ಶೃಂಗೇರಿ ಶಾರದೆ, ಕಾಶ್ಮೀರಪುರವಾಸಿನಿ. ಅದು ಜನಜನಿತ. ಹಾಗೆಯೇ, ಪಾಕಿಸ್ತಾನದಲ್ಲಿದ್ದ ದೇವಿಯೊಬ್ಬಳು ಕರುನಾಡಿನ ಒಂದು ತುದಿಯಲ್ಲಿ ನೆಲೆನಿಂತು, ಭಕ್ತರಿಗೆ ಅಭಯ ನೀಡುತ್ತಿರುವ ಅಪರೂಪದ ದೇಗುಲ ಇಲ್ಲೊಂದಿದೆ. ಕಲಬುರ್ಗಿ ಜಿಲ್ಲೆಯ ಹೊನಗುಂಟಾ ಕ್ಷೇತ್ರದಲ್ಲಿ ಪೀಠಾಲಂಕೃತಗೊಂಡ ಶ್ರೀ ಚಂದ್ರಲಾ ಪರಮೇಶ್ವರಿ, ಪಾಕ್‌ನ ಹಿಂಗುಲಾ ದೇವಿಯ ಪ್ರತಿರೂಪ ಅಂತಲೇ ಆರಾಧಿಸಲಾಗುತ್ತಿದೆ.
ಬಾದಾಮಿ ಚಾಲುಕ್ಯರ ಇಷ್ಟದೇವತೆ, ಕುಲದೇವತೆಯಾಗಿದ್ದ ಶ್ರೀ ಚಂದ್ರಲಾ ಪರಮೇಶ್ವರಿ, ಭೀಮಾ- ಕಾಗಿಣ ನದಿಗಳ ಸಂಗಮದ ವಾಸಿನಿ. ಶತಶತಮಾನಗಳ ಹಿಂದೆಯೇ ಈಕೆ ಭಕ್ತಕೋಟಿಯನ್ನು ಪಾವನಗೊಳಿಸಿದಾಕೆ. ಇಲ್ಲಿನ ಶ್ರೀಚಕ್ರವನ್ನು ಆದಿಗುರು ಶಂಕರಾಚಾರ್ಯರು ಸ್ಥಾಪಿಸಿದರು ಎಂದು ಪ್ರತೀತಿ. ದೇವಿಯ ಮೂಲ ಪೀಠ ಇರುವುದು ಪಾಕಿಸ್ತಾನದ ಬಲೂಚಿಸ್ಥಾನದಲ್ಲಿ. “ಹಿಂಗುಲಾ ಮಾತೆ’ಯ ದರ್ಶನ, ಅಲ್ಲಿನ ಹಿಂದೂಗಳಿಗೆ ಬಹುದೊಡ್ಡ ತೀರ್ಥಯಾತ್ರೆ ಕೂಡ ಹೌದು.
ಆ ದೇವಿ ಇಲ್ಲಿಗೇಕೆ ಬಂದಳು?: ಇದಕ್ಕೂ ಒಂದು ಕೌತುಕದ ಕತೆಯುಂಟು. ಸೇತುವೆ ಎಂಬ ರಾಜನು, ಗ್ರಾಮಸ್ಥರಿಗೆ ವಿಪರೀತ ಕಾಟ ಕೊಡುತ್ತಿದ್ದನಂತೆ. ಅಲ್ಲದೇ, ನಾರಾಯಣ ಮುನಿಯ ಪತ್ನಿ ಚಂದ್ರವದನೆಯ ಅಂದಕ್ಕೆ ಮರುಳಾಗಿ, ತನ್ನನ್ನು ವಿವಾಹವಾಗುವಂತೆ ಪೀಡಿಸುತ್ತಿದ್ದನಂತೆ. ಇದಕ್ಕೆ ಒಪ್ಪದಿದ್ದಾಗ ಚಂದ್ರವದನೆಯನ್ನು, ಸೇತುವೆರಾಜ ಅಪಹರಿಸಿದ. ನಾರಾಯಣ ಮುನಿಗಳು ತಮ್ಮ ತಪೋಶಕ್ತಿಯಿಂದ ಪತ್ನಿಯ ಇರುವಿಕೆಯನ್ನು ಕಂಡುಕೊಂಡರಾದರೂ, ಆಕೆಯನ್ನು ಬಿಡಿಸುವುದು ಅಷ್ಟು ಸುಲಭವಿರಲಿಲ್ಲ.
