ಇಸ್ಲಮಾಬಾದ್: ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯ ಉಪ ಸ್ಪೀಕರ್ ಭಾನುವಾರ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸಿದ್ದಾರೆ. ಇದು ಸಂವಿಧಾನ ಮತ್ತು ದೇಶದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ತನ್ನ ವಿರುದ್ಧದ ಅವಿಶ್ವಾಸ ನಿರ್ಣಯವು ತಿರಸ್ಕಾರವಾದ ಆದ ಕೆಲವೇ ಕ್ಷಣಗಳಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, ಅಸೆಂಬ್ಲಿಗಳನ್ನು ವಿಸರ್ಜಿಸಲು ಅಧ್ಯಕ್ಷ ಆರಿಫ್ ಅಲ್ವಿ ಅವರಿಗೆ ಪ್ರಸ್ತಾವನೆಯನ್ನು ಕಳುಹಿಸಿರುವುದಾಗಿ ಹೇಳಿದರು. ಹೀಗಾಗಿ ಪಾಕಿಸ್ತಾನದಲ್ಲಿ ಚುನಾವಣೆ ನಡೆಸಲು ದಾರಿ ನಿರ್ಮಾಣವಾಗಿದೆ. ಅಲ್ಲಿಯವರೆಗೆ ಇಮ್ರಾನ್ ಖಾನ್ ಹಂಗಾಮಿ ಪ್ರಧಾನಿಯಾಗಿರಲಿದ್ದಾರೆ.
“ನಾನು ಅಸೆಂಬ್ಲಿಯನ್ನು ವಿಸರ್ಜಿಸುವಂತೆ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದೇನೆ. ಪ್ರಜಾಸತ್ತಾತ್ಮಕ ರೀತಿಯಲ್ಲಿ ಚುನಾವಣೆಗಳು ನಡೆಯಬೇಕು. ಚುನಾವಣೆಗೆ ಸಿದ್ಧರಾಗುವಂತೆ ಪಾಕಿಸ್ತಾನದ ಜನರಿಗೆ ನಾನು ಕರೆ ನೀಡುತ್ತೇನೆ” ಎಂದು ಇಮ್ರಾನ್ ಖಾನ್ ಹೇಳಿದರು.
ಇದನ್ನೂ ಓದಿ:ಒನ್ ಪ್ಲಸ್ ಫ್ಯಾನ್ಸ್ ಕಾಯುತ್ತಿದ್ದ ಒನ್ ಪ್ಲಸ್ 10 ಪ್ರೊ ಬಿಡುಗಡೆ: ಏನಿದರ ವಿಶೇಷತೆ?
“ಚುನಾವಣೆಗಳಿಗೆ ಸಿದ್ಧರಾಗಿ. ಯಾವುದೇ ಭ್ರಷ್ಟ ಶಕ್ತಿಗಳು ದೇಶದ ಭವಿಷ್ಯವನ್ನು ನಿರ್ಧರಿಸುವುದಿಲ್ಲ. ವಿಧಾನಸಭೆಗಳು ವಿಸರ್ಜಿಸಲ್ಪಟ್ಟಾಗ, ಮುಂದಿನ ಚುನಾವಣೆಯ ಕಾರ್ಯವಿಧಾನ ಮತ್ತು ಉಸ್ತುವಾರಿ ಸರ್ಕಾರವು ಪ್ರಾರಂಭವಾಗುತ್ತದೆ” ಎಂದು ಅವರು ಹೇಳಿದರು.
ಮುಂದಿನ 90 ದಿನದೊಳಗೆ ಹೊಸ ಚುನಾವಣೆಗಳನ್ನು ನಡೆಯಲಿದೆ ಎಂದು ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಫರೂಖ್ ಹಬೀಬ್ ಹೇಳಿದ್ದಾರೆ. ಈತನ್ಮಧ್ಯೆ ಅಧ್ಯಕ್ಷ ಅಲ್ವಿ ಅವರು ಪ್ರಧಾನಿ ಇಮ್ರಾನ್ ಖಾನ್ ಪ್ರಸ್ತಾಪವನ್ನು ಅನುಸರಿಸಿ ಎರಡೂ ಸಭೆಗಳನ್ನು ವಿಸರ್ಜಿಸಿದ್ದಾರೆ.