Advertisement

ಸಿಪೆಕ್‌: ಭಾರತದ ಬೆನ್ನಿಗೆ ನಿಂತ ಅಮೆರಿಕ ಸರ್ಕಾರ

07:00 AM Oct 05, 2017 | Team Udayavani |

ವಾಷಿಂಗ್ಟನ್‌: ಭಾರತದ ವಿರೋಧದ ನಡುವೆಯೂ ಪಟ್ಟು ಬಿಡದೇ ಉದ್ಧಟತನ ತೋರಿದ್ದ ಪಾಕಿಸ್ತಾನ ಮತ್ತು ಚೀನಾಗೆ ಇದೀಗ ಅಮೆರಿಕ ಚಾಟಿ ಬೀಸಿದೆ. 50 ಶತಕೋಟಿ ಡಾಲರ್‌ ವೆಚ್ಚದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌(ಸಿಪೆಕ್‌) ಯೋಜನೆಯ ವಿಚಾರದಲ್ಲಿ ಭಾರತದ ನಿಲುವಿಗೆ ಅಮೆರಿಕ ಬೆಂಬಲ ಘೋಷಿಸಿದೆ. ಈ ಕುರಿತು ಬುಧವಾರ ಖಾರವಾಗಿ ಮಾತನಾಡಿರುವ ಟ್ರಂಪ್‌ ಆಡಳಿತ, “ಈ ಯೋಜನೆಯು ವಿವಾದಿತ ಪ್ರದೇಶ ದಲ್ಲಿ ಹಾದು ಹೋಗುತ್ತಿದ್ದು, ಇಂಥದ್ದನ್ನು ಹಮ್ಮಿಕೊಳ್ಳುವ ಸರ್ವಾಧಿಕಾರ ಯಾವ ದೇಶಕ್ಕೂ ಇಲ್ಲ’ ಎಂದು ಹೇಳಿದೆ.

Advertisement

ನೆರೆರಾಷ್ಟ್ರಗಳ ಸಿಪೆಕ್‌ ಯೋಜನೆಯು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಹಾದುಹೋಗುವ ಕಾರಣ, ಭಾರತವು ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಾ ಬಂದಿದೆ. ಕಾರಿಡಾರ್‌ ಹಾದುಹೋಗುವ ಪ್ರದೇಶದಲ್ಲಿ ಸಿಯಾಚಿನ್‌ ಹಿಮಗಲ್ಲು ಸೇರಿದಂತೆ ಕಾರಕೋರಮ್‌ ಪರ್ವತ ಶ್ರೇಣಿಯೂ ಸೇರುತ್ತದೆ. ಆದರೆ, ಭಾರತದ ಆಕ್ಷೇಪಕ್ಕೆ ಎರಡೂ ರಾಷ್ಟ್ರಗಳು ಕಿವಿಕೊಟ್ಟಿರಲಿಲ್ಲ.

ಬುಧವಾರ ಭಾರತದ ಪರ ನಿಂತ ಅಮೆರಿಕ ರಕ್ಷಣಾ ಸಚಿವ ಜಿಮ್‌ ಮ್ಯಾಟಿಸ್‌, “ಜಾಗತಿಕ ಲೋಕದಲ್ಲಿ, ಹಲವಾರು ರಸ್ತೆಗಳು ಮತ್ತು ಕಿರಿದಾದ ಭೂಪ್ರದೇಶಗಳಿವೆ. ಆದರೆ, “ಒನ್‌ ಬೆಲ್ಟ್, ಒನ್‌ ರೋಡ್‌’ ಕುರಿತು ಆಜ್ಞಾಪಿಸುವ ಅಧಿಕಾರ ಯಾವ ದೇಶಕ್ಕೂ ಇಲ್ಲ. ಅದರಲ್ಲೂ ವಿವಾದಿತ ಪ್ರದೇಶವೊಂದರಲ್ಲಿ ಈ ರಸ್ತೆ ಹಾದುಹೋಗುತ್ತದೆಂದರೆ, ಅದನ್ನು ಒಪ್ಪುವ ಪ್ರಶ್ನೆಯೇ ಇಲ್ಲ’ ಎಂದಿದ್ದಾರೆ. ಸೆನೆಟರ್‌ ಚಾರ್ಲ್ಸ್ ಪೀಟರ್‌ ಅವರು ಸಿಪೆಕ್‌ ಮತ್ತು ಚೀನಾದ ನೀತಿಗಳ ಕುರಿತು ಕೇಳಿದ ಪ್ರಶ್ನೆಗೆ ಮ್ಯಾಟಿಸ್‌ ಈ ಉತ್ತರ ನೀಡಿದ್ದಾರೆ.

ಐಎಸ್‌ಐಗೆ ಉಗ್ರರ ಜತೆ ಸಂಪರ್ಕ: ಅಮೆರಿಕ ಆರೋಪ
ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್‌ಐ) ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದೆ ಎಂದು ಹೇಳಿರುವ ಅಮೆರಿಕ, ಐಎಸ್‌ಐ ತನ್ನದೇ ಆದ ವಿದೇಶಾಂಗ ನೀತಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂಬ ಗಂಭೀರ ಆರೋಪ ಮಾಡಿದೆ. ಆದರೆ ಇದನ್ನು ಪಾಕಿಸ್ತಾನ ತಳ್ಳಿಹಾಕಿದ್ದು, ಇದೊಂದು ಆಧಾರರಹಿತ ಆರೋಪ ಎಂದಿದೆ.

