ಹೊಸದಿಲ್ಲಿ: ಪುಲ್ವಾಮಾ ದಾಳಿಯನ್ನು ನಾವೇ ಮಾಡಿಸಿದ್ದು ಎಂದು ಹೇಳಿಕೊಂಡಿದ್ದ ಪಾಕಿಸ್ಥಾನ ಈಗ ಉಲ್ಟಾ ಹೊಡೆದಿದೆ. ಇಮ್ರಾನ್ ಖಾನ್ ನಾಯಕತ್ವದಲ್ಲಿ ನಡೆದ ಪುಲ್ವಾಮಾ ದಾಳಿಯ ಯಶಸ್ಸು ಇಡೀ ಪಾಕಿಸ್ಥಾನದ ಯಶಸ್ಸು ಎಂದು ಹೇಳಿಕೊಂಡಿದ್ದ ಫವಾದ್ ಚೌಧರಿ ಇದೀಗ ತಾನು ಹಾಗೆ ಹೇಳಿಕೊಂಡಿಲ್ಲ ಎಂದಿದ್ದಾರೆ.
ಇಂಡಿಯಾ ಟುಡೇ ವಾಹಿನಿಯ ಚರ್ಚೆಯಲ್ಲಿ ಮಾತನಾಡಿದ ಪಾಕ್ ಸಚಿವ ಫವಾದ್ ಚೌಧರಿ, “ನನ್ನ ಹೇಳಿಕೆಯನ್ನು ಹೇಗೆ ತಿರುಚಲಾಗಿದೆ ಎಂದು ನನಗೆ ಆಶ್ಚರ್ಯವಾಯಿತು. ಇದು ಹಾಸ್ಯಾಸ್ಪದ. ನಾನು ಫೆಬ್ರವರಿ 26, 2019 ರ ನಂತರ ನಡೆದ ಘಟನೆಗಳನ್ನು ಉಲ್ಲೇಖಿಸುತ್ತಿದ್ದೆ. ನನ್ನ ಭಾಷಣವನ್ನು ಪೂರ್ಣವಾಗಿ ಕೇಳಬೇಕೆಂದು ಎಲ್ಲರಿಗೂ ಸಲಹೆ ನೀಡುತ್ತೇನೆ ಎಂದಿದ್ದಾರೆ.
ಪಾಕ್ ಸಂಸತ್‌ನಲ್ಲಿ ಮಾತನಾಡಿದ್ದ ಫವಾದ್ ಚೌಧರಿ, “ಭಾರತದ ನೆಲದಲ್ಲೇ ನಾವು ಅವರನ್ನು ಹೊಡೆದುರುಳಿಸಿದೆವು. ಇಮ್ರಾನ್ ನಾಯಕತ್ವದಲ್ಲಿ ಪುಲ್ವಾಮಾ ದಾಳಿಯ ನಮ್ಮ ಯಶಸ್ಸು, ಇಡೀ ಪಾಕಿಸ್ಥಾನೀಯರ ಯಶಸ್ಸು. ನೀವು ಮತ್ತು ನಾವು ಕೂಡ ಈ ಯಶಸ್ಸಿನಲ್ಲಿ ಭಾಗಿಯಾಗಿದ್ದೇವೆ’ ಎಂದು ಹೇಳಿಕೊಂಡಿದ್ದರು. ಆದರೆ ಟಿವಿ ಚರ್ಚೆಯಲ್ಲಿ ತಮ್ಮ ಹೊಸ ವರಸೆ ತೋರಿಸಿರುವ ಫವಾದ್, ಭಾರತದಲ್ಲಿ ರಾಜಕೀಯ ಲಾಭಕ್ಕಾಗಿ ತನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ:ಭಾರತ ದಾಳಿ ನಡೆಸುವುದು ಎಂಬ ಭೀತಿಯಿಂದ ಅಭಿನಂದನ್ ವರ್ಧಮಾನ್ ಬಿಡುಗಡೆ ಮಾಡಿದ್ದ ಪಾಕ್!
ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ರನ್ನು ಬಿಡುಗಡೆ ಮಾಡದೇ ಹೋದರೆ ಭಾರತ ದಾಳಿ ನಡೆಸುತ್ತದೆ ಎಂಬ ಭೀತಿ ಎದುರಾಗಿತ್ತು ಎಂಬ ಪಿಎಂಎಲ್ ಎನ್ ಮುಖಂಡ ಅಯಾಝ್ ಸಾದಿಖ್ ಹೇಳಿಕೆಯ ಬಗ್ಗೆ ಉತ್ತರಿಸಿದ ಫವಾದ್, ಇದು ಕೇವಲ ರಾಜಕೀಯ, ಇದರಲ್ಲಿ ಭಾರತ ಖುಷಿ ಪಡುವ ವಿಚಾರವೇನಿಲ್ಲ. ನಾವು ಯುದ್ಧವನ್ನು ಬಯಸುವುದಿಲ್ಲ. ನಾನು ಸಭೆಯಲ್ಲಿದ್ದೆ. ಆ ರೀತಿಯ ಯಾವುದನ್ನೂ ಹೇಳಲಾಗಿಲ್ಲ. ಇದು ರಾಜಕೀಯ ಹೇಳಿಕೆ, ರಾಜಕಾರಣಿಗಳು ಪರಸ್ಪರ ದೋಷಾರೋಪಣೆ ಮಾಡುತ್ತಾರೆ. ಸಾದಿಖ್ ಸುಳ್ಳು ಹೇಳುತ್ತಿದ್ದಾರೆ. ಪ್ರಧಾನಿ ಮೋದಿ ಕೂಡ ಸುಳ್ಳು ಹೇಳುತ್ತಿದ್ದಾರೆ ಎಂದಿದ್ದಾರೆ.
ಮುಂದುವರಿದು, ನಾವು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತೇವೆ. ನಮಗೆ ಭಾರತದ ಬಗ್ಗೆ ಯಾವುದೇ ದ್ವೇಷವಿಲ್ಲ. ಆದರೆ ಬಿಜೆಪಿ ಪಾಕಿಸ್ತಾನ ವಿರೋಧಿ ಭಾವನೆಗಳ ಮೇಲೆ ಮತಗಳನ್ನು ಪಡೆಯುತ್ತಿದೆ ಎಂದು ಫವಾದ್ ಚೌಧರಿ ಹೇಳಿಕೊಂಡಿದ್ದಾರೆ.