ಇಸ್ಲಾಮಾಬಾದ್: ಕಳೆದ ಕೆಲವು ವರ್ಷಗಳಿಂದಲೂ ಭಾರತದ ರಾಜತಾಂತ್ರಿಕರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದ ಪಾಕಿಸ್ತಾನ ಈಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ಭಾರತ ಹಮ್ಮಿಕೊಂಡಿದ್ದ ಇಫ್ತಾರ್ ಕೂಟಕ್ಕೆ ಆಗಮಿಸಿದ ಅತಿಥಿಗಳನ್ನು ವಾಪಸ್ ಕಳುಹಿಸುವ ಉದ್ಧಟತನವನ್ನು ಪಾಕಿಸ್ತಾನ ಮೆರೆದಿದೆ.
ಶನಿವಾರ ಇಸ್ಲಾಮಾಬಾದ್‌ನಲ್ಲಿರುವ ಹೋಟೆಲ್ ಸೆರೆನಾದಲ್ಲಿ ಭಾರತೀಯ ಹೈಕಮಿಷನ್ ಇಫ್ತಾರ್ ಕೂಟವನ್ನು ಹಮ್ಮಿಕೊಂಡಿತ್ತು. ಹಲವು ಅತಿಥಿಗಳನ್ನು ಈ ಕೂಟಕ್ಕೆ ಆಹ್ವಾನಿಸಲಾಗಿತ್ತು.
ಆದರೆ ಹೋಟೆಲ್ ಪ್ರವೇಶಕ್ಕೂ ಮುನ್ನ ಭದ್ರತೆ ತಪಾಸಣೆಯ ನೆಪವೊಡ್ಡಿ ಒಂದಲ್ಲ ಒಂದು ಕಾರಣ ನೀಡಿ ಮುನ್ನೂರಕ್ಕೂ ಹೆಚ್ಚು ಅಧಿಕಾರಿಗಳನ್ನು ವಾಪಸ್ ಕಳುಹಿಸಲಾಗಿದೆ. ಅಲ್ಲದೆ, ಕೆಲವು ಅತಿಥಿಗಳಿಗೆ ಒಳಹೋಗಲು ಬಿಡದೆ, ‘ಕಾರ್ಯಕ್ರಮಕ್ಕೆ ನೀವು ಹಾಜರಾಗಬಾರದು’ ಎಂದು ಗದರಿಸಿ ವಾಪಸ್ ಕಳುಹಿಸಲಾಗಿದೆ. ಪತ್ರಕರ್ತರು ಸೇರಿದಂತೆ ಇನ್ನೂ ಹಲವರೊಂದಿಗೆ ದುರ್ವರ್ತನೆ ತೋರಲಾಗಿದೆ ಎಂದೂ ಹೇಳಲಾಗಿದೆ.
ಹೋಟೆಲ್ ಸೆರೆನಾವನ್ನು ಸುತ್ತುವರಿದಿದ್ದ ಭದ್ರತಾ ಅಧಿಕಾರಿಗಳು, ಕೆಲವು ಅತಿಥಿಗಳನ್ನು ತಳ್ಳಿದ, ಅವಹೇಳನಕಾರಿಯಾಗಿ ನಿಂದಿಸಿದ ಹಾಗೂ ಕೆಲವರಿಗೆ ದೈಹಿಕ ಹಲ್ಲೆ ನಡೆಸಿದ್ದೂ ವರದಿಯಾಗಿದೆ. ಇನ್ನೂ ಕೆಲವು ಅತಿಥಿಗಳ ಕೈಯ್ಯಲ್ಲಿದ್ದ ಮೊಬೈಲ್ ಫೋನುಗಳನ್ನೂ ಕಿತ್ತುಕೊಳ್ಳಲಾಗಿದೆ. ಒಟ್ಟಾರೆ ಪಾಕಿಸ್ತಾನದ ಸರ್ಕಾರಿ ಅಧಿಕಾರಿಗಳು, ಸಂಸದರು. ಮಾಧ್ಯಮ ಪ್ರತಿನಿಧಿಗಳು, ನಿವೃತ್ತ ಸೇನಾ ಅಧಿಕಾರಿಗಳು, ಉದ್ಯಮಿಗಳು ಹಾಗೂ ನಿವೃತ್ತ ರಾಜತಾಂತ್ರಿಕ ಅಧಿಕಾರಿಗಳು ಸೇರಿದಂತೆ ಸುಮಾರು 300 ಅತಿಥಿಗಳಿಗೆ ಕಾರ್ಯಕ್ರಮಕ್ಕೆ ಆಗಮಿಸದಂತೆ ತಡೆಯೊಡ್ಡಲಾಗಿದೆ. ಈ ಸಂಬಂಧ ಭಾರತದ ಹೈಕಮಿಷನರ್ ಅಜಯ್ ಬಿಸಾರಿಯಾ ಅತಿಥಿಗಳ ಕ್ಷಮೆ ಕೇಳಿದ್ದಾರೆ. ನಮ್ಮ ಅತಿಥಿಗಳನ್ನು ವಾಪಸ್ ಕಳುಹಿಸಿದ್ದಕ್ಕೆ ನಾವು ಕ್ಷಮೆ ಕೇಳುತ್ತೇವೆ. ಇಂತಹ ದೌರ್ಜನ್ಯಕಾರಿ ಕ್ರಮಗಳು ಅತ್ಯಂತ ಬೇಸರ ಮೂಡಿಸುವಂಥದ್ದು. ಇವು ಉಭಯ ದೇಶಗಳ ಮಾತುಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ ಎಂದಿದ್ದಾರೆ.
ಟ್ವೀಟ್ ಮೂಲಕ ಆಕ್ರೋಶ: ಕಾರ್ಯಕ್ರಮದ ಆಹ್ವಾನ ಪಡೆದ ಹಲವು ಅತಿಥಿಗಳು ಕಾರ್ಯಕ್ರಮಕ್ಕೆ ಹಾಜರಾಗದ ಬಗ್ಗೆ ವಿವಿಧ ಕಾರಣಗಳನ್ನು ನೀಡಿ ಟ್ವೀಟ್ ಮಾಡಿದ್ದಾರೆ. ಕೆಲವರು ವಿಪರೀತ ಪ್ರಶ್ನೆಗಳನ್ನು ಅಧಿಕಾರಿಗಳು ಕೇಳುತ್ತಿದ್ದರು ಎಂದು ಆಕ್ಷೇಪಿಸಿದರೆ, ಇನ್ನೂ ಕೆಲವು ಕಾರ್ಯಕ್ರಮ ರದ್ದಾಗಿದೆ ಎಂದು ಭದ್ರತಾ ಅಧಿಕಾರಿಗಳು ಹೇಳಿದ್ದಾರೆ ಎಂದೂ ಆರೋಪಿಸಿದ್ದಾರೆ. ಇನ್ನೊಂದೆಡೆ, ಅನಾಮಿಕ ವ್ಯಕ್ತಿಗಳು ಕರೆ ಮಾಡಿ ಕಾರ್ಯಕ್ರಮಕ್ಕೆ ಹಾಜರಾಗಬೇಡಿ ಎಂದು ಎಚ್ಚರಿಕೆ ನೀಡಿರುವುದಾಗಿಯೂ ಆರೋಪಿಸಿದ್ದಾರೆ.