ಮುನಿಗಳು, ಹಿಂಗುಲಾ ದೇವಿಯ ಮುಂದೆ ಘೋರ ತಪಸ್ಸಿಗೆ ಕುಳಿತರಂತೆ. ಮುನಿಗಳ ತಪಸ್ಸಿಗೆ ದೇವಿ ಒಲಿದಾಗ, ಪತ್ನಿಯನ್ನು ಹುಡುಕಿಕೊಡುವಂತೆ ಕೇಳುತ್ತಾರೆ. ಆಗ ದೇವಿ, “ನೀ ಮುಂದೆ ನಡೆ, ನಾ ಹಿಂದೆ ಬರುವೆ.ಹಾದಿಯುದ್ದಕ್ಕೂ ನನ್ನ ಗೆಜ್ಜೆಯ ದನಿ ನಿನಗೆ ಕೇಳುತ್ತಿರುತ್ತದೆ. ಒಂದು ವೇಳೆ, ನೀನು ಹಿಂತಿರುಗಿ ನೋಡಿದರೆ, ನಾನು ಅಲ್ಲಿಯೇ ತಟಸ್ಥಳಾಗುತ್ತೇನೆ’ ಎಂಬ ಷರತ್ತು ಹಾಕುತ್ತಾಳಂತೆ. ಅದರಂತೆ, ಮುನಿಗಳ ಜೊತೆಗೆ ಹಿಂಗುಲಾ ದೇವಿ, ಬಲೂಚಿಸ್ಥಾನದಿಂದ ನಡೆದುಕೊಂಡು ಹೊರಡುತ್ತಾಳೆ.
ಹಾಗೆ, ಭೀಮಾ- ಕಾಗಿಣ ನದಿಯ ಸಂಗಮ ತಟಕ್ಕೆ ಬಂದಾಗ, ದೇವಿಯ ಗೆಜ್ಜೆಯ ಸದ್ದು, ಮುನಿಯ ಕಿವಿಗೆ ಬೀಳುವುದಿಲ್ಲ. ಆಗ ಮುನಿ, ಹಿಂತಿರುಗಿ ನೋಡಿದಾಗ, ದೇವಿ ಅಲ್ಲಿಯೇ ತಟಸ್ಥಳಾಗುತ್ತಾಳೆ. ಅದೇ ಹೊನಗುಂಟಾ ಕ್ಷೇತ್ರವಾಯಿತು. ಹಿಂಗುಲಾ ದೇವಿಯ ಪ್ರತಿರೂಪವಾಗಿ ಚಂದ್ರಲಾ ನೆಲೆನಿಂತಳು ಎನ್ನುವುದು ಜನರ ನಂಬಿಕೆ. ಶ್ರೀ ಚಂದ್ರಲಾ ದೇವಿಯು ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿಯ ಅವತಾರದಲ್ಲಿದ್ದಾಳೆಂದು ಭಕ್ತರು ನಂಬುತ್ತಾರೆ. ಇಲ್ಲಿ ದಸರಾ ಆಚರಣೆ ಬಹಳ ವಿಶೇಷ. ಕಾರ್ತೀಕ ಮಾಸ, ಹುಣ್ಣಿಮೆ, ಅಮಾವಾಸ್ಯೆಯಂದು ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ.
ದಾರಿ…: ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ಹೊನಗುಂಟಾ ಕ್ಷೇತ್ರವಿದೆ. ಕಲಬುರ್ಗಿಯಿಂದ ಇಲ್ಲಿಗೆ 57 ಕಿ.ಮೀ. ದೂರ. ಬಸ್ಸಿನ ವ್ಯವಸ್ಥೆ ಇರುತ್ತದೆ.
* ಭಾಗ್ಯ ಎಸ್. ಬುಳ್ಳಾ