ಕರಾಚಿ: ಭಾರೀ ಮಳೆಯಿಂದಾಗಿ ಲಾಹೋರ್ ವಿಮಾನ ನಿಲ್ದಾಣದಲ್ಲಿ ಇಳಿಯಲು ಸಾಧ್ಯವಾಗದ ಪಾಕಿಸ್ತಾನ್ ಇಂಟರ್ ನ್ಯಾಷನಲ್ ಏರ್ಲೈನ್ಸ್ ವಿಮಾನವೊಂದು ಭಾರತದ ವಾಯು ಪ್ರದೇಶದಲ್ಲಿ ಸುಮಾರು 10 ನಿಮಿಷಗಳ ಕಾಲ ಹಾರಾಟ ನಡೆಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ನಂತರ ಭಾರತದ ಪಂಜಾಬ್ ಮೇಲಿನಿಂದ 125 ಕಿಲೋಮೀಟರ್ ಪ್ರಯಾಣಿಸಿ ಪಾಕಿಸ್ತಾನಕ್ಕೆ ಮರಳಿತು.
PK-248 ವಿಮಾನವು ಮೇ 4 ರಂದು ರಾತ್ರಿ 8 ಗಂಟೆಗೆ ಮಸ್ಕತ್‌ನಿಂದ ಲಾಹೋರ್‌ಗೆ ಆಗಮಿಸಿದಾಗ ಭಾರೀ ಮಳೆಯಾಗುತ್ತಿತ್ತು. ಪೈಲಟ್ ರಾತ್ರಿ 8:05 ಕ್ಕೆ ಅಲ್ಲಾಮಾ ಇಕ್ಬಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸಿದರು ಆದರೆ ಬೋಯಿಂಗ್ 777 ವಿಮಾನವು ಅಸ್ಥಿರಗೊಂಡು ಲ್ಯಾಂಡ್ ಮಾಡಲು ಸಾಧ್ಯವಾಗಲಿಲ್ಲ.
ಏರ್ ಟ್ರಾಫಿಕ್ ಕಂಟ್ರೋಲರ್‌ನ ಸೂಚನೆಗಳ ಮೇರೆಗೆ ಪೈಲಟ್ ಗೋ-ರೌಂಡ್ ವಿಧಾನವನ್ನು ಪ್ರಾರಂಭಿಸಿದರು, ಈ ಸಮಯದಲ್ಲಿ ಅವರು ಭಾರೀ ಮಳೆ ಮತ್ತು ಕಡಿಮೆ ಎತ್ತರದ ಕಾರಣ ದಾರಿ ತಪ್ಪಿದರು. ಈ ವಿಮಾನವು ಪಾಕಿಸ್ತಾನದ ಕಾಲಮಾನ ರಾತ್ರಿ 8:11ಕ್ಕೆ ಪಂಜಾಬ್‌ನ ಬಧಾನಾ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಭಾರತೀಯ ವಾಯುಪ್ರದೇಶವನ್ನು ಪ್ರವೇಶಿಸಿತು.
ಬೋಯಿಂಗ್ 777 ವಿಮಾನವು ಗಂಟೆಗೆ 292 ಕಿಲೋಮೀಟರ್ ವೇಗದಲ್ಲಿ 13,500 ಅಡಿ ಎತ್ತರದಲ್ಲಿ ಚಲಿಸುತ್ತಿತ್ತು. ಅಮೃತಸರದಿಂದ 37 ಕಿಮೀ ದೂರದಲ್ಲಿರುವ ವಿಮಾನವು ಭಾರತ ಪ್ರವೇಶಿಸಿದ ಸ್ಥಳದಲ್ಲಿ ಚೀನ ಛಿನಾ ಬಿಧಿ ಚಾಂದ್ ಗ್ರಾಮ ಎಂದು ಗುರುತಿಸಲಾಗಿದೆ.
ಭಾರತೀಯ ವಾಯುಪ್ರದೇಶದಲ್ಲಿ ಹಾರಾಡುತ್ತಿದ್ದಾಗ ಕ್ಯಾಪ್ಟನ್ ವಿಮಾನವನ್ನು 20,000 ಅಡಿ ಎತ್ತರಕ್ಕೆ ಕೊಂಡೊಯ್ದರು. ಭಾರತದ ಪಂಜಾಬ್‌ನ ತರನ್ ಸಾಹಿಬ್ ಮತ್ತು ರಸುಲ್‌ಪುರದ ಮೂಲಕ 40 ಕಿಮೀ ಪ್ರಯಾಣಿಸಿದ ನಂತರ ವಿಮಾನವು ನೌಶೆಹ್ರಾ ಪನ್ನುವಾನ್‌ನಿಂದ ಮೂಲಕ ಪಾಕಿಸ್ತಾನಕ್ಕೆ ಮರಳಿತು.
ಈ ಬಗ್ಗೆ ಭಾರತ ಇನ್ನೂ ಯಾವುದೇ ಸ್ಷಷ್ಟನೆ ನೀಡಿಲ್ಲ.