Advertisement

ಪಾಕ್‌ ಬಣ್ಣ ಬಯಲು

10:03 AM Dec 29, 2019 | sudhir |

ಪಾಕಿಸ್ಥಾನದ ಮಾಜಿ ಕ್ರಿಕೆಟಿಗ ದಾನಿಶ್‌ ಕನೇರಿಯಾಗೆ ತಂಡದಲ್ಲಿ ಆಗುತ್ತಿದ್ದ ತಾರತಮ್ಯ ಕುರಿತು ಆ ದೇಶದ ಮಾಜಿ ಕ್ರಿಕೆಟಿಗ ಶೋಯೆಬ್‌ ಅಖ್ತರ್‌ ಬಹಿರಂಗಪಡಿಸಿದ ವಿಷಯಗಳು ಆ ದೇಶದ ನಿಜ ಬಣ್ಣವನ್ನು ಬಯಲು ಗೊಳಿಸಿದೆ.

Advertisement

ಹಿಂದೂ ಎಂಬ ಕಾರಣಕ್ಕೆ ಕನೇರಿಯಾ ಅವರನ್ನು ತಂಡದ ಸಹ ಸದಸ್ಯರೇ ದ್ವಿತೀಯ ದರ್ಜೆ ನಾಗರಿಕನಂತೆ ನೋಡಿಕೊಳ್ಳುತ್ತಿದ್ದರು. ಕೆಲವು ಸದಸ್ಯರು ಕನೇರಿಯಾ ಜೊತೆಗೆ ಊಟಕ್ಕೂ ಕುಳಿತುಕೊಳ್ಳುತ್ತಿರಲಿಲ್ಲ ಎಂಬ ಸತ್ಯವನ್ನು ಅಖ್ತರ್‌ ಬಹಿರಂಗಪಡಿಸಿದ್ದಾರೆ. ಒಬ್ಬ ಕ್ರಿಕೆಟ್‌ ಆಟಗಾರನನ್ನೇ
ಆತ ಅನ್ಯ ಧರ್ಮದವ ಎಂಬ ಕಾರಣಕ್ಕೆ ಈ ರೀತಿ ನಡೆಸಿಕೊಂಡ ದೇಶ ಇನ್ನು ತನ್ನಲ್ಲಿರುವ ಅನ್ಯ ಧರ್ಮಗಳ ಅಲ್ಪಸಂಖ್ಯಾತರನ್ನು ಯಾವ ರೀತಿ ನಡೆಸಿಕೊಂಡಿರಬಹುದು ಎಂದು ಊಹಿಸುವುದು ಕಷ್ಟವೇನಲ್ಲ.

ಪಾಕಿಸ್ಥಾನದ ಕ್ರಿಕೆಟ್‌ ಇತಿಹಾಸದಲ್ಲಿ ರಾಷ್ಟ್ರೀಯ ತಂಡದಲ್ಲಿ ಆಡಿದ ಎರಡನೇ ಹಿಂದೂ ಆಟಗಾರ ದಾನಿಶ್‌ ಕನೇರಿಯಾ. ಅದಕ್ಕೂ ಮೊದಲು ಅವರ ಮಾವ ಅನಿಲ್‌ ದಳಪತ್‌ ಪಾಕ್‌ಗಾಗಿ ಕೆಲವು ಅಂತಾರಾಷ್ಟ್ರೀಯ ಪಂದ್ಯಗಳನ್ನು
ಆಡಿದ್ದರು. ಕನೇರಿಯಾರನ್ನು ಓರ್ವ ಆಟಗಾರನಾಗಿಯೂ ಪಾಕ್‌ ಕ್ರಿಕೆಟ್‌ ತಂಡ ಸರಿಯಾಗಿ ನಡೆಸಿಕೊಂಡಿಲ್ಲ. ಅವರ ಆಟಕ್ಕೆ ಸಲ್ಲಬೇಕಾದ ಮನ್ನಣೆಯನ್ನು ನೀಡಲಿಲ್ಲ. ಅಲ್ಲದೆ ತಂಡದಲ್ಲಿ ಅವರು ಪದೇ ಪದೇ ಹೀಯಾಳಿಕೆಗೆ
ಗುರಿಯಾಗುತ್ತಿದ್ದರು ಎಂಬ ಆಘಾತಕಾರಿ ವಿಷಯವನ್ನು ಅಖ್ತರ್‌ ಬಯಲು ಮಾಡಿದ್ದಾರೆ. ಇದು ಹಿಂದೂಗಳು ಸೇರಿದಂತೆ ಬೇರೆ ಧರ್ಮದವರು ಪಾಕಿಸ್ಥಾನದಲ್ಲಿ ಯಾವ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂಬುದ ಕ್ಕೊಂದು ನಿದರ್ಶನ.

