Advertisement

ಯುದ್ಧ ಬಗ್ಗೆ ಪಾಕ್‌ ಸರ್ಕಾರ, ಸೇನೆಯಲ್ಲೇ ಎದ್ದ ಗೊಂದಲ

06:00 AM Sep 08, 2018 | Team Udayavani |

ಇಸ್ಲಾಮಾಬಾದ್‌: ಭಾರತದ ಜತೆಗೆ ಉತ್ತಮ ಬಾಂಧವ್ಯ ಹೊಂದಿರಬೇಕೇ ಬೇಡವೇ ಎಂಬ ಬಗ್ಗೆ ಪಾಕಿಸ್ತಾನ ಸರ್ಕಾರ ಮತ್ತು ಸೇನೆಯ ನಡುವಿನ ಅಭಿಪ್ರಾಯ ಭೇದ ಮತ್ತೂಮ್ಮೆ ಬಟಾಬಯಲಾಗಿದೆ. ಭಾರತ ಸೇರಿದಂತೆ ಯಾವುದೇ ರಾಷ್ಟ್ರದ ಜತೆಗೆ ಯುದ್ಧ ಸಾರುವುದಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದರೆ, ಅಲ್ಲಿನ ಸೇನಾ ಮುಖ್ಯಸ್ಥ ಜ.ಖಮರ್‌ ಜಾವೇದ್‌ ಬಾಜ್ವಾ ಗಡಿಯಾಚೆಗಿನ ದಾಳಿಗೆ ರಕ್ತವನ್ನೇ ಹರಿಸಬೇಕು ಎಂದು ಗುಡುಗಿದ್ದಾರೆ.

Advertisement

ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌, ನೆರೆಯ ದೇಶಗಳ ಜತೆ ಮುಂದಿನ ದಿನಗಳಲ್ಲಿ ಯುದ್ಧವನ್ನೇ ಮಾಡುವುದಿಲ್ಲ. ಪಾಕಿಸ್ತಾನ್‌ ತೆಹ್ರೀಕ್‌-ಇ-ಇನ್ಸಾಫ್ ನೇತೃತ್ವದ ಸರ್ಕಾರದ ವಿದೇಶಾಂಗ ನೀತಿಯೇ ಅದು ಎಂದಿದ್ದಾರೆ.  ರಾವಲ್ಪಿಂಡಿಯಲ್ಲಿರುವ ಸೇನೆಯ ಪ್ರಧಾನ ಕಚೇರಿಯಲ್ಲಿ ಆಯೋಜಿಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಇಮ್ರಾನ್‌ ಖಾನ್‌ ಮಾತನಾಡಿದ್ದಾರೆ. “ಆರಂಭದಿಂದಲೇ ಯುದ್ಧಕ್ಕೆ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಯಾವುದೇ ದೇಶದ ಜತೆಗೆ ಯುದ್ಧದಲ್ಲಿ ಸಹಭಾಗಿತ್ವ ಹೊಂದುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. 

ಭಾರತದ ಕ್ರೂರತೆ: ಇದೇ ವೇಳೆ, ಕಾಶ್ಮೀರ ವಿಚಾರ ಪ್ರಸ್ತಾಪ ಮಾಡಿದ ಮಾಡಿದ ಪಾಕ್‌ ಪಿಎಂ, ಅಲ್ಲಿ ಭಾರತ ಅತ್ಯಂತ ಕ್ರೂರತನದಿಂದ ವರ್ತಿಸುತ್ತಿದೆ. ಅದನ್ನು ತಡೆಯಲು ವಿಶ್ವದ ರಾಷ್ಟ್ರಗಳು ಮುಂದಾಗಬೇಕು. ಕಾಶ್ಮೀರ ವಿಚಾರದ ಬಗ್ಗೆ ವಿಶ್ವಸಂಸ್ಥೆ ನಿರ್ಣಯ ಕೈಗೊಳ್ಳಬೇಕು ಎಂದಿದ್ದಾರೆ. ಜತೆಗೆ, ಭಯೋತ್ಪಾದನೆಯಿಂದಾಗಿ ಪಾಕಿಸ್ತಾನವೂ ನಲುಗಿ ಹೋಗಿದೆ. ಸುಮಾರು 70 ಸಾವಿರಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದಿದ್ದಾರೆ ಇಮ್ರಾನ್‌ಖಾನ್‌.

ಭಿನ್ನಾಭಿಪ್ರಾಯವೇ ಇಲ್ಲ: ಪ್ರಬಲವಾಗಿರುವ ಪಾಕಿಸ್ತಾನ ಸೇನೆ ಮತ್ತು ಸರ್ಕಾರದ ನಡುವೆ ಭಿನ್ನಾಭಿಪ್ರಾಯ ಇದೆ ಎಂಬ ವಿಚಾರವನ್ನು ಅವರು ತಳ್ಳಿಹಾಕಿದ್ದಾರೆ. ಅದು ಪಾಕಿಸ್ತಾನದ ಒಂದು ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.  

