Advertisement

ಪಾಕ್‌: ಕೋವಿಡ್‌-19 ಜತೆಗೆ ಇತರ ಸಾಂಕ್ರಾಮಿಕ ರೋಗ ಹೆಚ್ಚಳ ಸಂಭವ

04:59 PM May 11, 2020 | sudhir |

ಇಸ್ಲಾಮಾಬಾದ್‌: ವಿಶ್ವದೆಲ್ಲೆಡೆ ಕೋವಿಡ್‌-19 ಮರಣ ತಾಂಡವ ಬಿಡುವಿಲ್ಲದೆ ಮುಂದುವರೆಯುತ್ತಿದೆ. ಈ ಬಿಕ್ಕಟ್ಟಿನಿಂದ ಹೊರಬರಲು ಎಲ್ಲ ರಾಷ್ಟ್ರಗಳು ಶಕ್ತಿಮೀರಿ ಹೋರಾಟ ನಡೆಸುತ್ತಿವೆ. ಆದರೆ ಈ ನಡುವೆಯೇ ಪೊಲೀಯೊ ಮತ್ತಿತರ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಆಯೋಜಿಸುವ ಸಾಮೂಹಿಕ ಪೋಲಿಯೊ ಲಸಿಕೆ ಅಭಿಯಾನವನ್ನು ರದ್ದು ಮಾಡುವುದಾಗಿ ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದೆ. ಈ ನಿರ್ಧಾರದ ಪರಿಣಾಮವಾಗಿ ಈಗಾಗಲೇ ಕೋವಿಡ್‌-19 ಕೆನ್ನಾಲಿಗೆಗೆ ಬಲಿಯಾಗಿರುವ ಪಾಕಿಸ್ಥಾನದ ಆರೋಗ್ಯ ವ್ಯವಸ್ಥೆ ಮತ್ತಷ್ಟು ಹದಗೆಡಲಿದ್ದು, ಪೋಲಿಯೊ ಮತ್ತು ಇತರ ಸಾಂಕ್ರಾಮಿಕ ಕಾಯಿಲೆಗಳು ಹೆಚ್ಚಳವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

Advertisement

ಜಿನೀವಾದಲ್ಲಿರುವ ಜಾಗತಿಕ ಪೋಲಿಯೊ ನಿರ್ಮೂಲನಾ ಸಂಸ್ಥೆ (ಜಿಪಿಇಐ) ಕೋವಿಡ್‌-19 ಹರಡುವುದನ್ನು ತಡೆಯುವ ಸಲುವಾಗಿ ವಿಶ್ವಾದ್ಯಂತ ಪೋಲಿಯೊ ವ್ಯಾಕ್ಸಿನೇಷನ್‌ ಅಭಿಯಾನವನ್ನು ಸ್ಥಗಿತಗೊಳಿಸಲು ಶಿಫಾರಸು ಮಾಡಿದ್ದು, ಈ ನಿರ್ಧಾರ ಕುರಿತು ಇದುವರೆಗೂ ಯಾವುದೇ ವಿರೋಧ ವ್ಯಕ್ತವಾಗಿಲ್ಲ.

ಜಿಪಿಇಐ ಎಲ್ಲ ದೇಶಗಳಲ್ಲಿ ಸಾಮೂಹಿಕ ಲಸಿಕೆ ಅಭಿಯಾನದಂತಹ ಕಾರ್ಯಕ್ರಮಗಳನ್ನು 2020ರ ಮಧ್ಯಾಂತರದ ವರೆಗೆ ಮುಂದೂಡಬೇಕೆಂದು ಕರೆ ನೀಡಿದೆ. ಇದೀಗ ವಿಶ್ವಸಂಸ್ಥೆ ಮಹಾನಿರ್ದೇಶಕ ಟೆಡ್ರೊಸ್‌ ಅಧಾನೊಮ್‌ ಘೆಬ್ರೆಯೆಸಸ್‌, ಯುಎಸ್‌ ಸೆಂಟರ್‌ ಫಾರ್‌ಡಿಸೀಸ್‌ ಕಂಟ್ರೋಲ್‌ ಆ್ಯಂಡ್‌ ಪ್ರಿವೆನ್‌ಷನ್‌ (ಸಿಡಿಸಿ) ಮತ್ತು ಜಾಗತಿಕ ಆರೋಗ್ಯ ಕೇಂದ್ರಗಳ ಸಹಭಾಗಿತ್ವದಲ್ಲಿ ಜಿಪಿಇಐ ಮನವಿಗೆ ಅನುಮತಿ ನೀಡಿದ್ದಾರೆ.

ಜಿಪಿಇಐ ರಾಷ್ಟ್ರೀಯ ಸರಕಾರಗಳ ನೇತೃತ್ವದಲ್ಲಿ ಸರಕಾರಿ -ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ.ವಿಶ್ವ ಆರೋಗ್ಯ ಸಂಸ್ಥೆ (WHO), ರೋಟರಿ ಇಂಟರ್‌ನ್ಯಾಷನಲ್‌, ಸಿಡಿಸಿ, ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್‌), ಬಿಲ್‌ ಮತ್ತು ಮೆಲಿಂಡಾ ಗೇಟ್ಸ್‌ ಫೌಂಡೇಶನ್‌ ಮತ್ತು ಲಸಿಕೆ ಕೇಂದ್ರಗಳೊಂದಿಗೆ ಒಪ್ಪಂದ ಮಾಡಿಕೊಂಡು ಕಾರ್ಯಾಚರಿಸುತ್ತಿದೆ.