ಲಾಸ್‌ ವೆಗಾಸ್‌ನಲ್ಲಿ ವ್ಯಕ್ತಿಯೊಬ್ಬ ನಡೆಸಿದ ಹಿಂಸಾಕೃತ್ಯ ಘಟನೆಗೆ ಸಂಬಂಧಿಸಿ ಮಾತನಾಡಿರುವ ಅಮೆರಿಕ ಜನರಲ್‌ ಜೋಸೆಫ್ ಡನ್‌ಫೋರ್ಡ್‌, ಅಮೆರಿಕ ಸಂಸತ್‌ ಸದಸ್ಯ ಜೊ ಡಾನೆಲ್ಲಿ ಅವರು ಕೇಳಿರುವ ಪ್ರಶ್ನೆಗೆ ಉತ್ತರಿಸಿದರು. ಪಾಕಿಸ್ತಾನದ ಐಎಸ್‌ಐ ಭಯೋತ್ಪಾದಕರ ಜತೆ ಸಂಪರ್ಕ ಹೊಂದಿದೆ ಎಂದೇ ಅನಿಸುತ್ತಿದೆ. ಅಷ್ಟೇ ಅಲ್ಲ ತಾಲಿಬಾನಿಗಳ ಜತೆಗೂ ಕೈಜೋಡಿಸಿದೆ ಎಂದಿದ್ದಾರೆ. ಪಾಕಿಸ್ತಾನದ ನಡಾವಳಿಯಲ್ಲಿ ಬದಲಾವಣೆ ತರ ಬೇಕೆನ್ನುವ ನಿಟ್ಟಿನಲ್ಲಿ ಅಮೆರಿಕ ದ್ವಿಪಕ್ಷೀಯ ಒಪ್ಪಂದಕ್ಕೆ ಮುಂದಾಗಿದೆಯಾದರೂ, ಅದು ಬದಲಾಗುತ್ತದೆನ್ನುವ ವಿಶ್ವಾಸವಿಲ್ಲ ಈಗಿಲ್ಲ ಎಂದಿದ್ದಾರೆ.

Advertisement

ಮತ್ತೆ ಪಾಕಿಸ್ತಾನಕ್ಕೆ ಭಾರತದ ಚಾಟಿ
ಕಾಶ್ಮೀರದ ಕುರಿತು ಸುಳ್ಳು ಫೋಟೋ ತೋರಿಸಿ ವಿಶ್ವ ಸಮುದಾಯದ ಮುಂದೆ ಮುಜುಗರಕ್ಕೀಡಾಗಿದ್ದ ಪಾಕಿಸ್ತಾನ ಮತ್ತೆ ವಿಶ್ವಸಂಸ್ಥೆಯಲ್ಲಿ ಬಾಲ ಬಿಚ್ಚಿದ್ದು, ಬುಧವಾರ ಹೊಸದಾಗಿ ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿದೆ. ಕಣಿವೆ ರಾಜ್ಯದಲ್ಲಿ ಭಾರತವು ಭಯೋತ್ಪಾದನೆಯನ್ನು ಹರಡುತ್ತಿದೆ ಎಂದು ಪಾಕ್‌ ರಾಯಭಾರಿ ಮಲೀಹಾ ಲೋಧಿ ಆರೋಪಿಸಿದ್ದಾರೆ. ಜತೆಗೆ, ಎಲ್‌ಒಸಿಯಲ್ಲಿ ಸರ್ಜಿಕಲ್‌ ದಾಳಿ ನಡೆಸಿದ್ದೇವೆಂದು ಭಾರತ ಸುಳ್ಳು ಹೇಳಿದೆ ಎಂದೂ ಹೇಳಿದ್ದಾರೆ. ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿರುವ ಭಾರತದ ಅಧಿಕಾರಿ ಏನಮ್‌ ಗಂಭೀರ್‌, “ಭಾರತದ ನಿಯೋಗವು ಅಮೂಲ್ಯ ಸಮಯವನ್ನು ವ್ಯರ್ಥ ಮಾಡಲು ಬಯಸುವುದಿಲ್ಲ. ಪಾಕಿಸ್ತಾನ ಆರೋಪವು ದಟ್ಟಡವಿ ಯಲ್ಲಿನ ಏಕಾಂಗಿಯ ಕೂಗಿನಂತೆ ಕೇಳಿಸುತ್ತಿದೆ. ಅದೇ ರಾಗ, ಅದೇ ಹಾಡು’ ಎಂದಿದ್ದಾರೆ.

ಪಾಕಿಸ್ತಾನವು ಮೊದಲು ತನ್ನ ನೆಲದಲ್ಲಿ ಭಯೋತ್ಪಾದಕರ ಪೋಷಿಸುವುದನ್ನು ನಿಲ್ಲಿಸಿ, ಅಂತಾರಾಷ್ಟ್ರೀಯ ಜವಾಬ್ದಾರಿಯನ್ನು ಅರಿತುಕೊಂಡರೆ ಮಾತ್ರವೇ ಭಾರತದಿಂದ ಉತ್ತಮ ಆರ್ಥಿಕ ಅನುಕೂಲತೆಯನ್ನು ಪಡೆಯಬಹುದು.
– ಜಿಮ್‌ ಮ್ಯಾಟಿಸ್‌, 
ಅಮೆರಿಕ ರಕ್ಷಣಾ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next