Advertisement

ಲಂಕೆಗೆ ಸೋಲಿನ ಶಾಕ್‌ ಕೊಟ್ಟ ಪಾಕ್‌

12:15 AM Dec 24, 2019 | Team Udayavani |

ಕರಾಚಿ: ದಶಕದ ಬಳಿಕ ತವರಲ್ಲಿ ಟೆಸ್ಟ್‌ ಸರಣಿಯನ್ನಾಡುವ ಅವಕಾಶ ಪಡೆದ ಪಾಕಿಸ್ಥಾನ, ಇದನ್ನು ಗೆಲುವಿನೊಂದಿಗೆ ಸಂಭ್ರಮಿಸಿದೆ. ಕರಾಚಿಯಲ್ಲಿ ಸೋಮವಾರ ಮುಗಿದ 2ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಶ್ರೀಲಂಕಾಕ್ಕೆ 263 ರನ್ನುಗಳ ಆಘಾತವಿಕ್ಕಿ 1-0 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ.

Advertisement

ಗೆಲುವಿಗೆ 476 ರನ್ನುಗಳ ಕಠಿನ ಗುರಿ ಪಡೆದಿದ್ದ ಶ್ರೀಲಂಕಾ, 4ನೇ ದಿನದಾಟದ ಅಂತ್ಯಕ್ಕೆ 7 ವಿಕೆಟಿಗೆ 212 ರನ್‌ ಮಾಡಿ ಸೋಲನ್ನು ಖಚಿತಗೊಳಿಸಿತ್ತು. ಅಂತಿಮ ದಿನ ಕೇವಲ 14 ನಿಮಿಷಗಳಲ್ಲಿ, 16 ಎಸೆತ ಹಾಕುವಷ್ಟರಲ್ಲಿ ಅದೇ ಮೊತ್ತಕ್ಕೆ ಆಲೌಟ್‌ ಆಯಿತು.

ಮೊದಲು ಖಾತೆ ತೆರೆಯದ ಲಸಿತ್‌ ಎಂಬುಲೆªàನಿಯ ವಿಕೆಟ್‌ ಬಿತ್ತು. ಬಳಿಕ 102 ರನ್‌ ಮಾಡಿ ಹೋರಾಟ ನಡೆಸುತ್ತಿದ್ದ ಒಶಾದ ಫೆರ್ನಾಂಡೊ ಪೆವಿಲಿಯನ್‌ ಸೇರಿಕೊಂಡರು. ವಿಶ್ವ ಫೆರ್ನಾಂಡೊ ಅಂತಿಮ ವಿಕೆಟ್‌ ರೂಪದಲ್ಲಿ ನಿರ್ಗಮಿಸಿದರು.

ನಸೀಮ್‌ ಶಾ ಸಾಧನೆ
ಈ ಮೂರೂ ವಿಕೆಟ್‌ ಯುವ ವೇಗಿ ನಸೀಮ್‌ ಶಾ ಪಾಲಾಯಿತು. ಶಾ ಸಾಧನೆ 31ಕ್ಕೆ 5 ವಿಕೆಟ್‌. ಇದರೊಂದಿಗೆ ಟೆಸ್ಟ್‌ ಇನ್ನಿಂಗ್ಸ್‌ ಒಂದರಲ್ಲಿ 5 ವಿಕೆಟ್‌ ಉರುಳಿಸಿದ ವಿಶ್ವದ 2ನೇ ಅತೀ ಕಿರಿಯ ಬೌಲರ್‌ ಎಂಬ ಹೆಗ್ಗಳಿಕೆ ನಸೀಮ್‌ ಶಾ ಅವರದಾಯಿತು (16 ವರ್ಷ, 307 ದಿನ). ದಾಖಲೆ ಪಾಕಿಸ್ಥಾನದವರೇ ಆದ ನಸೀಮ್‌ ಉಲ್‌ ಘನಿ ಹೆಸರಲ್ಲಿದೆ. ಎಡಗೈ ಸ್ಪಿನ್ನರ್‌ ಆಗಿದ್ದ ಘನಿ ವೆಸ್ಟ್‌ ಇಂಡೀಸ್‌ ಎದುರಿನ 1957-58ರ ಜಾರ್ಜ್‌ಟೌನ್‌ ಟೆಸ್ಟ್‌ ಪಂದ್ಯದಲ್ಲಿ ಈ ಸಾಧನೆಗೈಯುವಾಗ ನಸೀಮ್‌ ಶಾಗಿಂತ ಕೇವಲ 4 ದಿನ ಕಿರಿಯರಾಗಿದ್ದರು.