ಕನೇರಿಯಾ ಪ್ರತಿಭಾವಂತ ಆಟಗಾರರಾಗಿದ್ದರೂ ಪಾಕ್‌ ಕ್ರಿಕೆಟ್‌ ಮಂಡಳಿ ಅವರತ್ತ ಭೇದಭಾವ ಮಾಡಿರುವುದು ಈ ಪ್ರಕರಣದಿಂದ ಸ್ಪಷ್ಟವಾಗಿದೆ. ಕೆಲ ವರ್ಷಗಳ ಹಿಂದೆ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಸಿಲುಕಿದ್ದ ಕನೇರಿಯಾ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿಯಾಗಿದೆ. ಇಂಥ ಪ್ರಕರಣಗಳು ಹಲವು ಪಾಕ್‌ ಕ್ರಿಕೆಟಿಗರ ವಿರುದ್ಧ ದಾಖಲಾಗಿದ್ದವು. ಆದರೆ ಅವರನ್ನೆಲ್ಲ ಅಲ್ಲಿನ ವ್ಯವಸ್ಥೆ ಪಾರು ಮಾಡಿದೆ. ಈಗ ಅವರೆಲ್ಲ ರಾಷ್ಟ್ರೀಯ ತಂಡದ ಭಾಗವಾಗಿದ್ದಾರೆ. ಕನೇರಿಯಗೆ ಆ ಸಹಾಯವೂ ಸಿಗಲಿಲ್ಲ.

ಭಾರತ ತಂಡದಲ್ಲಿ ಮನ್ಸೂರ್‌ ಅಲಿಖಾನ್‌ ಪಟೌಡಿ, ಮೊಹಮ್ಮದ್‌ ಅಜರುದ್ದೀನ್‌, ಮೊಹಮ್ಮದ್‌ ಕೈಫ್, ಮುನಾಫ್ ಪಟೇಲ್‌, ಇರ್ಫಾನ್‌ ಪಠಾಣ್‌, ಯೂಸುಫ್ ಪಠಾಣ್‌ ಮುಂತಾದ ಮುಸ್ಲಿಂ ಆಟಗಾರರಿದ್ದರು. ಮೊಹಮ್ಮದ್‌ ಶಮಿ ಈಗಲೂ ತಂಡದ ಜೊತೆಗಿದ್ದಾರೆ. ಇವರಲ್ಲಿ ಯಾರನ್ನೂ ಭಾರತೀಯ ತಂಡದವರಾಗಲಿ, ಭಾರತೀಯ ಪ್ರೇಕ್ಷಕರಾಗಲಿ ಧರ್ಮದ ನೆಲೆಯಲ್ಲಿ ನೋಡಿದವರಲ್ಲ. ಭಾರತದ ಪರವಾಗಿ ಆಡುವ ಅವರೆಲ್ಲ ನಮ್ಮವರೇ. ಯಾವ ಆಟಗಾರನೂ ಧರ್ಮದ ಕಾರಣಕ್ಕಾಗಿ ಭೇದಭಾವ ಎಣಿಸಲಾಗಿದೆ ಅಥವಾ ಸರಿಯಾದ ಮನ್ನಣೆ ನೀಡಿಲ್ಲ ಎಂಬ ಆರೋಪಿಸಿದ್ದಿಲ್ಲ.

