ವಾಷಿಂಗ್ಟನ್: 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಶಾಮೀಲಾಗಿರುವ ಪಾಕ್ ಮೂಲದ ಕೆನಡಾ ಉದ್ಯಮಿ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಬೇಕೆಂದು ಕೋರಿದ್ದ ಭಾರತದ ಮನವಿಗೆ ಗೆಲುವು ಸಿಕ್ಕಿದ್ದು, ಅಮೆರಿಕದ ಕೋರ್ಟ್ ಉಭಯ ದೇಶಗಳ ನಡುವಿನ ಹಸ್ತಾಂತರ ಒಪ್ಪಂದದ ಪ್ರಕಾರ ಭಾರತಕ್ಕೆ ಹಸ್ತಾಂತರಿಸಬಹುದು ಎಂದು ತೀರ್ಪು ನೀಡಿರುವುದಾಗಿ ವರದಿ ತಿಳಿಸಿದೆ.
ಆಗಸ್ಟ್ 15ರಂದು ಕೋರ್ಟ್ ನೀಡಿರುವ ಆದೇಶದ ಪ್ರಕಾರ, ಭಾರತ-ಅಮೆರಿಕ ನಡುವಿನ ಹಸ್ತಾಂತರ ಒಪ್ಪಂದದಂತೆ ರಾಣಾನ ಹಸ್ತಾಂತರಕ್ಕೆ ಯಾವುದೇ ಕಾನೂನು ತೊಡಕಿಲ್ಲ ಎಂದು ಸ್ಪಷ್ಟಪಡಿಸಿದೆ.
ರಾಣಾ ಸಲ್ಲಿಸಿದ ಮೇಲ್ಮನವಿ ಕುರಿತು ತೀರ್ಪು ನೀಡಿದ, ಒಂಬತ್ತನೇ ಸರ್ಕ್ಯೂಟ್ ನ ಅಮೆರಿಕದ ಮೇಲ್ಮನವಿ ನ್ಯಾಯಾಲಯದ ನ್ಯಾಯಾಧೀಶರ ಸಮಿತಿಯು ಕ್ಯಾಲಿಫೋರ್ನಿಯಾದ ಸೆಂಟ್ರಲ್ ಡಿಸ್ಟ್ರಿಕ್ಟ್ ನ ಜಿಲ್ಲಾ ನ್ಯಾಯಾಲಯವು ರಾಣಾನ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಜಾಗೊಳಿಸಿದ್ದು, ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ರಾಣಾ ಹಸ್ತಾಂತರಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಕೋರ್ಟ್ ಆದೇಶ ನೀಡಿರುವುದಾಗಿ ವರದಿ ವಿವರಿಸಿದೆ.
ಭಯೋತ್ಪಾದಕ ಚಟುವಟಿಕೆಯಲ್ಲಿ ಶಾಮೀಲಾಗಿರುವ ಆರೋಪಿಯ ಮೇಲ್ಮನವಿಗೆ ಸಂಬಂಧಿಸಿದಂತೆ ಭಿನ್ನ ತೀರ್ಪು ನೀಡಲು ಸಾಧ್ಯವಿಲ್ಲ ಎಂದು ಮೂವರು ನ್ಯಾಯಾಧೀಶರನ್ನೊಳಗೊಂಡ ಆಯೋಗ ಒಮ್ಮತದ ತೀರ್ಮಾನಕ್ಕೆ ಬಂದಿರುವುದಾಗಿ ವರದಿ ತಿಳಿಸಿದೆ.