Advertisement

ಪಾಕ್‌ ಆರ್ಥಿಕತೆಯಲ್ಲಿ ಮಹಾಕುಸಿತ: 68 ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ

01:25 PM Jun 13, 2020 | sudhir |

ಇಸ್ಲಾಮಾಬಾದ್‌: ಕೋವಿಡ್ ಬಾಧಿಸುವ ಮೊದಲೇ ದುರ್ಬಲ ಆರ್ಥಿಕ ಶಕ್ತಿಯಾಗಿದ್ದ ಪಾಕಿಸ್ಥಾನಕ್ಕೆ ಕೋವಿಡ್‌ 19 ಮಹಾ ಆಘಾತ ನೀಡಿದೆ. ಈ ತಿಂಗಳ 30ರಂದು ಕೊನೆಗೊಳ್ಳಲಿರುವ ಹಾಲಿ ವಿತ್ತ ವರ್ಷವು ಕಳೆದ 68 ವರ್ಷದಲ್ಲೇ ಅತಿ ಕನಿಷ್ಠವಾದ ಶೇ. 0.38ಕ್ಕಿಳಿಯಲಿದೆ ಎಂದು ಗುರುವಾರ ನಡೆಸಲಾದ ಆರ್ಥಿಕ ಸಮೀಕ್ಷೆಯಿಂದ ತಿಳಿದು ಬಂದಿದೆ.

Advertisement

ಇದುವರೆಗೆ ದೇಶದಲ್ಲಿ 1,20,000 ಮಂದಿಗೆ ಸೋಂಕು ತಗಲಿಸಿರುವ ಕೋವಿಡ್ ಕಾರಣದಿಂದಾಗಿ ಮಾರ್ಚ್‌ನಿಂದ ಕೆಲವು ವಾರಗಳ ಕಾಲ ಲಾಕ್‌ಡೌನ್‌ ಮಾಡಿದ ಪರಿಣಾಮ ದೇಶದ ಆರ್ಥಿಕತೆಯ ಮೇಲೆ ಗಂಭೀರ ಅಡ್ಡ ಪರಿಣಾಮವಾಗಿದೆ ಎಂದು ಪಾಕಿಸ್ಥಾನ್‌ ಎಕಾನಮಿಕ್‌ ಸರ್ವೆ 2019-20 ಅನ್ನು ಬಿಡುಗಡೆಗೊಳಿಸಿ ಆರ್ಥಿಕ ಸಲಹೆಗಾರ ಅಬ್ದುಲ್‌ ಹಫೀಜ್‌ ಶೇಖ್‌ ಅವರು ಹೇಳಿದ್ದಾರೆ.
ಈ ದೇಶದಲ್ಲಿ ಕೋವಿಡ್ ಗಿಂತ ಮೊದಲೇ ಆರ್ಥಿಕ ಸ್ಥಿರೀಕರಣ ನೀತಿಯಿಂದಾಗಿ ಕೈಗಾರಿಕಾ ವಲಯದ ಮೇಲೆ ಅಡ್ಡ ಪರಿಣಾಮವಾಗಿತ್ತು. ಅದರ ಜತೆಗೆ ಕೋವಿಡ್ ಸೇರಿ ಪರಿಸ್ಥಿತಿ ಮತ್ತಷ್ಟು ಸಂಕೀರ್ಣವಾಗಿದೆ.

ಕೃಷಿ ಕ್ಷೇತ್ರದಲ್ಲಿ ಮಾತ್ರ ಶೇ. 2.7ರಷ್ಟು ಏರಿಕೆ ಕಂಡಿದ್ದು, ಕೈಗಾರಿಕೆ ಮತ್ತು ಸೇವಾ ವಲಯಗಳು ಋಣಾತ್ಮಕ ಬೆಳವಣಿಗೆ ದರಕ್ಕೆ ಸಾಕ್ಷಿಯಾಗಿದೆ. ಇವೆಲ್ಲವುಗಳ ಕಾರಣದಿಂದ ಒಟ್ಟು ಬೆಳವಣಿಗೆ ದರವು ಶೇ. 0.38ಕ್ಕೆ ಕುಸಿದಿದೆ ಎಂದು ಆರ್ಥಿಕ ಸರ್ವೇಯಲ್ಲಿ ತಿಳಿಸಲಾಗಿದೆ.

