ಇಸ್ಲಾಮಾಬಾದ್/ಮೀರ್ ಪುರ್:ಮಾರಣಾಂತಿಕ ಕೋವಿಡ್ 19 ವೈರಸ್ ಹರಡುವಿಕೆಗೆ ಸಂಬಂಧಿಸಿದಂತೆ ಚೀನಾ, ಅಮೆರಿಕ ನಡುವೆ ಆರೋಪ ಪ್ರತ್ಯಾರೋಪ ನಡೆಯುತ್ತಿದ್ದರೆ, ಮತ್ತೊಂದೆಡೆ ಪಾಕಿಸ್ತಾನ ಸೇನೆ ನೂರಾರು ಕೋವಿಡ್ ಪೀಡಿತ ರೋಗಿಗಳನ್ನು ಪಂಜಾಬ್
ಪ್ರಾಂತ್ಯದಿಂದ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ಮತ್ತು ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರದೇಶಕ್ಕೆ ತಂದು ಕೂಡಿಹಾಕುತ್ತಿದ್ದು, ಈ ಬಗ್ಗೆ ಸ್ಥಳೀಯರು ಪಾಕ್ ವಿರುದ್ಧ ತೀವ್ರ ಆಕ್ರೋಶವ್ಯಕ್ತಪಡಿಸುತ್ತಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಪಿಒಕೆ ಮೂಲಗಳ ಪ್ರಕಾರ,ಸೇನಾ ನೆಲೆಗಳ ಹಾಗೂ ಸೇನಾ ಕುಟುಂಬದ ನಿವಾಸಗಳ ಸುತ್ತಮುತ್ತ ಕೋವಿಡ್ 19 ರೋಗಿಗಳು ಇರಬಾರದು. ಪಂಜಾಬ್ ಪ್ರಾಂತ್ಯದಲ್ಲಿರುವ ಎಲ್ಲಾ ಕೋವಿಡ್ ಸೋಂಕಿತರನ್ನು ಮೀರ್ ಪುರ್ ಹಾಗೂ ಪಾಕ್ ಆಕ್ರಮಿತ ಪ್ರದೇಶಗಳಲ್ಲಿ ಕ್ವಾರಂಟೈನ್ ಶಿಬಿರ ನಿರ್ಮಿಸಿ ಅಲ್ಲಿ ಕೂಡಿಹಾಕುವಂತೆ ಪಾಕ್ ಸೇನೆ ಫರ್ಮಾನು ಹೊರಡಿಸಿತ್ತಂತೆ!
ಸೇನೆಯ ವಾಹನಗಳಲ್ಲಿ ಅಪಾರ ಪ್ರಮಾಣದ ಕೋವಿಡ್ 19 ಸೋಂಕು ಪೀಡಿತರನ್ನು ತುಂಬಿಕೊಂಡು ಮೀರ್ ಪುರ್ ನಗರ ಮತ್ತು ಪಿಒಕೆ, ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರದೇಶಗಳಲ್ಲಿ ತಂದು ಬಿಡುತ್ತಿರುವುದಾಗಿ ವರದಿ ತಿಳಿಸಿದೆ. ಇದರಿಂದ ಆಕ್ರೋಶಗೊಂಡ ಸ್ಥಳೀಯ ನಿವಾಸಿಗಳು ಪಾಕಿಸ್ತಾನದ ಕೋವಿಡ್ 19 ರೋಗಿಗಳು ಹಾಗೂ ಕ್ವಾರಂಟೈನ್ ಸೆಂಟರ್ ಗಳನ್ನು ನಿರ್ಮಿಸುತ್ತಿರುವುದರ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಪಿಒಕೆ ಹಾಗೂ ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರದೇಶಗಳಲ್ಲಿ ಈಗಾಗಲೇ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಆಸ್ಪತ್ರೆಯೂ, ವೈದ್ಯಕೀಯ ಸಿಬ್ಬಂದಿಗಳು ಇಲ್ಲ. ಪಂಜಾಬ್ ಪ್ರಾಂತ್ಯದ ಕೋವಿಡ್ 19 ಸೋಂಕಿತರನ್ನು ತಂದು ಇಲ್ಲಿ ಕೂಡಿಹಾಕಿದರೆ ಇಡೀ ಪ್ರದೇಶವೇ ಕೋವಿಡ್ 19 ಸೋಂಕಿತರಾಗಬೇಕಾಗಲಿದೆ ಎಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಇದು ಕಾಶ್ಮೀರಿ ಜನರಿಗೆ ಅಪಾಯದ ಕರೆಗಂಟೆಯಾಗಿದೆ ಎಂದು ಎಚ್ಚರಿಸಿದ್ದಾರೆ.
ಏತನ್ಮಧ್ಯೆ ಪಾಕಿಸ್ತಾನದ ಸೇನೆ ಪಿಒಕೆ ಮತ್ತು ಗಿಲ್ಗಿಟ್ ಬಾಲ್ಟಿಸ್ತಾನ್ ಜನರ ಪ್ರತಿಭಟನೆಯನ್ನು ಲೆಕ್ಕಿಸದೇ ಕ್ವಾರಂಟೈನ್ ಸೆಂಟರ್ ನಲ್ಲಿ ಸಾವಿರಾರು ಜನರನ್ನು ತಂದು ಕೂಡಿ ಹಾಕಿರುವುದಾಗಿ ವರದಿ ತಿಳಿಸಿದೆ. ಪಾಕ್ ಆರ್ಮಿಗೆ ಪಂಜಾಬ್ ಪ್ರಾಂತ್ಯ ಮುಖ್ಯ ವಿನಃ ಪಿಒಕೆ ಅಲ್ಲ ಎಂದು ವರದಿ ವಿಶ್ಲೇಷಿಸಿದೆ.
ಸಣ್ಣ ಖಾಯಿಲೆಗೂ ಚಿಕಿತ್ಸೆ ನೀಡುವ ಪ್ರಾಥಮಿಕ ಆರೋಗ್ಯ ಕೇಂದ್ರವೂ ಪಿಒಕೆ, ಗಿಲ್ಗಿಟ್ ಪ್ರದೇಶದಲ್ಲಿ ಕಷ್ಟ. ಇಂತಹ ಪ್ರದೇಶದಲ್ಲಿ ಕೋವಿಡ್ 19 ಸೋಂಕು ಹರಡಿದರೆ ಮುಂದೆ ನಮ್ಮ ಕಥೆ ಏನು ಎಂದು ಮುಜಾಫರ್ ಬಾದ್ ನಿವಾಸಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.