ವಾಷಿಂಗ್ಟನ್ : ಪಾಕಿಸ್ಥಾನದ ಉಗ್ರ ಸಮೂಹಗಳು ಭಾರತ ಮತ್ತು ಅಫ್ಘಾನಿಸ್ಥಾನವನ್ನು ಗುರಿ ಇರಿಸಿ ಭಯೋತ್ಪಾದಕ ದಾಳಿ ನಡೆಸುವುದನ್ನು ಮುಂದುವರಿಸಲಿವೆ. ಭಾರತದಲ್ಲಿ ಪಾಕಿಸ್ಥಾನದ ಉಗ್ರರು ಕೋಮು ಗಲಭೆಗಳನ್ನು ಸೃಷ್ಟಿಸುವ ಹುನ್ನಾರ ಹೊಂದಿವೆ ಎಂದು ಅಮೆರಿಕದ ರಾಷ್ಟ್ರೀಯ ಗುಪ್ತಚರ ದಳದ ನಿರ್ದೇಶಕ ಡ್ಯಾನ್ ಕೋಟ್ಸ್, ಸೆನೆಟ್ ಗೆ ಸಲ್ಲಿಸಿರುವ ಲಿಖೀತ ವರದಿಯಲ್ಲಿ ಎಚ್ಚರಿಸಿದ್ದಾರೆ.
2019ರಲ್ಲಿ ದಕ್ಷಿಣ ಏಶ್ಯದ ದೇಶಗಳಲ್ಲಿ ಹಲವಾರು ಪ್ರಮುಖ ಘಟನೆಗಳು ನಡೆಯಲಿಕ್ಕಿವೆ. ಅಫ್ಘಾನಿಸ್ಥಾನದಲ್ಲಿ ಜುಲೈ ಮಧ್ಯಭಾಗದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆ, ಅದಕ್ಕೆ ಮೊದಲೇ ನಡೆಯಲಿರುವ ಭಾರತೀಯ ಸಂಸತ್ ಚುನಾವಣೆ ಇವುಗಳಲ್ಲಿ ಮುಖ್ಯವಾಗಿವೆ ಎಂದು ಕೋಟ್ಸ್ ಗುಪ್ತಚರ ವರದಿ ಹೇಳಿದೆ.
ಅಂತೆಯೇ ತಾಲಿಬಾನ್ ಉಗ್ರರು ಭಾರೀ ದೊಡ್ಡ ಮಟ್ಟದ ಭಯೋತ್ಪಾದಕ ದಾಳಿಗಳನ್ನು ಅಪಾ^ನಿಸ್ಥಾನದಲ್ಲಿ ನಡೆಸಲಿದ್ದಾರೆ. ಪಾಕ್ ಮೂಲದ ಉಗ್ರರು ಭಾರತದಲ್ಲಿ ಮಹಾ ಚುನಾವಣೆಯ ಸಂದರ್ಭದಲ್ಲಿ ಕೋಮು ಗಲಭೆಗಳನ್ನು ಸೃಷ್ಟಿಸುವ ಹುನ್ನಾರ ಹೊಂದಿದ್ದಾರೆ.
ಪಾಕ್ ಸರಕಾರ ತನ್ನ ನೆಲದಿಂದ ಕಾರ್ಯಾಚರಿಸುತ್ತಿರುವ ಉಗ್ರ ಸಮೂಹಗಳನ್ನು ಮಟ್ಟ ಹಾಕಲು ಮೀನ ಮೇಷ ಎಣಿಸುತ್ತಿದೆ. ಇವೆಲ್ಲದರ ಪರಿಣಾಮವಾಗಿ ದಕ್ಷಿಣ ಏಶ್ಯ ದೇಶಗಳಲ್ಲಿ ಇಸ್ಲಾಮಿಕ್ ಉಗ್ರರಿಂದಾಗಿ ವ್ಯಾಪಕ ಕ್ಷೋಭೆ ಕಂಡು ಬರಲಿದೆ ಎಂದು ಕೋಟ್ಸ್ ವರದಿ ಹೇಳಿದೆ.