ವಾಷಿಂಗ್ಟನ್ : ಪಾಕಿಸ್ಥಾನ ಶೀಘ್ರವೇ ವಿಶ್ವದ ಐದನೇ ಬೃಹತ್ ಪರಮಾಣು ಸಿಡಿತಲೆ ಹೊಂದಿರುವ ದೇಶವಾಗಿ ಮೂಡಿ ಬರಲಿದೆ ಎಂದು ವರದಿಗಳು ತಿಳಿಸಿವೆ.
ಪಾಕಿಸ್ಥಾನದ ಬಳಿ ಪ್ರಕೃತ 140 ರಿಂದ 150ರಷ್ಟು ಪರಮಾಣು ಸಿಡಿತಲೆಗಳಿವೆ. ಇವುಗಳ ಸಂಖ್ಯೆ ಹೆಚ್ಚುತ್ತಿರುವ ವೇಗವನ್ನು ಕಂಡರೆ 2025ರ ಒಳಗೆ ಪಾಕ್ ಬಳಿಕ ಇರುವ ಅಣ್ವಸ್ತ್ರ ಸಿಡಿತಲೆಗಳ ಸಂಖ್ಯೆ 220 ರಿಂದ 250 ಆಗುವ ನಿರೀಕ್ಷೆ ಇದೆ ಎಂದು ವರದಿ ತಿಳಿಸಿದೆ.
ಪಾಕ್ ಅಣ್ವಸ್ತ್ರಗಳ ಮೇಲೆ ನಿಕಟ ದೃಷ್ಟಿ ಇಟ್ಟಿರುವ ಅಮೆರಿಕದ ಲೇಖಕರು ಸಿದ್ಧ ಪಡಿಸಿರುವ ವರದಿಯಲ್ಲಿ ಪಾಕ್ ಅಣ್ವಸ್ತ್ರ ಸಂಖ್ಯೆ ಅತ್ಯಂತ ತ್ವರಿತಗತಿಯಲ್ಲಿ ಹೆಚ್ಚಾಗುತ್ತಿರುವ ಬಗೆ ಕಳವಳ ವ್ಯಕ್ತಪಡಿಸಲಾಗಿದೆ.
2020ರೊಳಗೆ ಪಾಕ್ ಅಣು ಸಿಡಿತಲೆಗಳ ಸಂಖ್ಯೆ 60ರಿಂದ 80ಕ್ಕೆ ಏರೀತು ಎಂದು 1999ರಲ್ಲಿ ಅಮೆರಿಕದ ರಕ್ಷಣಾ ಗುಪ್ತಚರ ದಳ ಅಂದಾಜಿಸಿತ್ತು. ಆದರೆ 2018ರಲ್ಲೇ ಈಗ ಪಾಕ್ ಬಳಿ 140ರಿಂದ 150ರಷ್ಟು ಅಣು ಸಿಡಿತಲೆಗಳು ಇರುವುದು ಬೆಳಕಿಗೆ ಬಂದಿದ್ದು ಪಾಕ್ ಅಣ್ವಸ್ತ ಸಾಮರ್ಥ್ಯ ಕುರಿತ ಈ ವರೆಗಿನ ಲೆಕ್ಕಾಚಾರಗಳೆಲ್ಲ ಹುಸಿಯಾಗಿವೆ.
ಪಾಕ್ ಅಣು ಸಿಡಿತಲೆಗಳ ಸಂಖ್ಯೆ ಒಂದೇ ಸಮನೆ ಏರುತ್ತಿರುವುದನ್ನು ಗಮನಿಸಿದರೆ ಪಾಕಿಸ್ಥಾನವು ಬೇಗನೆ ವಿಶ್ವದ 5ನೇ ಬೃಹತ್ ಅಣ್ವಸ್ತ್ರ ದೇಶವಾಗಲಿದೆ ಎಂದು ಹ್ಯಾನ್ಸ್ ಎಂ ಕ್ರಿಸ್ಟನ್‌ಸನ್, ರಾಬರ್ಟ್ ಎಸ್ ನೋರಿಸ್ ಮತ್ತು ಜೂಲಿಯಾ ಡೈಮಂಡ್ ಅವರು ಜತೆಗೂಡಿ ಸಿದ್ಧಪಡಿಸಿರುವ ವರದಿ ಹೆಳಿದೆ.