2009ರಲ್ಲಿ ಲಾಹೋರ್‌ನಲ್ಲಿ ಶ್ರೀಲಂಕಾ ಬಸ್‌ ಮೇಲಿನ ಭಯೋತ್ಪಾದಕ ದಾಳಿ ನಡೆದ ಬಳಿಕ ಪಾಕಿಸ್ಥಾನದಲ್ಲಿ ನಡೆದ ಮೊದಲ ಟೆಸ್ಟ್‌ ಸರಣಿ ಇದಾಗಿತ್ತು. ರಾವಲ್ಪಿಂಡಿಯಲ್ಲಿ ನಡೆದ ಮೊದಲ ಟೆಸ್ಟ್‌ ಮಳೆಯ ಹೊಡೆತಕ್ಕೆ ಸಿಲುಕಿ ಡ್ರಾಗೊಂಡಿತ್ತು.

Advertisement

ಮೂರಕ್ಕೇರಿದ ಪಾಕ್‌
ಇದು 1992ರ ಬಳಿಕ ಶ್ರೀಲಂಕಾ ವಿರುದ್ಧ ತವರಿನಲ್ಲಿ ಪಾಕ್‌ ಸಾಧಿಸಿದ ಮೊದಲ ಟೆಸ್ಟ್‌ ಸರಣಿ ಗೆಲುವು. ಈ ಜಯದೊಂದಿಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಪಾಕಿಸ್ಥಾನ 3ನೇ ಸ್ಥಾನಕ್ಕೇರಿತು (80 ಅಂಕ). ಭಾರತ (360), ಆಸ್ಟ್ರೇಲಿಯ (216) ಮೊದಲೆರಡು ಸ್ಥಾನದಲ್ಲಿವೆ.

ಲಂಕಾ ತಂಡಕ್ಕೆ ಕೃತಜ್ಞತೆ
ಈ ಸಂದರ್ಭದಲ್ಲಿ, ಪಾಕಿಸ್ಥಾನದಲ್ಲಿ ಟೆಸ್ಟ್‌ ಸರಣಿ ಪುನರಾರಂಭಗೊಳ್ಳಲು ಕಾರಣವಾದ ಶ್ರೀಲಂಕಾ ತಂಡಕ್ಕೆ ಪಾಕ್‌ ನಾಯಕ ಅಜರ್‌ ಅಲಿ ಕೃತಜ್ಞತೆ ಸಲ್ಲಿಸಿದ್ದಾರೆ. ಎಳೆಯ ಬೌಲರ್‌ ನಸೀಮ್‌ ಶಾ ಪ್ರತಿಭೆಯನ್ನು ಕೊಂಡಾಡಿದ್ದಾರೆ.

ಸಂಕ್ಷಿಪ್ತ ಸ್ಕೋರ್‌
ಪಾಕಿಸ್ಥಾನ-191 ಮತ್ತು 3 ವಿಕೆಟಿಗೆ 555 ಡಿಕ್ಲೇರ್‌. ಶ್ರೀಲಂಕಾ-271 ಮತ್ತು 212 (ಫೆರ್ನಾಂಡೊ 102, ಡಿಕ್ವೆಲ್ಲ 65, ಏಂಜೆಲೋ ಮ್ಯಾಥ್ಯೂಸ್‌ 19, ನಸೀಮ್‌ ಶಾ 31ಕ್ಕೆ 5, ಯಾಸಿರ್‌ ಶಾ 84ಕ್ಕೆ 2 ವಿಕೆಟ್‌).
ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಅಬಿದ್‌ ಅಲಿ.

Advertisement

Udayavani is now on Telegram. Click here to join our channel and stay updated with the latest news.

Next