ಈ ಕುರಿತು ಜಿಪಿಇಐ ಮುಖ್ಯಸ್ಥ ಮೈಕೆಲ್‌ ಜಾಫ್ರಾನ್‌ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, “ನಾವು ಎರಡು ಭಯಾನಕ ಸನ್ನಿವೇಶಗಳ ನಡುವೆ ಸಿಕ್ಕಿಬಿದ್ದಿದ್ದೇವೆ’. ಆದರೆ ಇದರ ಹೊರತಾಗಿ ನಮಗೆ ಬೇರೆ ಯಾವುದೇ ದಾರಿ ಇಲ್ಲ. ಅಭಿಯಾನದಿಂದಾಗಿ ಕೋವಿಡ್‌-19 ಪ್ರಕರಣಗಳು ಮತ್ತಷ್ಟು ಹೆಚ್ಚಾಯಿತು ಎಂಬುದನ್ನು ಕೇಳಲು ನಾವು ಬಯಸುವುದಿಲ್ಲ ಎಂದು ಹೇಳಿದ್ದಾರೆ.

Advertisement

ಪಾಕ್‌ಗೆ ಕಂಟಕ
ಆದರೆ ಈ ಘೋಷಣೆ ಜಾರಿಯಿಂದ ಪಾಕ್‌ನ ಆರೋಗ್ಯ ವ್ಯವಸ್ಥೆ ಮತ್ತಷ್ಟು ದುರ್ಬಲವಾಗಲಿದ್ದು, ಪೋಲಿಯೊ, ದಡಾರ ಸೋಂಕು ಕಾಯಿಲೆಗಳು ಮೊದಲೇ ಹದೆಗೆಟ್ಟಿರುವ ದೇಶದ ಆರೋಗ್ಯ ವ್ಯವಸ್ಥೆಗೆ ಕಂಟಕವಾಗಲಿದೆ ಎಂದು ಪಾಕಿಸ್ಥಾನ ವೈದ್ಯಕೀಯ ಸಂಘದ ಪ್ರಧಾನ ಕಾರ್ಯದರ್ಶಿ ಖೈಸರ್‌ ಸಜ್ಜದ್‌ ಕಳವಳ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕೋವಿಡ್‌-19ನಿಂದಾಗಿ ಸಾಮರ್ಥ್ಯಕ್ಕಿಂತ ಹೆಚ್ಚಾಗಿಯೇ ದೇಶದ ಆರೋಗ್ಯ ಕ್ಷೇತ್ರದ ಮೇಲೆ ಹೊರೆಯಾಗಿದ್ದು, ಅಗತ್ಯ ಚಿಕಿತ್ಸಾ ಉಪಕರಣಗಳಿಲ್ಲದೆ ಪರದಾಡುತ್ತಿದ್ದೇವೆ. ಪರಿಸ್ಥಿತಿ ಹೀಗಿರುವಾಗ ಪೋಲಿಯೊ ಮತ್ತಿತ್ತರ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸಾಮೂಹಿಕ ಲಸಿಕೆ ಅಭಿಯಾನಗಳು ಅತ್ಯಗತ್ಯ ಎಂದು ಸಜ್ಜದ್‌ ಹೇಳಿದ್ದಾರೆ.

ಜಿಡಿಪಿಯ ಶೇ.1ಕ್ಕಿಂತಲೂ ಕಡಿಮೆ ಮೊತ್ತವನ್ನು ಆರೋಗ್ಯ ಕ್ಷೇತ್ರದ ವೆಚ್ಚಕ್ಕೆ ಮೀಸಲಿಡುವ ಪಾಕ್‌ ಈ ನಿರ್ಧಾರ ಕೇಳಿ ಆತಂಕಗೊಂಡಿದ್ದು, ಮುಂಬರುವ ದಿನಗಳಲ್ಲಿ ಕೋವಿಡ್‌-19, ಪೋಲಿಯೊ ಮತ್ತು ದಡಾರದಂತಹ ಸಾಂಕ್ರಾಮಿಕ ರೋಗಗಳು ಸೃಷ್ಟಿಸುವ ಬಿಕ್ಕಟ್ಟನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅಧಿಕ ಮಟ್ಟದಲ್ಲಿಯೇ ಆರ್ಥಿಕ ನೆರವು ಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದೆ.

ಎಪ್ರಿಲ್‌ ತಿಂಗಳಲ್ಲಿ 4 ಕೋಟಿ ಮಕ್ಕಳು ಪೋಲಿಯೊ ಲಸಿಕೆಯಿಂದ ವಂಚಿತರಾಗಿದ್ದು, ಈಗಾಗಲೇ ದೇಶದಲ್ಲಿ ಪೋಲಿಯೊ ಸಂಬಂಧಿಸಿದ 47 ಪ್ರಕರಣಗಳು ದಾಖಲಾಗಿವೆ.

ಪಾಕ್‌ನಲ್ಲಿ ಕೋವಿಡ್‌-19 ರಣಕೇಕೆ ಹೆಚ್ಚಾಗುತ್ತಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 30 ಸಾವಿರದ ಗಡಿ ದಾಟಿದೆ. ಒಟ್ಟಾರೆ ಮರಣ ಸಂಖ್ಯೆ 659ಕ್ಕೆ ತಲುಪಿದೆ ಎಂದು ಪಾಕ್‌ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next