ಹಲವಾರು ದಶಕಗಳಿಂದಲೂ ಉಗ್ರವಾದವನ್ನು ಪೋಷಿಸಿ, ಬೆಳೆಸಿಕೊಂಡು ಬರುತ್ತಿರುವ ಪಾಕಿಸ್ಥಾನ, ತೀರಾ ಕೀಳುಮಟ್ಟಕ್ಕೆ ಇಳಿದಿದ್ದು, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವೈಯಕ್ತಿಕ ದಾಳಿ ನಡೆಸುವಷ್ಟು ಮುಂದಕ್ಕೆ ಹೋಗಿರುವುದು ದುರದೃಷ್ಟಕರ. ಭಯೋತ್ಪಾದನೆ ಹುಟ್ಟಿದ್ದು ಎಲ್ಲಿ ಎಂದು ಯಾರನ್ನೇ ಪ್ರಶ್ನಿಸಿದರೂ ಪಾಕಿಸ್ಥಾನ ಎಂಬ ಉತ್ತರ ಜಗತ್ತಿನ ಮೂಲೆ ಮೂಲೆಗಳಿಂದಲೂ ಸಿಗುತ್ತಿದೆ. ಇಂಥ ಹೊತ್ತಲ್ಲಿ ಕಾಶ್ಮೀರ ವಿಚಾರವನ್ನು ಮುಂದಿಟ್ಟುಕೊಂಡು ಮತ್ತೆ ಮತ್ತೆ ಭಾರತದ ಹೆಸರಿಗೆ ಮಸಿ ಬಳಿಯಲು ಪ್ರಯತ್ನಿಸುತ್ತಿರುವ ಪಾಕಿಸ್ಥಾನಕ್ಕೆ ತಕ್ಕ ಪಾಠ ಕಲಿಸಲೇಬೇಕಾದ ಸಮಯವಂತೂ ಬಂದಿದೆ.
ಕಳೆದ ಮೂರು ದಿನಗಳಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆ ನಡೆಯುತ್ತಿದ್ದು, ಈ ಬಾರಿ ಇದರ ಅಧ್ಯಕ್ಷತೆಯನ್ನು ಭಾರತವೇ ವಹಿಸಿಕೊಂಡಿದೆ. ಜಗತ್ತಿನ ಶಾಂತಿ ಮತ್ತು ಉಕ್ರೇನ್ ಮೇಲಿನ ರಷ್ಯಾದ ಸಮರದ ಸಹಿತ ಹಲವಾರು ವಿಚಾರಗಳ ಬಗ್ಗೆ ವಿಸ್ತೃತ ಚರ್ಚೆಯೂ ನಡೆದಿದೆ. ಆದರೆ ಪಾಕಿಸ್ಥಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ, ಮೊದಲ ದಿನವೇ ಕಾಶ್ಮೀರ ವಿಚಾರ ಪ್ರಸ್ತಾವಿಸಿ, ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರ ಕಡೆಯಿಂದ ತೀವ್ರ ಪ್ರತಿರೋಧವನ್ನೂ ಎದುರಿಸಿಯಾಗಿದೆ. ಹಾಗೆಯೇ ಪಾಕಿಸ್ಥಾನದ ಮಾಧ್ಯಮದ ಪ್ರತಿನಿಧಿಯೊಬ್ಬರು ಹೊಸದಿಲ್ಲಿ, ಇಸ್ಲಾಮಾಬಾದ್ ಮತ್ತು ಕಾಬೂಲ್ ಅನ್ನು ಕಾಡುತ್ತಿರುವ ಭಯೋತ್ಪಾದನೆ ಅಂತ್ಯವಾಗುವುದು ಯಾವಾಗ ಎಂದು ಪ್ರಶ್ನಿಸಿದ್ದರು. ಇದಕ್ಕೆ ಅತ್ಯಂತ ಜಾಣೆಯಿಂದ ಉತ್ತರ ನೀಡಿದ್ದ ಜೈಶಂಕರ್ ಅವರು, ಈ ಪ್ರಶ್ನೆಯನ್ನು ನೀವು ನಿಮ್ಮ ವಿದೇಶಾಂಗ ಸಚಿವರಿಗೆ ಕೇಳುವುದನ್ನು ಬಿಟ್ಟು, ತಪ್ಪಾಗಿ ನನಗೆ ಕೇಳುತ್ತಿದ್ದೀರಿ. ಒಸಾಮಾ ಬಿನ್ ಲಾದೆನ್‌ಗೆ ಆಶ್ರಯ ಕೊಟ್ಟ, ಇದುವರೆಗಿನ ಎಲ್ಲ ಭಯೋತ್ಪಾದಕರಿಗೆ ಆಶ್ರಯ ತಾಣವಾಗಿರುವ ಪಾಕಿಸ್ಥಾನ ತಮ್ಮ ನೆಲವನ್ನು ಶುದ್ಧ ಮಾಡಿಕೊಂಡರೆ ಆಗ ಭಯೋತ್ಪಾದನೆ ಎಂಬುದು ನಾಶವಾಗುತ್ತದೆ ಎಂದಿದ್ದರು. ಈ ಉತ್ತರಕ್ಕೆ ಭಾರೀ ಪ್ರಶಂಸೆಯೂ ವ್ಯಕ್ತವಾಗಿತ್ತು.
