Advertisement

ಪಾಕ್‌ ಜತೆಗಿನ ನೌಕಾ ಭದ್ರತೆ ಮಾತುಕತೆ ರದ್ದು

03:45 AM Apr 16, 2017 | Team Udayavani |

ನವದೆಹಲಿ/ಇಸ್ಲಾಮಾಬಾದ್‌: ಭಾರತೀಯ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್‌ ಯಾದವ್‌ಗೆ ಗಲ್ಲುಶಿಕ್ಷೆ ವಿಧಿಸಿರುವ ಪ್ರಕರಣ ಭಾರತ-ಪಾಕ್‌ ಮಧ್ಯೆ ಮತ್ತಷ್ಟು ಕಂದಕ ಸೃಷ್ಟಿಸಿರುವ ಬೆನ್ನಲ್ಲೇ ಮುಂದಿನವಾರ ಪಾಕ್‌ ಜತೆ ನಡೆಯಬೇಕಿದ್ದ ನೌಕಾ ಭದ್ರತೆಗೆ ಸಂಬಂಧಿಸಿದ ಮಾತುಕತೆಯನ್ನು ಭಾರತ ರದ್ದು ಮಾಡಿದೆ.

Advertisement

ಪಾಕಿಸ್ತಾನದ ನೌಕಾ ಭದ್ರತಾ ಸಂಸ್ಥೆ(ಎಂಎಸ್‌ಎ) ನೇತೃತ್ವದ ನಿಯೋಗವು ಮುಂದಿನವಾರ ಭಾರತಕ್ಕೆ ಭೇಟಿ ನೀಡಬೇಕಿತ್ತು. ಮೀನುಗಾರರಿಗೆ ಸಂಬಂಧಿಸಿದ ವಿಚಾರಗಳು, ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಗಳ ಕುರಿತು ಏ.16ರಿಂದ 19ರವರೆಗೆ ಭಾರತದೊಂದಿಗೆ ಮಾತುಕತೆ ನಡೆಸಬೇಕಿತ್ತು. ಆದರೆ, ಜಾಧವ್‌ ವಿವಾದ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಪಾಕ್‌ ನಿಯೋಗದ ಭೇಟಿಗೆ ರಕ್ಷಣಾ ಸಚಿವಾಲಯ ಅನುಮತಿ ನೀಡಲಿಲ್ಲ ಎಂದು ಕರಾವಳಿ ರಕ್ಷಕ ಪಡೆಯ ಮೂಲಗಳು ತಿಳಿಸಿವೆ.

ಎಲ್ಲ ಪ್ರಯತ್ನ ನಡೆಸುತ್ತೇವೆ: ಇದೇ ವೇಳೆ, ಬೇಹುಗಾರಿಕೆ ಆರೋಪದಲ್ಲಿ ಮರಣದಂಡನೆಗೆ ಗುರಿಯಾಗಿರುವ ಜಾಧವ್‌ರಿಗೆ ರಾಯಭಾರಿಯ ಭೇಟಿಗೆ ಅವಕಾಶ ಕಲ್ಪಿಸಿಕೊಡಲು ಎಲ್ಲ ರೀತಿಯ ಪ್ರಯತ್ನಗಳನ್ನೂ ನಡೆಸಲಾಗುತ್ತಿದೆ ಎಂದು ವಿದೇಶಾಂಗ ಖಾತೆ ಸಹಾಯಕ ಸಚಿವ ಜ.ವಿ.ಕೆ.ಸಿಂಗ್‌ ಶನಿವಾರ ಹೇಳಿದ್ದಾರೆ.

ಮೂವರು ರಾ ಏಜೆಂಟ್‌ಗಳ ಬಂಧನ?
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪೊಲೀಸರು ಶನಿವಾರ ಮೂರು ಮಂದಿಯನ್ನು ಬಂಧಿಸಿದ್ದು, ಅವರು ಭಾರತದ ಗುಪ್ತಚರ ಸಂಸ್ಥೆ ರಿಸರ್ಚ್‌ ಆ್ಯಂಡ್‌ ಅನಾಲಿಸಿಸ್‌ ವಿಂಗ್‌(ರಾ)ನ ಏಜೆಂಟ್‌ಗಳು ಎಂದು ಆರೋಪಿಸಿದ್ದಾರೆ. ಈ ಮೂವರು ಪಿಒಕೆಯ ಅಬ್ಟಾಸ್‌ಪುರದ ನಿವಾಸಿಗಳಾಗಿದ್ದು, ಇವರು ಪಾಕ್‌ ವಿರುದ್ಧದ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂದೂ ಪೊಲೀಸರು ಹೇಳಿದ್ದಾರೆ. ಇವರನ್ನು ರಾವಲ್‌ಕೋಟ್‌ನಲ್ಲಿ ವಿಚಾರಣೆ ನಡೆಸುವ ವೇಳೆ ಮಾಧ್ಯಮದ ಮುಂದೆ ಕರೆತರಲಾಯಿತು ಎಂದು ಪಾಕಿಸ್ತಾನದ ಡಾನ್‌ ಪತ್ರಿಕೆ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next