ಡಾಲರ್‌ ಲೆಕ್ಕದಲ್ಲಿ ಹೇಳುವುದಾದರೆ ದೇಶವು ತಲಾ ಆದಾಯವು 1,336ಕ್ಕೆ ಕುಸಿದಿದ್ದು, ಇದು ಶೇ. 6.1ರಷ್ಟು ಇಳಿಕೆಯಾಗಿದೆ. ಆದರೆ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ 2,14,539 ರೂ. ಗೇರಿದೆ ಎಂದು ತಿಳಿದು ಬಂದಿದೆ. ಕೋವಿಡ್‌ ಕಾರಣದಿಂದಾಗಿ ಉಂಟಾಗಿರುವ ರಫ್ತು ಮತ್ತು ಪಾವತಿ ಕುಸಿತವು ಅಭಿವೃದ್ಧಿ ಹೊಂದುವ ದೇಶಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಎಚ್ಚರಿಸಿದೆ ಎಂಬುದಾಗಿ ಶೇಖ್‌ ಹೇಳಿದ್ದಾರೆ.

“ಜಾಗತಿಕ ಬೇಡಿಕೆ ಕುಸಿತದಿಂದಾಗಿ ರಫ್ತು ಕುಸಿತವಾಗಿದೆ ಮತ್ತು ವಿದೇಶ ಗಳಲ್ಲಿ ದುಡಿಯುವ ಪಾಕಿಸ್ಥಾನೀಯರು ಉದ್ಯೋಗ ಕಳೆದುಕೊಂಡಿರುವ ಕಾರಣದಿಂದಾಗಿ ಪಾವತಿಯೂ ಕುಸಿದಿದೆ’ ಎಂದು ಅವರು ಹೇಳಿದ್ದಾರೆ.

Advertisement

ತೆರಿಗೆ ಸಂಗ್ರಹ ಲೆಕ್ಕಾಚಾರ
ಜುಲೈ- ಎಪ್ರಿಲ್‌ 2020ರ ಅವಧಿಯಲ್ಲಿ ತೆರಿಗೆ ಸಂಗ್ರಹವು 3,300.6 ರೂ. ಬಿಲಿಯನ್‌ ಆಗಿದ್ದು, ಶೇ. 10.8 ಏರಿಕೆ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2,980 ರೂ. ಬಿಲಿಯನ್‌ ತೆರಿಗೆ ಸಂಗ್ರಹವಾಗಿತ್ತು. ಈ ಅವಧಿಯಲ್ಲಿ 4,510 ರೂ. ಬಿಲಿಯನ್‌ ತೆರಿಗೆ ಸಂಗ್ರಹಿಸುವ ಗುರಿ ಇರಿಸಿಕೊಳ್ಳಲಾಗಿತ್ತು. ಈ ಬಾರಿ ಖಾತೆ ಕೊರತೆಯು 2.8 ಬಿಲಿಯನ್‌ ಡಾಲರ್‌ ಆಗಿದ್ದು, (ಜಿಡಿಪಿಯ ಶೇ. 1.1) ಶೇ. 73.1ಕ್ಕೆ ಕುಸಿದಿದೆ. ಕಳೆದ ವರ್ಷ ಇದು 10.3 ಬಿಲಿಯನ್‌ ಡಾಲರ್‌ ಆಗಿದ್ದು, ಜಿಡಿಪಿಯ ಶೇ. 3.7 ಆಗಿತ್ತು. ಈ ಬಾರಿ ಖಾತೆ ಕೊರತೆಯು 20 ಬಿಲಿ ಯನ್‌ ಡಾಲರ್‌ ಆಗುವ ಸಾಧ್ಯತೆಯಿತ್ತು. ನಾವದನ್ನು 3 ಬಿಲಿಯನ್‌ ಡಾಲರ್‌ಗೆ ಇಳಿ ಸಿರುವುದು ದೊಡ್ಡ ಸಾಧನೆಯಾಗಿದೆ ಎಂದು ಶೇಖ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next