸ್ತಾನದ ಇತಿಹಾಸದಲ್ಲಿ ಮಿಲಿಟರಿ ಆಡಳಿತ ಕಂಡಿರುವುದು ದಾಖಲಾಗಿದೆ.