ಜಮ್ಮು : ಪಾಕ್ ಪಡೆಗಳು ಜಮ್ಮು, ಸಾಂಬಾ ಮತ್ತು ಪೂಂಚ್ ಜಿಲ್ಲೆಯ ಗಡಿಭಾಗದಲ್ಲಿನ ಭಾರತೀಯ ಸೇನೆಯ ಹೊರ ಠಾಣೆಗಳನ್ನು ಗುರಿ ಇರಿಸಿ ಶೆಲ್ ದಾಳಿ ನಡೆಸುತ್ತಿದ್ದು ಇದರ ಪರಿಣಾಮವಾಗಿ ಇಬ್ಬರು ಬಿಎಸ್‌ಎಫ್ ಜವಾನರು ಮತ್ತು ಇತರ ಐವರು ಪೌರರು ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪಾಕ್ ಪಡೆಗಳು ಭಾರತದ ಅಂತಾರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯಲ್ಲಿ ನಿರಂತರವಾಗಿ ಗುಂಡಿನ ಮತ್ತು ಶೆಲ್ ದಾಳಿ ನಡೆಸುತ್ತಿರುವುದರಿಂದ ಈ ಪ್ರದೇಶದ ನೂರಾರು ನಿವಾಸಿಗಳು ತಮ್ಮ ಮನೆಗಳಿಂದ ಪಲಾಯನ ಮಾಡಿದ್ದಾರೆ.
ಪಾಕ್ ಪಡೆಗಳು ನಿನ್ನೆ ಸಂಜೆಯಿಂದೀಚೆಗೆ ಆರ್ನಿಯಾ, ಆರ್ ಎಸ್ ಪುರ ಮತ್ತು ರಾಮಗಢ ವಿಭಾಗಗಳಲ್ಲಿ, ಜಮ್ಮು ಮತ್ತು ಸಾಂಭಾ ಜಿಲ್ಲೆಗಳಲ್ಲಿನ ಅಂತಾರಾಷ್ಟ್ರೀಯ ಗಡಿಯ ಉದ್ದಕ್ಕೂ ಶೆಲ್ ಮತ್ತು ಗುಂಡಿನ ದಾಳಿಯನ್ನು ನಡೆಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕ್ ಶೆಲ್ಲಿಂಗ್‌ನಲ್ಲಿ ಆರ್ ಎಸ್ ಪುರ ವಿಭಾಗದ ಸಾತೋವಾಲಿ ಗ್ರಾಮದಲ್ಲಿ ಮೂವರು ಪೌರರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.ಆರ್ನಿಯಾ ವಿಭಾಗದಲ್ಲಿನ ತ್ರೇವಾ ಎಂಬಲ್ಲಿ ಇನ್ನೋರ್ವ ಗ್ರಾಮಸ್ಥ ಪಾಕ್ ಶೆಲ್ ದಾಳಿಯಲ್ಲಿ ಗಾಯಗೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕ್ ಪಡೆಗಳ ಗುಂಡಿನ ಹಾಗೂ ಶೆಲ್ ದಾಳಿಗೆ ಗುರಿಯಾಗಿರುವ ಗ್ರಾಮಗಳ ಸುಮಾರು 500 ವಾಸಿಗಳನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ಗ್ರಾಮಸ್ಥರಿಗೆ ಶಿಬಿರವೊಂದರಲ್ಲಿ ಆಸರೆ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಆರ್ನಿಯಾ ಮತ್ತು ಆರ್ ಎಸ್ ಪುರ ವಲಯದಲ್ಲಿ ನಡೆಯುತ್ತಿರುವ ಪಾಕ್ ಗುಂಡಿನ ಹಾಗೂ ಶೆಲ್ ದಾಳಿಯ ಪರಿಣಾಮವಾಗಿ ಸುಮಾರು 20,000 ಜನರು ತಮ್ಮ ಮನೆಗಳನ್ನು ತ್ಯಜಿಸಿದ್ದಾರೆ.