ನಮ್ಮ ಸೈನಿಕರ ನೆತ್ತ ರಿಗೆ ಪ್ರತೀಕಾರ: ಜ. ಬಾಜ್ವಾ ಇನ್ನೊಂದೆಡೆ, ಅದೇ ಕಾರ್ಯಕ್ರಮದಲ್ಲಿ ಮಾತನಾಡಿದ ಪಾಕ್‌ ಸೇನಾ ಮುಖ್ಯಸ್ಥ ಬಾಜ್ವಾ, ಗಡಿಯಾಚೆಯಿಂದ ಉಂಟಾಗುತ್ತಿರುವ ದಾಳಿ ನಿಲ್ಲಿಸಲು ರಕ್ತವನ್ನೇ ಹರಿಸಬೇಕು ಎಂದು  ಗುಡುಗಿದ್ದಾರೆ. ಸೆ.6 ಎನ್ನುವುದು ಪಾಕಿಸ್ತಾನದ ಸೇನೆಗೆ ಪ್ರಮುಖವಾದ ದಿನ ಎಂದ ಅವರು, 1965 ಮತ್ತು 1971ರಲ್ಲಿ ಭಾರತದ ಜತೆಗಿನ ಯುದ್ಧವನ್ನು ಪ್ರಸ್ತಾಪಿಸಿ, “ಈ ಎರಡು ಯುದ್ಧಗಳಿಂದ ಹಲವು ಪಾಠಗಳನ್ನು ಕಲಿತಿದ್ದೇವೆ. ಆರ್ಥಿಕವಾಗಿ ಸಂಕಷ್ಟ ಸ್ಥಿತಿಯಲ್ಲಿದ್ದರೂ ಪರಮಾಣು ಶಸ್ತ್ರಾಸ್ತ್ರ ಹೊಂದಿದ ದೇಶವಾಗಿದ್ದೇವೆ. ಭಾರತ ಆಕ್ರಮಿತ ಕಾಶ್ಮೀರದಲ್ಲಿ ಶತ್ರುಗಳ ವಿರುದ್ಧ ಜನ ದಿಟ್ಟತನದಿಂದ ಹೋರಾಡುತ್ತಿದ್ದಾರೆ. ನಮ್ಮ ಸೈನಿಕರ ರಕ್ತಕ್ಕೆ ರಕ್ತದಿಂದಲೇ ಪ್ರತೀಕಾರ ತೀರಿಸಬೇಕು’ ಎಂದು ಭಾರತಕ್ಕೆ ಎಚ್ಚರಿಕೆಯನ್ನೂ ನೀಡಿದ್ದಾರೆ. 

Advertisement

ವೀಸಾ ಇಲ್ಲದೆ ಪ್ರಯಾಣಕ್ಕೆ ಅವಕಾಶ
ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿರುವ ಕರ್ತಾರ್ಪುರ್‌ ಗುರುದ್ವಾರಕ್ಕೆ ಸಿಖ್‌ ಸಮುದಾಯದವರಿಗೆ ವೀಸಾ ಇಲ್ಲದೆ ಪ್ರಯಾಣಿಸಲು ಇಮ್ರಾನ್‌ ಖಾನ್‌ ಸರ್ಕಾರ ಅವಕಾಶ ನೀಡಿದೆ. ಯಾವ ದಿನದಿಂದ ನಿಯಮ ಜಾರಿಯಾಗಲಿದೆ ಎಂಬ ಬಗ್ಗೆ ಶೀಘ್ರದಲ್ಲಿಯೇ ದಿನಾಂಕ ಘೋಷಣೆ ಮಾಡಬೇಕಾಗಿದೆ. ಈ ಕುರಿತು ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಸಿಧು ಅವರೂ ಮಾಹಿತಿ ನೀಡಿದ್ದು, ಪಾಕಿಸ್ತಾನವು ಭಾರತದೊಂದಿಗಿನ ಮಾತುಕತೆಗೆ ಎದುರು ನೋಡುತ್ತಿದೆ ಎಂದಿದ್ದಾರೆ. ಇದೇ ವೇಳೆ, ಯುದ್ಧಕ್ಕೆ ಪ್ರಚೋದನೆ ನೀಡುವಂತೆ ಮಾತನಾಡಿರುವ ಪಾಕ್‌ ಸೇನಾ ಮುಖ್ಯಸ್ಥರ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡಲು ಸಿಧು ನಿರಾಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next