ಲಾಹೋರ್: ಬರೋಬ್ಬರಿ 24 ವರ್ಷಗಳ ಬಳಿಕ ಪಾಕಿಸ್ಥಾನಕ್ಕೆ ಟೆಸ್ಟ್ ಸರಣಿಯನ್ನು ಆಡಲು ಬಂದ ಆಸ್ಟ್ರೇಲಿಯ, ಇದನ್ನು ಸ್ಮರಣೀಯವಾಗಿ ಮುಗಿಸಿದೆ.
ಲಾಹೋರ್ ಟೆಸ್ಟ್ ಪಂದ್ಯವನ್ನು 115 ರನ್ನುಗಳಿಂದ ಗೆದ್ದು ಸರಣಿಯನ್ನು 1-0 ಅಂತರದಿಂದ ತನ್ನದಾಗಿಸಿಕೊಂಡಿದೆ.
ಗೆಲುವಿಗೆ 351 ರನ್ ಪಡೆದಿದ್ದ ಪಾಕಿ ಸ್ಥಾನ, ಅಂತಿಮ ಅವಧಿಯ ಆಟದಲ್ಲಿ ನಾಟಕೀಯ ಕುಸಿತ ಅನುಭವಿಸಿ 235ಕ್ಕೆ ಆಲೌಟ್ ಆಯಿತು. ಟೀ ವೇಳೆ ಪಾಕ್ 5 ವಿಕೆಟಿಗೆ 190 ರನ್ ಗಳಿಸಿ ಡ್ರಾ ಸಾಧ್ಯತೆಯನ್ನು ತೆರೆದಿರಿಸಿತ್ತು. ಆಗ ನಾಯಕ ಬಾಬರ್ ಆಜಂ ಕ್ರೀಸ್‌ನಲ್ಲಿದ್ದರು.
ಆದರೆ ಕೊನೆಯ ಅವಧಿಯಲ್ಲಿ ಸ್ಪಿನ್ನರ್ ನಥನ್ ಲಿಯಾನ್ ಘಾತಕ ಸ್ಪೆಲ್ ನಡೆಸಿ ಪಂದ್ಯದ ಗತಿಯನ್ನೇ ಬದಲಿಸಿದರು. ಲಿಯಾನ್ 83 ರನ್ ನೀಡಿ 5 ವಿಕೆಟ್ ಉಡಾಯಿಸಿದರು.
ಕಳೆದ ಕರಾಚಿ ಟೆಸ್ಟ್ ಪಂದ್ಯದಲ್ಲಿ 171ರಷ್ಟು ಓವರ್‌ಗಳನ್ನು ನಿಭಾಯಿಸಿ ಸೋಲಿನಿಂದ ಪಾರಾಗಿದ್ದ ಪಾಕಿಸ್ಥಾನಕ್ಕೆ ಇದಕ್ಕಿಂತ ಸುಲಭದ್ದಾದ ಲಾಹೋರ್ ಟೆಸ್ಟ್ ಪಂದ್ಯವನ್ನು ಉಳಿಸಿಕೊಳ್ಳಲಾಗಲಿಲ್ಲ!
ಕರಾಚಿ ಪಂದ್ಯದ ದ್ವಿತೀಯ ಇನ್ನಿಂಗ್ಸ್ ನಲ್ಲಿ ಬಾಬರ್ ಆಜಂ 196 ರನ್ ಬಾರಿಸಿ ತಂಡವನ್ನು ಬಚಾಯಿಸಿದ್ದರು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-391 ಮತ್ತು 3 ವಿಕೆಟಿಗೆ 227 ಡಿಕ್ಲೇರ್. ಪಾಕಿಸ್ಥಾನ-268 ಮತ್ತು 235 (ಇಮಾಮ್ 70, ಬಾಬರ್ 55, ಲಿಯಾನ್ 83ಕ್ಕೆ 5, ಕಮಿನ್ಸ್ 23ಕ್ಕೆ 3). ಪಂದ್ಯಶ್ರೇಷ್ಠ: ಪ್ಯಾಟ್ ಕಮಿನ್ಸ್. ಸರಣಿಶ್ರೇಷ್ಠ: ಉಸ್ಮಾನ್ ಖ್ವಾಜಾ.