Advertisement

ಪಟೌಡಿ ಮತ್ತು ಅಜರುದ್ದೀನ್‌ ಕ್ರಿಕೆಟ್‌ ಕಪ್ತಾನರಾಗಿಯೂ ಇದ್ದರು. ಅವರ
ಕೈಕೆಳಗೆ ಆಡಲು ಉಳಿದವರಿಗೆ ಧರ್ಮ ಅಡ್ಡಿಯಾಗಿರಲಿಲ್ಲ. ಕ್ರಿಕೆಟನ್ನೇ ಧರ್ಮದಂತೆ ಆರಾಧಿಸುವ ದೇಶದಲ್ಲಿ ಧರ್ಮ ಕ್ರಿಕೆಟನ್ನು ಒಡೆಯುವುದನ್ನು ಕಲ್ಪಿಸಲೂ ಸಾಧ್ಯವಿಲ್ಲ. ಆದರೆ ಪಾಕಿಸ್ಥಾನದಲ್ಲಿ ಅನ್ಯಧರ್ಮದವರು ಅಪ್ಪಟ ಪ್ರತಿಭಾವಂತರೇ ಆಗಿದ್ದರೂ ಯಾವ ರೀತಿಯಲ್ಲಿ ಅವರನ್ನು ಮೂಲೆಗುಂಪು ಮಾಡಲಾಗುತ್ತದೆ ಎನ್ನುವುದು ಈಗ ಜಗಜ್ಜಾಹೀರಾಗಿದೆ.

ಕ್ರಿಕೆಟ್‌ ಎಂದಲ್ಲ, ಎಲ್ಲ ರಂಗಗಳಲ್ಲೂ ಅನ್ಯ ಧರ್ಮದವರನ್ನು ತುಳಿಯುವ ಕೆಲಸ ಅಲ್ಲಿ ನಿರಂತರವಾಗಿ ಆಗುತ್ತದೆ. ಅಲ್ಪಸಂಖ್ಯಾತರ ವ್ಯಾಪಾರ ವಹಿವಾಟುಗಳನ್ನು ಏನೇನೂ ಸುಳ್ಳು ಪ್ರಕರಣಗಳನ್ನು ದಾಖಲಿಸಿಕೊಂಡು ಕಿತ್ತುಕೊಳ್ಳುವುದು ಇಲ್ಲವೇ ನಾಶ ಮಾಡುವುದು ನಡೆಯುತ್ತದೆ.

ಹೀಗೆ ನಿರಂತರವಾಗಿ ಅಲ್ಪಸಂಖ್ಯಾತರನ್ನು ಶೋಷಿಸುವ ಪಾಕ್‌ ಪ್ರಧಾನಿ ಮಾತ್ರ ನಮಗೆ ಅಲ್ಪಸಂಖ್ಯಾತರನ್ನು ಹೇಗೆ ನೋಡಿಕೊಳ್ಳಬೇಕೆಂದು ಕಲಿಸುತ್ತೇನೆ, ಸಹಿಷ್ಣುತೆಯ ಪಾಠವನ್ನು ನಮ್ಮಿಂದ ಕಲಿಯಿರಿ ಎಂದೆಲ್ಲ ಪುಕ್ಕಟೆ ಉಪದೇಶಗಳನ್ನು ಮಾಡುವುದು ಹಾಸ್ಯಾಸ್ಪದವಾಗಿ ಕಾಣುತ್ತದೆ.

“ಅಲ್ಪಸಂಖ್ಯಾತರನ್ನು ಹೇಗೆ ನೋಡಿಕೊಳ್ಳಬೇಕೆಂದು ಮೋದಿಗೆ ನಾನು ಕಲಿಸುತ್ತೇನೆ’. ಇದು ಕಳೆದ ವರ್ಷ ಡಿಸೆಂಬರ್‌ನಲ್ಲಿ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ನೀಡಿದ ಹೇಳಿಕೆ. ವಿಪರ್ಯಾಸವೆಂದರೆ ಒಂದೇ ವರ್ಷದಲ್ಲಿ ಅವರ ದೇಶದಲ್ಲಿ ಅಲ್ಪಸಂಖ್ಯಾತರ ಪಾಡು ಏನು ಎಂಬುದನ್ನು ಅವರದ್ದೇ ದೇಶದ ಮಾಜಿ ಕ್ರಿಕೆಟಿಗರೊಬ್ಬರು ಬಹಿರಂಗಪಡಿಸಿದ್ದಾರೆ. ಇಂಥ ದೇಶ ನಮಗೆ ಉಪದೇಶ ಮಾಡುವ ಯಾವ ಅರ್ಹತೆಯನ್ನೂ ಉಳಿಸಿಕೊಂಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next