ದುಬೈ: ಪಾಕಿಸ್ಥಾನ ವಿರುದ್ಧ ಸೋಲನುಭವಿಸಿದ ಬಳಿಕ ತೀವ್ರ ಟೀಕೆಗೊಳಗಾಗಿ, ಸಾಮಾಜಿಕ ಜಾಲತಾಣಿಗರ ದಾಳಿಗೆ ತುತ್ತಾಗಿರುವ ಟೀಂ ಇಂಡಿಯಾ ಬೌಲರ್ ಮೊಹಮ್ಮದ್ ಶಮಿ ಬೆಂಬಲಕ್ಕೆ ಪಾಕಿಸ್ಥಾನದ ಆಟಗಾರ ಮೊಹಮ್ಮದ್ ರಿಜ್ವಾನ್ ಧಾವಿಸಿದ್ದಾರೆ.
ಟಿ20 ವಿಶ್ವಕಪ್ ನ ಪಾಕಿಸ್ಥಾನ ಎದುರಿನ ಸೋಲಿನಲ್ಲಿ ಭಾರತದ ಬೌಲಿಂಗ್ ದಯನೀಯ ವೈಫಲ್ಯ ಕಂಡಿತ್ತು. ತಂಡದ ವೇಗಿ ಮೊಹಮ್ಮದ್ ಶಮಿ 3.5 ಓವರ್‌ಗಳಲ್ಲಿ 43 ರನ್ ನೀಡಿ ದುಬಾರಿಯಾಗಿದ್ದರು. ಇದನ್ನು ಸಹಿಸದ ಜಾಲತಾಣಿಗರು, “ನೀವು ಪಾಕಿಸ್ಥಾನದ ಪರ ಆಡುವುದಿದ್ದರೆ ಭಾರತದ ಜೆರ್ಸಿ ತೊಡುವುದೇಕೆ..’ ಎಂದೆಲ್ಲ ಟೀಕಾಪ್ರಹಾರ ಮಾಡಿದ್ದರು.
ಇದನ್ನೂ ಓದಿ:ಪೋರ್ನ್ ಹಬ್ ನಲ್ಲಿ ಗಣಿತ ಪಾಠ ಮಾಡುವ ಟೀಚರ್! ವರ್ಷಕ್ಕೆ 2 ಕೋಟಿ ರೂ. ಸಂಪಾದನೆ
ಸದ್ಯ ಶಮಿ ಬೆಂಬಲಕ್ಕೆ ನಿಂತಿರುವ ಪಾಕ್ ಆಟಗಾರ ರಿಜ್ವಾನ್ ಟ್ವೀಟ್ ಮಾಡಿದ್ದು, “ಒಬ್ಬ ಆಟಗಾರನು ತನ್ನ ದೇಶಕ್ಕಾಗಿ ಮತ್ತು ಅವನ ಜನರಿಗಾಗಿ ಅನುಭವಿಸಬೇಕಾದ ಒತ್ತಡ, ಹೋರಾಟಗಳು ಮತ್ತು ತ್ಯಾಗಗಳು ಅಳೆಯಲಾಗದು. ಮೊಹಮ್ಮದ್ ಶಮಿ ಒಬ್ಬ ಸ್ಟಾರ್ ಆಟಗಾರ, ವಿಶ್ವದ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರು. ದಯವಿಟ್ಟು ನಿಮ್ಮ ಸ್ಟಾರ್ ಗಳನ್ನು ಗೌರವಿಸಿ. ಈ ಆಟವು ಜನರನ್ನು ಒಟ್ಟಿಗೆ ಸೇರಿಸಬೇಕೇ ಹೊರತು ವಿಭಜಿಸಬಾರದು” ಎಂದು ಬರೆದುಕೊಂಡಿದ್ದಾರೆ.
Related Articles
ಭಾರತೀಯ ಆಟಗಾರರಿಂದ ಬೆಂಬಲ: ಪಂದ್ಯದ ಬಳಿಕ ಶಮಿ ವಿರುದ್ಧ ಎದುರಾದ ಟೀಕೆಗಳಿಗೆ ಭಾರತೀಯ ಮಾಜಿ ಆಟಗಾರರು ಉತ್ತರಿಸಿದ್ದಾರೆ. ದಿಗ್ಗಜ ಆಟಗಾರ ಸಚಿನ್ ತೆಂಡುಲ್ಕರ್ ಅವರು “ನಾವು ಟೀಮ್ ಇಂಡಿಯಾವನ್ನು ಬೆಂಬಲಿಸುವಾಗ ತಂಡದ ಎಲ್ಲ ಆಟಗಾರರನ್ನೂ ಬೆಂಬಲಿಸುತ್ತೇವೆ. ಮೊಹಮ್ಮದ್ ಶಮಿ ವಿಶ್ವ ದರ್ಜೆಯ ಬೌಲರ್. ಇದು ಅವರ ದಿನವಾಗಿರಲಿಲ್ಲ, ಅಷ್ಟೇ. ನಾನು ಶಮಿ ಮತ್ತು ಟೀಮ್ ಇಂಡಿಯಾ ಪರವಾಗಿ ನಿಲ್ಲುತ್ತೇನೆ” ಎಂದು ಹೇಳಿದ್ದರು.
“ಶಮಿ ಮೇಲಿನ ಆನ್‌ಲೈನ್ ಆಕ್ರಮಣ ಅತ್ಯಂತ ಆಘಾತಕಾರಿ. ಅವರೋರ್ವ ಚಾಂಪಿಯನ್ ಬೌಲರ್. ಆನ್‌ಲೈನ್‌ನಲ್ಲಿ ಗಲಭೆ ಎಬ್ಬಿಸುವವರಿಗಿಂತ ಹೆಚ್ಚಿನ ದೇಶಪ್ರೇಮ ಭಾರತದ ಕ್ಯಾಪ್ ಧರಿಸಿದವರ ಹೃದಯದಲ್ಲಿರುತ್ತದೆ. ಶಮಿ, ಮುಂದಿನ ಪಂದ್ಯದಲ್ಲಿ ನಿಮ್ಮ ತಾಕತ್ತು ತೋರಿಸಿ. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ’ ಎಂದು ಸೆಹವಾಗ್ ಆತ್ಮವಿಶ್ವಾಸ ತುಂಬಿದ್ದಾರೆ.