ಆದರೆ ಜೈಶಂಕರ್ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ನೆಪದಲ್ಲಿ ಬಿಲಾವಲ್ ಭುಟ್ಟೋ, ಪ್ರಧಾನಿ ಮೋದಿ ಅವರ ಬಗ್ಗೆಯೇ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ವಿದೇಶಾಂಗ ಸಚಿವರಾಗಿ ಬೇರೊಬ್ಬ ದೇಶದ ಮುಖ್ಯಸ್ಥರ ವಿರುದ್ಧ ಏನು ಮಾತನಾಡಬೇಕು ಎಂಬ ಅರಿವೆಯೇ ಇಲ್ಲದಂತೆ ಮಾತನಾಡಿ, ತೀವ್ರ ಪ್ರತಿರೋಧವನ್ನೂ ಎದುರಿಸಿದ್ದಾರೆ. ಹಾಗೆಯೇ ಜಾಗತಿಕ ಸಂಬಂಧದಲ್ಲಿ ಮತ್ತೂಂದು ದೇಶದ ಮುಖ್ಯಸ್ಥರಿಗೆ ಯಾವ ರೀತಿಯ ಗೌರವ ನೀಡಬೇಕು ಎಂಬ ಕನಿಷ್ಠ ಸೌಜನ್ಯವನ್ನೂ ಪಾಕಿಸ್ಥಾನ ಕಳೆದುಕೊಂಡಂತಿದೆ.
ಇಂಥ ಹೇಳಿಕೆಗಳು ಮಾತನಾಡಿದವರ ಮರ್ಯಾದೆಯನ್ನು ಹಾಳು ಮಾಡುತ್ತವೆಯೇ ಹೊರತು ಅವರಿಗೆ ಹಿರಿಮೆಯನ್ನೇನೂ ತಂದುಕೊಡುವುದಿಲ್ಲ. ಹಾಗೆಯೇ ವ್ಯಕ್ತಿಗತವಾಗಿ ಟೀಕೆ ಮಾಡಲು ಪಾಕಿಸ್ಥಾನ ಭಾರತದಲ್ಲಿನ ವಿಪಕ್ಷವೂ ಅಲ್ಲ.
ಸದ್ಯಕ್ಕೆ ಭಾರತ ಮಾಡಬೇಕಾಗಿರುವುದು ಇಷ್ಟೇ. ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ಥಾನವನ್ನು ಒಬ್ಬಂಟಿ ಮಾಡುವ ಪ್ರಯತ್ನದಲ್ಲಿ ಭಾರತ ಬಹುತೇಕ ಯಶಸ್ವಿಯಾಗಿದೆ. ಭಾರತದ ನೆರೆಯಲ್ಲಿರುವ ಚೀನ ಬಿಟ್ಟರೆ ಪಾಕಿಸ್ಥಾನಕ್ಕೆ ಅಂಥ ಬೆಂಬಲವೇನೂ ಸಿಗುತ್ತಿಲ್ಲ. ಅಲ್ಲದೆ ಪಾಕಿಸ್ಥಾನದ ಆರ್ಥಿಕತೆ ಮೇಲೆ ಏಳಲಾಗದಂಥ ಸ್ಥಿತಿಗೆ ತಲುಪಿದ್ದು, ಮತ್ತೆ ಮತ್ತೆ ಆ ದೇಶವನ್ನು ಒಬ್ಬಂಟಿಯನ್ನಾಗಿ ಮಾಡಿದರೆ ಯುದ್ಧಕ್ಕಿಂತಲೂ ಹೆಚ್ಚಿನ ಪರಿಣಾಮ ಬೀರುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಥ ಒಂದು ಪ್ರಯತ್ನವನ್ನು ಮಾಡಿ ಪಾಕಿಸ್ಥಾನದ ಎಲ್ಲ ಮಾರ್ಗಗಳನ್ನು ಬಂದ್ ಮಾಡುವತ್ತ ಭಾರತ ನೋಡಿಕೊಳ್ಳಬೇಕು. ಹೀಗಾದಾಗ ಮಾತ್ರ ಪಾಕಿಸ್ಥಾನದ ಈ ಕುತ್ಸಿತ ಬುದ್ಧಿಗೆ ಕಡಿವಾಣ ಹಾಕಲು ಸಾಧ್ಯ. ಇನ್ನಾದರೂ ಪಾಕ್ ನಾಯಕರು ಎಚ್ಚೆತ್ತುಕೊಳ್ಳದೇ ಹೋದರೆ ಸ್ವದೇಶದಲ್ಲಿಯೇ ಜನರ ಕೆಂಗಣ್ಣಿಗೆ ಗುರಿಯಾಗಲಿದ್ದಾರೆ.