Advertisement

ವಿಕಿಪೀಡಿಯಾ ಮೇಲೆ ನಿರ್ಬಂಧ ವಿಧಿಸಿದ ಪಾಕಿಸ್ಥಾನ !

12:29 AM Feb 05, 2023 | Team Udayavani |

ಇಸ್ಲಾಮಾಬಾದ್‌: ಆನ್‌ಲೈನ್‌ ಮಾಹಿತಿ ಪೂರೈಕೆ ಜಾಲತಾಣ ವಿಕಿಪೀಡಿಯಾದಿಂದ ಧರ್ಮನಿಂದನೆ ಹಾಗೂ ಆಕ್ಷೇಪಾರ್ಹ ಮಾಹಿತಿಗಳನ್ನು ತೆಗೆದು ಹಾಕುವಲ್ಲಿ ವಿಫ‌ಲವಾಗಿರುವ ಹಿನ್ನೆಲೆ ಪಾಕಿಸ್ಥಾನ ಸರಕಾರ ವಿಕಿಪೀಡಿಯಾ ಮೇಲೆ ನಿರ್ಬಂಧ ವಿಧಿಸಿದೆ.

Advertisement

ಇತ್ತೀಚೆಗಷ್ಟೇ ವಿಕಿಪೀಡಿಯಾದಲ್ಲಿ ಇಸ್ಲಾಂ ಕುರಿತಂತೆ ಕೆಲವು ಆಕ್ಷೇಪಾರ್ಹ ಸಂಗತಿಗಳು ಹಾಗೂ ಧರ್ಮನಿಂದನೆ ಸಹಿತ ವಿವಿಧ ಮಾಹಿತಿಗಳು ಹಂಚಿಕೆಯಾಗಿರುವುದನ್ನು ಪಾಕಿಸ್ಥಾನ ದೂರ ಸಂಪರ್ಕ ಪ್ರಾಧಿಕಾರ (ಪಿಟಿಎ) ಗಮನಿಸಿತ್ತು. ಅಲ್ಲದೇ ಆ ವಿಚಾರಗಳನ್ನು ತೆಗೆದು ಹಾಕುವಂತೆಯೂ ತಾಕೀತು ಮಾಡಿತ್ತು.

ದೇಶಾದ್ಯಂತ ವಿಕಿಪೀಡಿಯಾ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿಸುವುದಲ್ಲದೇ 48 ಗಂಟೆಗಳ ಗಡುವು ನೀಡಿ, ಮಾಹಿತಿಗಳನ್ನು ಸರಿಪಡಿಸುವಂತೆ ಕೇಳಿತ್ತು. ಆದರೆ ಪಾಕ್‌ ಸರಕಾರದ ಆದೇಶಕ್ಕೆ ವಿಕಿಪೀಡಿಯಾ ಕಿಮ್ಮತ್ತು ನೀಡದೇ ಇದ್ದ ಕಾರಣ ಸರಕಾರ ದೇಶದಲ್ಲಿ ವಿಕಿಪೀಡಿಯಾ ಸೇವೆಯನ್ನೇ ಸ್ಥಗಿತಗೊಳಿಸಿದೆ. ವಿಕಿಪೀಡಿಯಾದಲ್ಲಿನ ಮಾಹಿತಿಗಳನ್ನು ಯಾರು ಬೇಕಾದರೂ ಬದಲಿಸುವ ಅವಕಾಶವಿರುವುದರಿಂದ ಪಾಕ್‌ ವಿರುದ್ಧದ ಮಾಹಿತಿಗಳನ್ನೇ ಬಿತ್ತರಿಸಲು ಅದು ಸಹಕಾರಿಯಾಗುತ್ತಿದೆ ಎನ್ನುವ ಮಾತುಗಳೂ ಕೇಳಿ ಬಂದಿವೆ.

ಸಾಲ ಕೊಡದಿದ್ದರೆ ಬಾಂಬ್‌ ಬೆದರಿಕೆ!: “ಬಲದ ಕೈಯ್ಯಲ್ಲಿ ಕುರಾನ್‌ ಹಿಡಿದುಕೊಳ್ಳಿ ಮತ್ತು ಎಡ ಕೈಯಲ್ಲಿ ಪರಮಾಣು ಬಾಂಬ್‌ ಇರುವ ಸೂಟ್‌ಕೇಸ್‌ ಹಿಡಿದುಕೊಂಡು ಪಾಕಿಸ್ಥಾನದ ಪ್ರಧಾನಿ ಮತ್ತು ಸಂಪುಟ ಸ್ವೀಡನ್‌ಗೆ ತೆರಳಬೇಕು. ಅಲ್ಲಿ ನಾವು ಕುರಾನ್‌ ರಕ್ಷಣೆಗೆ ಬಂದಿದ್ದೇವೆ ಎಂದು ಹೇಳಿ. ಜಗತ್ತಿನ ರಾಷ್ಟ್ರಗಳು ನಿಮ್ಮ ಕಾಲಿಗೆ ಬೀಳದಿದ್ದರೆ ನನ್ನ ಹೆಸರು ಬದಲಾವಣೆ ಮಾಡಿಕೊಳ್ಳುತ್ತೇನೆ’!ಹೀಗೆಂದು ಹೇಳಿದ್ದು ಪಾಕಿಸ್ಥಾನದಲ್ಲಿ ಮೂಲಭೂತ ನಿಲುವು ಹೊಂದಿರುವ ತೆಹ್ರೀಕ್‌-ಇ-ಲಬೈಕ್‌ ಪಾಕಿಸ್ಥಾನ್‌ ಪಕ್ಷದ ನಾಯಕ ಸಾದ್‌ ರಿಜ್ವಿ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕ್‌ ವಿಶ್ವರಾಷ್ಟ್ರಗಳ ಮುಂದೆ ಸಾಲ ಕೇಳುತ್ತಿರುವುದನ್ನು ಖಂಡಿಸಿದ ರಿಜ್ವಿ ಬೇಡುವುದರ ಬದಲು ಕುರಾನ್‌ ಮತ್ತು ಪರಮಾಣು ಬಾಂಬ್‌ ಹಿಡಿದುಕೊಂಡು ರಾಷ್ಟ್ರಗಳನ್ನು ಬೆದರಿಸಿಬೇಕು ಎಂದು ಸರಕಾರಕ್ಕೆ ಸಲಹೆ ನೀಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next