Advertisement

ರಾಜತಾಂತ್ರಿಕ ಸಂಬಂಧ ಕಡಿದ ಪಾಕ್‌

09:34 AM Aug 09, 2019 | Team Udayavani |

ನವದೆಹಲಿ/ಇಸ್ಲಾಮಾಬಾದ್‌: ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದಿದ್ದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನವು ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನೇ ಕಡಿದುಕೊಂಡಿದೆ. ಬುಧವಾರ ಅಲ್ಲಿನ ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಭದ್ರತಾ ಸಮಿತಿ ಸಭೆಯಲ್ಲಿ ಇಸ್ಲಾಮಾಬಾದ್‌ನಲ್ಲಿರುವ ಭಾರತದ ರಾಯಭಾರಿಯನ್ನು ಉಚ್ಚಾಟಿಸಲು ನಿರ್ಧರಿಸಿದೆ. ವ್ಯಾಪಾರ ಸಂಬಂಧ ಕಡಿದುಕೊಳ್ಳುವುದಾಗಿಯೂ ಘೋಷಿಸಿದೆ. ವಾಘಾ ಗಡಿಯಲ್ಲಿ ಬಸ್‌ ಸೇವೆ ಹಾಗೂ ವಾಹನ ಸಂಚಾರವೂ ರದ್ದಾಗಲಿದೆ. ಇದರಿಂದ ವಾಘಾ ಗಡಿ ಸಂಪೂರ್ಣ ಬಂದ್‌ ಆಗಲಿದೆ.

Advertisement

ಈ ಬಗ್ಗೆ ಮಾತನಾಡಿದ ವಿದೇಶಾಂಗ ಸಚಿವ ಶಾ ಮೆಹಮೂದ್‌ ಖುರೇಶಿ ನಾವು ನಮ್ಮ ರಾಯಭಾರಿಯನ್ನು ದೆಹಲಿಯಿಂದ ಕರೆಸಿಕೊಳ್ಳುತ್ತೇವೆ ಮತ್ತು ಅವರ ರಾಯಭಾರಿಯನ್ನು ವಾಪಸ್‌ ಕಳುಹಿಸುತ್ತೇವೆ ಎಂದಿದ್ದಾರೆ. ಅಲ್ಲದೆ, ಭಾರತದ ಕ್ರಮದ ವಿರುದ್ಧ ವಿಶ್ವಸಂಸ್ಥೆಯ ಮೊರೆ ಹೋಗಲೂ ಪಾಕ್‌ ನಿರ್ಧರಿಸಿದೆ.

500 ಬಂಧನ: ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರದ ನಿರ್ಧಾರ ಪ್ರಕಟವಾದ ಬಳಿಕ ರಾಜಧಾನಿ ಶ್ರೀನಗರ ಸೇರಿದಂತೆ ಹಲವು ಭಾಗಗಳಲ್ಲಿ ಮೌನ ಆವರಿಸಿದೆ. ಮಾಜಿ ಸಿಎಂಗಳಾದ ಒಮರ್‌ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಸೇರಿದಂತೆ ಇದುವರೆಗೆ 500 ಮಂದಿಯನ್ನು ಬಂಧಿಸಲಾಗಿದೆ.

ಕಲ್ಲು ತೂರಾಟ: ಕಣಿವೆ ರಾಜ್ಯದಲ್ಲಿ ಅಧಿಕೃತವಾಗಿ ಕರ್ಫ್ಯೂ ಜಾರಿ ಮಾಡದೇ ಇದ್ದರೂ, ಪರಿಸ್ಥಿತಿ ಆ ರೀತಿಯಲ್ಲಿಯೇ ಇದೆ. ಹಲವೆಡೆ ಭದ್ರತಾ ಪಡೆಗಳತ್ತ ಕಲ್ಲು ತೂರಾಟ ನಡೆಸಲಾಗಿದೆ.

ದೋವಲ್ ಭೇಟಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೊವಾಲ್ ಶೋಪಿಯಾನ್‌ನಲ್ಲಿ ನಾಗರಿಕರು, ಪೊಲೀಸರ ಜತೆಗೆ ಮಾತನಾಡಿದ್ದಾರೆ. ಜನಸಾಮಾನ್ಯರೊಂದಿಗೆ ರಸ್ತೆ ಬದಿ ಕುಳಿತು ಉಪಾಹಾರವನ್ನೂ ಸೇವಿಸಿದ್ದಾರೆ

Advertisement

ಇಂದು ಪ್ರಧಾನಿ ಮೋದಿ ಭಾಷಣ?
ಕಣಿವೆ ರಾಜ್ಯದ ಬಗ್ಗೆ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರ ಬಗ್ಗೆ ದೇಶಕ್ಕೆ ವಿವರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಾ.27ರಂದು ಉಪಗ್ರಹ ನಿರೋಧಕ ಕ್ಷಿಪಣಿ ವ್ಯವಸ್ಥೆ ಅಭಿವೃದ್ಧಿಗೊಳಿಸಿದ ವೇಳೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next